ರಾಜ್ಯ

ಸಿರಿಧಾನ್ಯ ಕೃಷಿ ಹಬ್ ಆಗಿ ಕಲಬುರಗಿ ಜಿಲ್ಲೆ ಪರಿವರ್ತನೆ : ಸಚಿವ ಪ್ರಿಯಾಂಕ್ ಖರ್ಗೆ ಘೋಷಣೆ

ಕಲಬುರಗಿ: ಜಿಲ್ಲೆಯಲ್ಲಿ ಕೃಷಿ ಉತ್ತೇಜನಕ್ಕೆ, ರೈತರಿಗೆ ಹಾಗೂ ರೈತ ಮಹಿಳೆಯರ ಸಬಲೀಕರಣಕ್ಕೆ ಬೇಕಾಗುವ ಅಗತ್ಯ ಕ್ರಮವಹಿಸುವುದರ ಜೊತೆಗೆ ಕಲಬುರಗಿ ಜಿಲ್ಲೆಯನ್ನು ಸಿರಿಧಾನ್ಯಗಳ ಹಾಗೂ ಕೃಷಿ ಹಬ್ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದರು.
ನಗರದ ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ‌ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇಂದು ಏರ್ಪಡಿಸಲಾದ ಜಿಲ್ಲಾ‌ಮಟ್ಟದ ಸಿರಿಧಾನ್ಯ ಮೇಳ- 2026 ಹಾಗೂ, ಬೆಳೆ ವಿಮೆ ಪರಿಹಾರ ಬಿಡುಗಡೆ ಕಾರ್ಯಕ್ರಮವನ್ನು ಸಿರಿಧಾನ್ಯಗಳನ್ನು ಕೊಳಗಕ್ಕೆ ಸುರಿಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಇದರಿಂದಾಗಿ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದರು.
ಸಚಿವ ಸಂಪುಟದಲ್ಲಿ ವಿಮೆ ಪರಿಹಾರದ ವಿಚಾರ ಬಂದಾಗ ಬೇರೆ ಬೇರೆ ಕಡೆ ತಿರಸ್ಕಾರವಾಗಿದೆ ಕಲಬುರಗಿಗೆ ಮಾತ್ರ ಯಾಕೆ ಮಂಜೂರಾಗಿದೆ ಎನ್ನುವ ಪ್ರಶ್ನೆ ಎದುರಾಗಿತ್ತು. ಆದರೆ, ಸರ್ಕಾರದ‌ ಕಟ್ಟು ತಪ್ಪಿಸದೆ, ರೈತರಿಗೂ ಮೋಸವಾಗದಂತೆ ಕೃಷಿ ಅಧಿಕಾರಿಗಳು ಕೆಲಸ ಮಾಡಿದ್ದರಿಂದ ಇಷ್ಟೊಂದು ಪ್ರಮಾಣದ ವಿಮೆ ಮಂಜೂರಾಗಿದೆ ಎಂದರು.
ತಮ್ಮ ವಿರುದ್ದ 'ಪ್ರಿಯಾಂಕ್ ಖರ್ಗೆ ಹಠಾವೋ ಕಲಬುರಗಿ ಬಚಾವೋ' ಪ್ರತಿಭಟನೆ ಮಾಡಲು ಕೆಲವರು ಮುಂದಾಗಿರುವುದರ ಕುರಿತು ಪ್ರಸ್ತಾಪಿಸಿದ ಸಚಿವರು, ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದ ರೈತರಿಗೆ ಅನ್ಯಾಯ ಮಾಡುತ್ತಿದೆ. ಕನಿಷ್ಠ ಬೆಂಬಲ ಬೆಲೆ, ರೈತರ ಆದಾಯ ದುಪ್ಪಟ್ಟು ಭರವಸೆಗಳು ಹಾಗೆ ಉಳಿದವು. ಮೂರು ಕೃಷಿ ಕಾಯ್ದೆಗಳು ಜಾರಿಗೆ ಬಂದವು ಅದರ ವಿರುದ್ದ ರೈತರು ಪ್ರತಿಭಟನೆ ಮಾಡಿದರು. ಅವರಲ್ಲಿ ಕೆಲವರು ಪ್ರಾಣ ಬಿಟ್ಟರು.
ಕಳೆದ ಬಾರಿ ರಾಜ್ಯದ 236 ತಾಲೂಕುಗಳ ಪೈಕಿ 223 ತಾಕೂಕುಗಳಲ್ಲಿ ಬರ ಬಿದ್ದಿತ್ತು, 48 ,ಲಕ್ಷ ಹೆಕ್ಟೇರ್ ಬರಕ್ಕೆ ತುತ್ತಾಯಿತು. ಅದೇ ವರ್ಷ ಆಗ ಯಾರೂ ಪ್ರತಿಭಟನೆ ಮಾಡಲಿಲ್ಲ. ಕೇಂದ್ರ ಸರಕಾರ ಬರ ಪರಿಹಾರ ನೀಡಲಿಲ್ಲ, ಆಗ ಕರ್ನಾಟಕದ ಸಚಿವರು ದೆಹಲಿಯಲ್ಲಿ ಪ್ರತಿಭಟನೆ ಮಾಡಬೇಕಾಯ್ತು. ಅಲ್ಲದೇ, ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ಸುಪ್ರಿಂ ಕೋರ್ಟ್ ಗೆ ಹೋಗಬೇಕಾಯ್ತು. ಆಗ ಕೋರ್ಟ್ ಛೀಮಾರಿ ಹಾಕಿದ್ದರಿಂದ ರೈತರಿಗೆ ಪರಿಹಾರ ಬಂದಿತು. ಇಷ್ಟೆಲ್ಲ ಮಾಡಿದ ಮೇಲೆಯೂ ನಮ್ಮ ವಿರುದ್ದ ಕೆಲವರು ಪ್ರತಿಭಟನೆ ಮಾಡುತ್ತಾರೆ. ಅವರು ನಿಜವಾದ ರೈತರೇ ಅಲ್ಲ, ಅವರ ಹೆಗಲಿನ ಶಾಲಿನ ಬಣ್ಣ ಆಗಾಗ ಬದಲಾಗುತ್ತಲೇ ಇರುತ್ತದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರೂ 657 ಕೋಟಿ ರೂಪಾಯಿ ಬೆಳೆ ಪರಿಹಾರ ಜಿಲ್ಲೆಯ ರೈತರಿಗೆ ನೀಡಲಾಗಿದೆ. ಇದೂವರೆಗೆ ಸುಮಾರು 3.01 ಲಕ್ಷ ರೈತರು ಬೆಳೆವಿಮೆ ನೊಂದಣಿ ಮಾಡಿಸಿದ್ದಾರೆ. ಇದು ಕಳೆದ ಬಿಜೆಪಿ ಸರ್ಕಾರದ ಅವಧಿಗಿಂತ ದುಪ್ಪಟ್ಟಾಗಿದೆ. 2022-23 ರ ಸಾಲಿನಲ್ಲಿ ಜಿಲ್ಲೆಯಲ್ಲಿ ನೆಟೆ ರೋಗದಿಂದ 1.98 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿತ್ತು. ಸರ್ಕಾರ‌ ಇದನ್ನು ಗಂಭೀರವಾಗಿ ಪರಿಗಣಿಸಿ, 1,77,354 ರೈತರಿಗೆ ರೂ 181.86 ಕೋಟಿ ಪರಿಹಾರ ನೀಡಲಾಗಿದೆ ಎಂದರು. ಕಳೆದ ಮೂರು ವರ್ಷದಲ್ಲಿ ಬೆಳೆ ವಿಮೆ ಪರಿಹಾರ, ನೆಟೆರೋಗದಿಂದ ಬೆಳೆಹಾನಿ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಅಡಿಯಲ್ಲಿ ಒಟ್ಟು 15.46 ಲಕ್ಷ ರೈತರಿಗೆ ರೂ 2590.98 ಕೋಟಿ ಪರಿಹಾರ ಧನ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು.
ಮಹಿಳಾ ಸಬಲೀಕರಣಕ್ಕಾಗಿ ಕಲಬುರಗಿ ರೊಟ್ಟಿ ಎನ್ನುವ ವಿನೂತನ‌ ಯೋಜನೆ ಜಾರಿಗೆ ತಂದಿದ್ದು ಮಹಿಳೆಯರಿಗೆ ರೊಟ್ಟಿ ತಯಾರಿಸುವ ಯಂತ್ರಗಳನ್ನು ಒದಗಿಸಲಾಗಿದೆ. ಈಗ ಮಹಿಳೆಯರು‌ ಪ್ರತಿನಿತ್ಯ ಸಾವಿರಾರು ರೊಟ್ಟಿ ತಯಾರಿಸಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗೆ ರವಾನಿಸಿ‌ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಇದು‌ ಮಹಿಳಾ ಸಬಲೀಕರಣಕ್ಕೆ ಕೈಗೊಂಡ ಅಭೂತಪೂರ್ವ ಕಾರ್ಯಕ್ರಮವಾಗಿದೆ ಎಂದರು.
ಕೃಷಿಗೆ ಪೂರಕವಾದ ‌ಯೋಜನೆಗಳನ್ನು ಜಾರಿಗೆ ತರಲು ಒತ್ತು ನೀಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 9
ಕಸ್ಟಮರ್ ಹೈರ್ ಸೆಂಟರ್, ಡ್ರೋನ್ ಸಿಂಪರಣಾ‌ಕೇಂದ್ರ, ಸಿರಿದಾನ್ಯ ಸಂಸ್ಕರಣ ಕೇಂದ್ರಸ್ಥಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ‌
ಶೀಥಲೀಕರಣ ಘಟಕ ಸ್ಥಾಪಿಸಲಾಗುತ್ತಿದೆ. ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಹಾಗೂ ಬೆಲೆ‌ ದೊರಕಿಸಿಕೊಡುವ ನಿಟ್ಟಿನಲ್ಲಿ ಅಗ್ರಿಟೆಕ್ ಎಕ್ಸಲರೇಟರ್ ಸೆಂಟರ್ ಫಾರ ಎಕ್ಸಲೆನ್ಸಿ ಸ್ಥಾಪನೆ ಮಾಡಲಾಗುತ್ತಿದೆ. ಈ ಮೂಲಕ ಕಲಬುರಗಿ ಜಿಲ್ಲೆಯನ್ನು ಅಗ್ರಿಕಲ್ಚರ್ ಹಬ್ ಮಾಡಲಾಗುತ್ತದೆ ಎಂದರು.
ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಮಾತನಾಡಿ, ಬಹುಶಃ ರೈತರಿಗೆ ಇದ್ದಷ್ಟು ಕಷ್ಟ ಬೇರೆ ಯಾರಿಗೂ ಇಲ್ಲ‌. ಸರ್ಕಾರ ಸಕರಾತ್ಮಕ ಸ್ಪಂದಿಸಿ ಇನ್ಶೂರೆನ್ಸ್ ಮಾಡಿಸಲು ಕ್ರಮ ಕೈಗೊಂಡಿದೆ‌. ಅದರ ಪರಿಣಾಮವಾಗಿ, ಈ ಕಾರ್ಯಕ್ರಮ ಆಯೋಜಿಸಿ ರೈತರಿಗೆ ಅರಿವು ಮೂಡಿಸುವ ಕೆಲಸವಾಗುತ್ತಿದೆ ಎಂದರು.
ನರೇಗಾ ಬದಲು, ವಿಬಿ‌ ಜಿ ರಾಮ್ ಜೀ ಬಂದಿದೆ. ಇವರು ಯಾವ ರಾಮ ಗೊತ್ತಿಲ್ಲ. ಈ ರಾಮ ರೈತನ ಕೈಹಿಡಿಯಲಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ, ಇದರಿಂದಾಗಿ ರೈತರಿಗೆ ಕಾರ್ಮಿಕರಿಗೆ ಬಹಳ ತೊಂದರೆಯಾಗುತ್ತದೆ. ಹಾಗಾಗಿ ಮತ್ತೆ ನರೇಗಾ ವಾಪಸ್ ಬರಲಿದೆ ಎಂದು ಅಭಿಪ್ರಾಯಪಟ್ಟ ಅವರು ನರೇಗಾ ದಲ್ಲಿ ರೈತರನ್ನೂ ಕೂಡಾ ಭಾಗಿದಾರರನ್ನಾಗಿ ಮಾಡಬೇಕಿತ್ತು ಎಂದರು.
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಪಾಟೀಲ್, ಸಿಎಂ ಜನಪರ ರೈತಪರ ಬಜೆಟ್ ಕೊಟ್ಟಿದ್ದಾರೆ ಎಂದರು.\
ಕೃಷಿ‌ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ, ‍‍2025-26 ಸಾಲಿನಲ್ಲಿ 3.01 ಲಕ್ಷ ರೈತರು ಬೆಳೆ ವಿಮೆಯಡಿ ನೋಂದಣಿ ಮಾಡಿಸಿದ್ದು, ರಾಜ್ಯದಲ್ಲಿಯೇ ಜಿಲ್ಲೆ ಬೆಳೆ ವಿಮೆ ಮಾಡಿಸಿ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ 2.90 ಲಕ್ಷ ರೈತರಿಗೆ ಬೆಳೆ ವಿಮೆ ಮಧ್ಯಂತರ ಪರಿಹಾರವಾಗಿ ರೂ 243.52 ಕೋಟಿ ಹಣವನ್ನು ರೈತರ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡಲಾಗಿದೆ. ಬೆಳೆ ವಿಮೆ ಹಾಗೂ ಪರಿಹಾರ ಸೇರಿದಂತೆ ಇದೂವರೆಗೆ ರೂ 748 ಕೋಟಿಯನ್ನು ರೈತರಿಗೆ ನೀಡಲಾಗಿದೆ ಎಂದರು‌.
ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಎಂಎಲ್ ಎ ಗಳಾದ ಎಂ ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಕೃಷಿ ಕ್ಷೇತ್ರದ ಬೆಳವಣಿಗೆಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತು ನೀಡಿದ್ದು ಅವರ ಮುತುವರ್ಜಿಯಿಂದಾಗಿ ರೈತರಿಗೆ ಸಕಾಲಕ್ಕೆ ವಿಮೆ ಪರಿಹಾರ ಸೇರಿದಂತೆ ಎಲ್ಲ ಸೌಲಭ್ಯಗಳು ದೊರಕುತ್ತಿವೆ ಎಂದರು.
ಬೆಳೆ ಹಾನಿ ಪರಿಹಾರ ಚೆಕ್ ವಿತರಣೆ
ಸಚಿವರು ಸಾಂಕೇತಿಕವಾಗಿ ಐದು ರೈತರಿಗೆ ಬೆಳೆ ವಿಮೆ ಮಧ್ಯಂತರ ಪರಿಹಾರದ ಚೆಕ್ ವಿತರಿಸಿದರು. ಸಚಿವರ ಶ್ರಮದಿಂದಾಗಿ ರೈತರಿಗೆ ಪರಿಹಾರ ದಕ್ಕಿದೆ ಎಂದು ಕೃಷಿ‌ ಇಲಾಖೆ ಅಧಿಕಾರಿಗಳು ಸಚಿವರಿಗೆ ಕಂಬಳಿ ಹೊದಿಸಿ ಸನ್ಮಾನ ನೆರವೇರಿಸಿದರು.
ವೇದಿಕೆಯ ಕಾರ್ಯಕ್ರಮ ನಡೆಯುತ್ತಿರುವ ಮಧ್ಯೆ ದಲ್ಲಿಯೇ ಸರ್ಕಾರದ ವತಿಯಿಂದ ರೈತರ ಖಾತೆಗೆ ನೇರವಾಗಿ ಜಮೆಯಾಗಿರುವ ಕುರಿತು ಬ್ಯಾಂಕ್ ನಿಂದ ಮೆಸೆಜ್ ಬಂದಿರುವುದರ ಬಗ್ಗೆ ನಸಮುದ್ರಸಮದ್ ಪಟೇಲ್ ತಿಳಿಸಿದರು.
ವೇದಿಕೆಯ ಮೇಲೆ ಶಾಸಕರಾದ ಎಂ ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ, ಮಹೆಮೂದ್ ಸಾಹೇಬ್ ಚಿಸ್ತಿ, ಸಾಬ್,ಹಜರ್ ಆಲಂ‌‌ಖಾನ್, ಜಿಲ್ಲಾಧಿಕಾರಿ ಫೌಂಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ,‌ ಪೊಲೀಷ್ ಕಮೀಷನರ್ ಶರಣಪ್ಪ ಢಗೆ, ಮಹಾನಗರ ಪಾಲಿಕೆ ಕಮೀಷನರ್ ಅವಿನಾಶ್ ಸಿಂಧೆ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ, ಕೃಷಿ‌ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಹಲವರಿದ್ದರು.