- ಕೃಷಿಕರಿಂದ ನೇರವಾಗಿ ಖರೀದಿದಾರರಿಗೆ
- ಬೇಳೆ-ಕಾಳು ಮೌಲ್ಯವರ್ಧನೆಗೆ ಹೊಸ ಮಾರುಕಟ್ಟೆ ವೇದಿಕೆ
ಕಲಬುರಗಿ: ಇದುವರೆಗೆ ಕಲಬುರಗಿ ಅಂದರೆ ತೊಗರಿ ಮಾತ್ರ ಎನ್ನುವಂತಿತ್ತು. ಆದರೆ ಮುಂದಿನ ದಿನಗಳಲ್ಲಿ "ಕಲಬುರಗಿ ಪಲ್ಸ್' ಮೂಲಕ ಎಲ್ಲ ತೆರನಾದ ಬೇಳೆ-ಕಾಳುಗಳನ್ನು ರೈತರಿಂದ ನೇರವಾಗಿ ಖರೀದಿದಾರರಿಗೆ ತಲುಪಿಸುವಂತಹ ಹೊಸ ವೇದಿಕೆ ರೂಪಿಸುತ್ತಿದ್ದು, ಅಗತ್ಯ ತಯಾರಿ ಪೂರ್ಣಗೊಂಡಿದೆ.
ತೊಗರಿ ಮಂಡಳಿಯಿಂದ ತೊಗರಿ ಬೇಳೆಯೊಂದನ್ನೇ ಗುರಿಯಾಗಿಸಿ ಬೀಮಾ ಪಲ್ಸ್ ಎಂಬ ಬ್ರಾಂಡ್ ರೂಪಿಸಲಾಗಿದೆ. ಆದರೆ ಅದಕ್ಕಿಂತಲೂ ವಿಭಿನ್ನವಾಗಿಸಿ ದೇಶ-ವಿದೇಶದ ಮಾರುಕಟ್ಟೆಗೆ ಜಿಐ ಟ್ಯಾಗ್ ಹೊಂದಿದ ತೊಗರಿ ಕಾಳು ಮತ್ತು ಬೇಳೆ ಜತೆ ತೊಗರಿ, ಉದ್ದು, ಹೆಸರು, ಕಡಲೆ ಮೊದಲಾದವನ್ನು ರೈತರಿಂದ ದೊಡ್ಡ ಪ್ರಮಾಣದ ಖರೀದಿದಾರರು ಖರೀದಿಸಿ ಗ್ರಾಹಕರಿಗೆ ತಲುಪಿಸಲು ಜಿಲ್ಲಾಡಳಿತದ ಪ್ರಯತ್ನ ಸಹಕಾರಿಯಾಗಲಿದೆ.
ವಿಭಿನ್ನವಾಗಿರುವ ಈ ಯೋಜನೆಯಡಿ ರೈತರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಇಲ್ಲವೇ ಉತ್ಪಾದಿಸಿದ ಕೃಷಿ ಉತ್ಪನ್ನ ಮಾರಾಟ ಮಾಡಬಹುದಾಗಿದೆ. ಕೃಷಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ವೇದಿಕೆ ಬಳಸಿಕೊಳ್ಳಲು ಅವಕಾಶವಿದೆ. ನಿರೀಕ್ಷೆಯಷ್ಟು ಬೆಲೆ ಬಂದರೆ ಮಾರಾಟ ಮಾಡಬಹುದು ಇಲ್ಲವೇ ಹಾಗೆ ಇಟ್ಟುಕೊಳ್ಳಬಹುದು. ಹೀಗಾಗಿ ಇಲ್ಲಿ ರೈತರೇ ಕಿಂಗ್ ಆಗಿರಲಿದ್ದಾರೆ. ಅದಕ್ಕೆ ಪೂರಕವಾಗಿ ಮಹೇಂದ್ರ, ಐಟಿಸಿ ಇತರ ಬೃಹತ್ ಕಂಪನಿಗಳ ಜತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲಾಧಿಕಾರಿ ಇತರ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ದೊಡ್ಡ ಮತ್ತು ಸಣ್ಣ ಖರೀದಿದಾರರ ಬೇಡಿಕೆ ಆಧರಿಸಿ ಬೇಕಾದಷ್ಟು ಬೇಳೆ-ಕಾಳುಗಳನ್ನು ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಖರೀದಿಸಲು ಅನುಕೂಲ ಆಗಲಿದೆ.
ಆರಂಭಿಕ ಹಂತದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾರುಕಟ್ಟೆ ಆರಂಭಿಸಿ ಮುಂದಿನ ದಿನಗಳಲ್ಲಿ 10 ಲಕ್ಷ ಕ್ವಿಂಟಾಲ್ ಬೇಳೆ-ಕಾಳು ಮಾರಾಟದ ಗುರಿಯೊಂದಿಗೆ ಜಿಲ್ಲಾಡಳಿತ ಕಾರ್ಯ ಆರಂಭಿಸಿದೆ. ಇದರ ಪ್ರತಿಫಲ ರೈತರಿಗೆ ಕೆಲ ತಿಂಗಳಲ್ಲಿ ಸಿಗುವ ಸಾಧ್ಯತೆ ಇದೆ.
ಎಫ್ಪಿಒ ಎಸ್ಎಚ್ಜಿ ಮೂಲಕ ವ್ಯವಹಾರ
ರೈತ ಉತ್ಪಾದಕರ ಸಂಟನೆ (ಎಫ್ಪಿಒ) ಮತ್ತು ಮಹಿಳಾ ಸ್ವಸಹಾಯ ಸಂ (ಎಸ್ಎಚ್ಜಿ)ಗಳ ರೈತರು ಮತ್ತು ರೈತ ಮಹಿಳೆಯರು ತಮ್ಮ ಹೊಲಗಳಲ್ಲಿ ಬೆಳೆದಿರುವ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ಆಯಾ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿರುವ ರೈತರು ಹೊಂದಿರುವ ದಾಸ್ತಾನು ನೋಡಿ ಖರೀದಿದಾರರು ತಮ್ಮ ಬೇಡಿಕೆಯಷ್ಟು ಬೇಳೆ&ಕಾಳು ಖರೀದಿಸಲು ಬಿಡ್ಡಿಂಗ್ ಮಾಡುತ್ತಾರೆ. ಖರೀದಿಸುವ ಕಂಪನಿ ಉಲ್ಲೇಖಿಸಿರುವ ಬೆಲೆ ರೈತರಿಗೆ ಒಪ್ಪಿಗೆಯಾದರೆ ಮಾತ್ರ ಕೊಡಬಹುದು. ಇಲ್ಲದಿದ್ದರೆ ಸಂಸ್ಕರಣೆ ಮಾಡಿದ ನಂತರ ಅದೇ ವೇದಿಕೆಯಲ್ಲಿ ಇನ್ನಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಲಾಭ ದ್ವಿಗುಣಗೊಳಿಸಿಕೊಳ್ಳಲು ಸಾಧ್ಯವಿದೆ.
ರೈತರಿಗೆ ವರವಾಗಲಿದೆ ಫೌಜಿಯಾ ತರನ್ನುಮ್ ರೂಪಿಸಿದ ವಿಶಿಷ್ಟ ಯೋಜನೆ
ಕಲಬುರಗಿ ರೊಟ್ಟಿ ವಿದೇಶಿ ಮಾರುಕಟ್ಟೆಗೆ ಕಳಿಸಲು ಅವಿರತ ಶ್ರಮಿಸಿದ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್
ಅವರು ದೇಶದಲ್ಲೇ ವಿಶಿಷ್ಟ ಎನಿಸಿರುವ ಕಲಬುರಗಿ ಪಲ್ಸ್ ಎಂಬ ಯೋಜನೆ ರೂಪಿಸಿದ್ದಾರೆ. ರೈತರಿಗೆ ಹೆಚ್ಚಿನ ಲಾಭ ಕೊಡಿಸುವಂಥ ದೂರದೃಷ್ಟಿಯ ಕಾರ್ಯಕ್ರಮ ಇದಾಗಿದೆ. ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಇತರ ಅಧಿಕಾರಿಗಳ ಜತೆ ಆರೇಳು ತಿಂಗಳಿಂದ ನಿರಂತರ ಪ್ಲಾನ್ ಮಾಡಿ ಹೊಸ ಪ್ಲಾಟ್ಫಾಮ್ರ್ ಒದಗಿಸಿದ್ದಾರೆ. ಅದಕ್ಕೆ ಬೇಕಿರುವ ಪೋರ್ಟಲ್ ಸೇರಿ ಎಲ್ಲವೂ ಸಿದ್ಧಗೊಳಿಸಿದ್ದಾರೆ. ಕಲಬುರಗಿ ಪಲ್ಸ್ ಅನುಷ್ಠಾನಗೊಂಡರೆ ರೈತರು ಬೆಳೆದ ತೊಗರಿ, ಕಡಲೆ, ಹೆಸರು, ಉದ್ದು ಮೊದಲಾದ ಬೇಳೆ-ಕಾಳುಗಳನ್ನು ಬೆಳೆದ ಸ್ಥಿತಿಯಲ್ಲೇ ಅಥವಾ ಮೌಲ್ಯವರ್ಧನೆ ಮಾಡಿಯೂ ಮಾರಾಟ ಮಾಡಲು ಅನುವು ಆಗಲಿದೆ.
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದರ ಜತೆ ರೈತರಿಗೆ ಹೆಚ್ಚಿನ ಲಾಭ ದೊರಕಿಸಿಕೊಡಲು ಕಲಬುರಗಿ ಪಲ್ಸ್ ಯೋಜನೆ ರೂಪಿಸಲಾಗಿದೆ. ಆದಷ್ಟು ಶ್ರೀ ಮುಖ್ಯಮಂತ್ರಿಗಳಿಂದ ಚಾಲನೆ ಕೊಡಿಸಲಾಗುವುದು.
— > ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಉದ್ದೇಶಿತ ಕಲಬುರಗಿ ಪಲ್ಸ್ ಯೋಜನೆ ಮೂಲಕ ಎರಡ್ಮೂರು ವರ್ಷಗಳಲ್ಲಿ 10 ಲಕ್ಷ ಕ್ವಿಂಟಾಲ್ ಬೇಳೆ-ಕಾಳುಗಳನ್ನು ಮಾರಾಟ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಲೋಗೋ ಅಥವಾ ಮಾರುಕಟ್ಟೆಗೆ ಹೇಗೆ ಬ್ರಾಂಡಿಂಗ್ ಮಾಡಬೇಕು ಎಂಬ ಯೋಜನೆ ಸಿದ್ಧಪಡಿಸಲಾಗುತ್ತಿದೆ.
— > ಸಮದ್ ಪಟೇಲ್ ಜಂಟಿ ಕೃಷಿ ನಿರ್ದೇಶಕ