ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶರಣಬಸಪ್ಪ ಕ್ಯಾತನಾಳ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಕಾರ್ಯಾಲಯ ದ ಉಪ ನಿರ್ದೇಶಕರುಗಳಾದ ಡಾ. ಎ.ಎಸ್.ರುದ್ರವಾಡಿ, ಶರಣಬಸಪ್ಪಾ ಗಣಜಲಖೇಡ್, ತಾಲೂಕು ಆರೋಗ್ಯಾಧಿಕಾರಿ. ಡಾ. ಮಾರುತಿ ಕಾಂಬಳೆ, ಜಿಲ್ಲಾ ಸಮೀಕ್ಷಣಾಧಿಕಾರಿ. ಡಾ. ರಾಕೇಶ ಕಾಂಬಳೆ. ಜಿಲ್ಲಾ ಸರ್ಕಾರಿ ಆಸ್ಪತ್ರೆ ಆರ್.ಎಂ.ಓ. ಡಾ. ಓಂ ಪ್ರಕಾಶ ಅಂಬುರೆ ಹಾಗೂ ವಿವಿಧ ಸಂಘಗಳು ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
- -ಜಿಲ್ಲಾಧಿಕಾರಿ ಬಿ. ಫೌಜೀಯಾ ತರನ್ನುಮ್
ಕಲಬುರಗಿ: ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ಯಶಸ್ವಿಯಾಗುತ್ತಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜೀಯಾ ತರನ್ನುಮ್ ಅವರು ತಿಳಿಸಿದರು.
ಮಂಗಳವಾರ ನಗರದ ಹಳೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಛೇರಿ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ, ಕ್ಷಯ ಮುಕ್ತ ಗ್ರಾಮ ಪಂಚಾಯತಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಟಿಬಿ ಮುಕ್ತ ಭಾರತ ಅಭಿಯಾನ 100 ದಿನಗಳ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಅವರು, ಕ್ಷಯರೋಗವು ಸ್ಪರ್ಶದಿಂದ ಹರಡುವುದಿಲ್ಲ. ಆದರೆ, ಸಮಾಜದಲ್ಲಿ ರೋಗಿಗಳ ಬಗ್ಗೆ ಇರುವ ತಾರತಮ್ಯ ಮತ್ತು ಭಯವನ್ನು ಹೋಗಲಾಡಿಸಬೇಕಿದೆ. ರೋಗಿಗಳಿಗೆ ಕುಟುಂಬದ ಬೆಂಬಲ ಅತ್ಯಗತ್ಯ ಎಂದರು.
ಈಗಾಗಲೇ ಜಿಲ್ಲೆಯಲ್ಲಿ 79 ಗ್ರಾಮ ಪಂಚಾಯತಿಗಳು ಕ್ಷಯಮುಕ್ತ ಎಂದು ಘೋಷಣೆಯಾಗಿವೆ. ಇದರಲ್ಲಿ 2023 ರಲ್ಲಿ 15, 2024 ರಲ್ಲಿ 21 ಮತ್ತು 2025-2026 ವರ್ಷದಲ್ಲಿ 43 ಪಂಚಾಯತಿಗಳು ಸೇರಿವೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗಕ್ಕೆ ಸಂಪೂರ್ಣ ಉಚಿತ ಚಿಕಿತ್ಸೆ ಮತ್ತು ಪರೀಕ್ಷೆ ಲಭ್ಯವಿದೆ. ಸತತ ಎರಡು ವಾರ ಕೆಮ್ಮು ಇದ್ದಲ್ಲಿ ತಕ್ಷಣ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕ್ಷಯರೋಗ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಶೇ. 90ಕ್ಕೂ ಹೆಚ್ಚಿದೆ. ಪ್ರತಿ ವರ್ಷ ಸುಮಾರು 80 ರಿಂದ 90 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಹೆಚ್ಚಿನ ಜನರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ನಿಕ್ಷಯ್ ಮಿತ್ರ’ ಯೋಜನೆಯಡಿ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ಮತ್ತು ಪ್ರೋಟೀನ್ ಪೌಡರ್ ನೀಡುತ್ತಿರುವ ಖಾಸಗಿ ವೈದ್ಯರು, ಆಸ್ಪತ್ರೆಗಳು ಮತ್ತು ಸಂಘ-ಸಂಸ್ಥೆಗಳ ಕಾರ್ಯವನ್ನು ಜಿಲ್ಲಾಧಿಕಾರಿಗಳು ಶ್ಲಾಘಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ಹಮ್ಮಿಕೊಳ್ಳಲಾದ 'ಟಿಬಿ ಮುಕ್ತ ಪಂಚಾಯಿತಿ' ಅಭಿಯಾನವು ಉತ್ತಮ ಫಲಿತಾಂಶ ನೀಡುತ್ತಿದ್ದು, ಈ ವರ್ಷ ಜಿಲ್ಲೆಯ ಒಟ್ಟು 43 ಗ್ರಾಮ ಪಂಚಾಯಿತಿಗಳನ್ನು ‘ಕ್ಷಯ ಮುಕ್ತ’ ಎಂದು ಘೋಷಿಸಲಾಗಿದೆ ಎಂದು ಹೇಳಿದರು.
ಕಳೆದ ವರ್ಷ 36 ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತವಾಗಿದ್ದವು, ಈ ಬಾರಿ ಆ ಸಂಖ್ಯೆ 43ಕ್ಕೆ ಏರಿರುವುದು ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿನ ಪ್ರಗತಿಯನ್ನು ತೋರಿಸುತ್ತದೆ. ಜಿಲ್ಲೆಯಲ್ಲಿ ಈವರೆಗೆ ಅಂದಾಜು 87,000 ಕ್ಕೂ ಹೆಚ್ಚು ಶಂಕಿತ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದು ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚಿನ ಸಾಧನೆಯಾಗಿದೆ. ಕ್ಷಯರೋಗವು ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ, ಇದು ಸಾಮಾಜಿಕ ಹೊಣೆಗಾರಿಕೆಯಾಗಿದೆ. ರೋಗ ಲಕ್ಷಣವಿರುವವರನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಕೊಡಿಸುವುದು ಮುಖ್ಯ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಚಂದ್ರಕಾಂತ ನರಬೋಳಿ ಅವರು ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯು ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ರಾಜ್ಯದ ಸರಾಸರಿ ಮಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
2022ರಲ್ಲಿ ರಾಜ್ಯ ಮಟ್ಟದಲ್ಲಿ 31ನೇ ಸ್ಥಾನದಲ್ಲಿದ್ದ ಕಲಬುರಗಿ ಜಿಲ್ಲೆ, ನಿರಂತರ ಪ್ರಯತ್ನದ ಫಲವಾಗಿ ಇಂದು 14-15ನೇ ಸ್ಥಾನಕ್ಕೆ ಏರಿದೆ. ಪ್ರಸ್ತುತ ಜಿಲ್ಲೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಪ್ರಕರಣಗಳನ್ನು ಗುರುತಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇ.ಎಸ್.ಐ.ಸಿ ಆಸ್ಪತ್ರೆ ಕ್ಷಯರೋಗ ನೋಡಲ್ ಅಧಿಕಾರಿ ಡಾ. ಲಾವಣ್ಯ ಪಿಟರ ಅವರು ಕ್ಷಯ ರೋಗದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ಕ್ಷಯರೋಗವು ಕೇವಲ ಶ್ವಾಸಕೋಶಕ್ಕೆ ಸೀಮಿತವಾಗಿರದೆ, ದೇಹದ ಕೂದಲು ಮತ್ತು ಉಗುರನ್ನು ಹೊರತುಪಡಿಸಿ ಉಳಿದೆಲ್ಲಾ ಭಾಗಗಳಿಗೂ ಹರಡಬಲ್ಲ ಮಾರಕ ಕಾಯಿಲೆಯಾಗಿದೆ ಎಂದು ಎಚ್ಚರಿಸಿದರು.
ಜಿಲ್ಲೆಯ ಕ್ಷಯರೋಗದ ಗಂಭೀರತೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಟಿಬಿ ಕಾಯಿಲೆಯು ಇಂದು ನಿನ್ನೆಯದಲ್ಲ, ಇದು ಸುಮಾರು ಐದು ಸಾವಿರ ವರ್ಷಗಳಿಗೂ ಹಳೆಯದಾದ ಇತಿಹಾಸ ಹೊಂದಿದೆ. ವಿಜ್ಞಾನಿಗಳು ಪ್ರಾಚೀನ ಈಜಿಪ್ಟನ 'ಮಮ್ಮಿ'ಗಳಲ್ಲಿಯೂ ಈ ರೋಗದ ಲಕ್ಷಣಗಳನ್ನು ಪತ್ತೆಹಚ್ಚಿದ್ದಾರೆ. ಈ ಕಾಯಿಲೆಯು ಮನುಕುಲವನ್ನು ಅತೀ ದೀರ್ಘಕಾಲದಿಂದ ಕಾಡುತ್ತಿರುವ 'ಬ್ರಹ್ಮರಾಕ್ಷ¸ ಇದ್ದಂತೆ ಎಂದು ಹೇಳಿದರು.
ಕ್ಷಯರೋಗದ ಚಿಕಿತ್ಸೆಯು ಕನಿಷ್ಠ ಆರು ತಿಂಗಳುಗಳ ಕಾಲ ಸತತವಾಗಿ ನಡೆಯಬೇಕು. ಆದರೆ ಅನೇಕ ರೋಗಿಗಳು ಮಾತ್ರೆಗಳನ್ನು ಆರಂಭಿಸಿದ ಮೂರ್ನಾಲ್ಕು ದಿನಗಳಲ್ಲಿ ಗುಣಮುಖರಾದಂತೆ ಭಾಸವಾಗಿ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಇದು ರೋಗವು ಮತ್ತೆ ಉಲ್ಬಣಗೊಳ್ಳಲು ಮತ್ತು ಇತರರಿಗೆ ಹರಡಲು ಪ್ರಮುಖ ಕಾರಣವಾಗಿದೆ. ಸಂಕ್ಷಿಪ್ತ ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಜಾಥ ಜಿಮ್ಸ್ ಆಸ್ಪತ್ರೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೆ ವಿಶ್ವ ಕ್ಷಯರೋಗ ದಿನಾಚರಣೆಯ ನಿಮಿತ್ಯ ಹಮ್ಮಿಕೊಂಡ ಜಾಥ ಚಾಲನೆ ನೀಡಿದರು. “ಹೌದು! ನಾವು ಕ್ಷಯರೋಗವನ್ನು ಅಂತ್ಯಗೊಳಿಸಬಹುದು: ದೇಶಗಳ ನೇತೃತ್ವದಲ್ಲಿ, ಜನರ ಶಕ್ತಿಯೊಂದಿಗೆ ಎಂಬ ಘೋಷವಾಕ್ಯದೊಂದಿಗೆ ಜಾಥವು ಜಿಲ್ಲಾ ಜೇಮ್ಸ್ ಆಸ್ಪತ್ರೆಯಿಂದ ಜಿಲ್ಲಾ ಪಂಚಯತ್ ಹಳೆ ಸಭಾಂಗಣದವರೆಗೆ ನಡೆಯಿತು.
ಕ್ಷಯ ಮುಕ್ತ ಗ್ರಾಮಪಂಚಾಯತ್ ಹಾಗೂ ವೈದ್ಯಕಿಯ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ
ಜಿಲ್ಲೆಯಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳು ಉತ್ತಮ ಫಲಿತಾಂಶ ನೀಡುತ್ತಿದ್ದು, 2025ರ ವೇಳೆಗೆ 'ಕ್ಷಯಮುಕ್ತ ಪಂಚಾಯತ್' ಗುರಿಯನ್ನು ತಲುಪಲು ಜಿಲ್ಲಾಡಳಿತ ಯಶಸ್ವಿಯಾಗಿದೆ. ವಿಶ್ವ ಕ್ಷಯರೋಗ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ವೈದ್ಯಕೀಯ ಅಧಿಕಾರಿಗಳು ಹಾಗೂ ಪಂಚಾಯತ್‌ಗಳಿಗೆ ಗೌರವ ಸಲ್ಲಿಸಲಾಯಿತು.
ಜಿಲ್ಲೆಯ ಒಟ್ಟು 43 ಗ್ರಾಮ ಪಂಚಾಯತ್‌ಗಳು ಕ್ಷಯಮುಕ್ತ ಘೋಷಣೆಯತ್ತ ಗಮನಾರ್ಹ ಸಾಧನೆ ಮಾಡಿ ವಿವಿಧ ಪದಕಗಳಿಗೆ ಭಾಜನರಾಗಿದ್ದಾರೆ. ಸಿರಾಚಂದ್ ಮತ್ತು ಚಿಮ್ಮಾಲ್ದಾಯಿ ಗ್ರಾಮ ಪಂಚಾಯತ್‌ಗಳು ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದಾರೆ.
ಮೊಘಾ (ಕೆ), ತೆಂಗ್ಲಿ ಹಾಗೂ ಆನೂರ ಗ್ರಾಮ ಪಂಚಾಯತ್‌ಗಳು ಬೆಳ್ಳಿ ಪದಕ ಪಡೆದವು. ಕಂಚಿನ ಪದಕ ಜಿಲ್ಲೆಯ ಸುಂಟ್ನೂರು, ನಿಂಬರ್ಗಾ, ಕೊರಳ್ಳಿ, ದುತ್ತರಗಾಂವ್ ಸೇರಿದಂತೆ ಒಟ್ಟು 38 ಗ್ರಾಮ ಪಂಚಾಯತ್‌ಗಳು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿವೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶರಣಬಸಪ್ಪ ಕ್ಯಾತನಾಳ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಕಾರ್ಯಾಲಯ ದ ಉಪ ನಿರ್ದೇಶಕರುಗಳಾದ ಡಾ. ಎ.ಎಸ್.ರುದ್ರವಾಡಿ, ಶರಣಬಸಪ್ಪಾ ಗಣಜಲಖೇಡ್, ತಾಲೂಕು ಆರೋಗ್ಯಾಧಿಕಾರಿ. ಡಾ. ಮಾರುತಿ ಕಾಂಬಳೆ, ಜಿಲ್ಲಾ ಸಮೀಕ್ಷಣಾಧಿಕಾರಿ. ಡಾ. ರಾಕೇಶ ಕಾಂಬಳೆ. ಜಿಲ್ಲಾ ಸರ್ಕಾರಿ ಆಸ್ಪತ್ರೆ ಆರ್.ಎಂ.ಓ. ಡಾ. ಓಂ ಪ್ರಕಾಶ ಅಂಬುರೆ ಹಾಗೂ ವಿವಿಧ ಸಂಘಗಳು ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.