ಕಾಡುಮಲ್ಲೇಶ್ವರ ಗೆಳೆಯರ ಬಳಗ ಆಯೋಜಿಸಿರುವ 10ನೇ ವರ್ಷದ ಕಡ್ಲೆಕಾಯಿ ಪರೆಷೆಯ ಕುರಿತು ಅಧ್ಯಕ್ಷ ಬಿ.ಕೆ.ಶಿವರಾಂ ವಿವರಣೆ ನೀಡಿದರು. ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.  
ರಾಜ್ಯ

ನ.28ರಿಂದ ಕಾಡುಮಲ್ಲಿಕಾರ್ಜುನ ಸ್ವಾಮಿ ಕಡಲೆಕಾಯಿ ಪರಿಷೆ

ಪರಿಷೆಯಲ್ಲಿ ವನಜ ಪೂರ್ಣಾರ್ತಿ ಬಿಟ್ಪಾಡಿಗೆ ವಾರ್ಷಿಕ ಪ್ರಶಸ್ತಿ

ಬೆಂಗಳೂರು : ಮಲ್ಲೇಶ್ವರದ ಐತಿಹಾಸಿಕ ಶ್ರೀಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ 10ನೇ ರೈತ ಸ್ನೇಹಿ ಕಡಲೆಕಾಯಿ ಪರಿಷೆಯು ನ.28ರಿಂದ 30ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ, ನ.28ಕ್ಕೆ ಉದ್ಘಾಟನೆಗೊಳ್ಳಲಿರುವ ಕಡಲೆಕಾಯಿ ಪರಿಷೆ 3 ದಿನ ನಡೆಯಲಿದ್ದು, ನ.30ರಂದು ಕಾಡುಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ನಡೆಯಲಿದೆ. ಬರ ಪರಿಸ್ಥಿತಿ ನಡುವೆಯೂ ರೈತರ ಬದುಕಿಗೆ ಉತ್ತೇಜನ ನೀಡುವುದು, ರೈತರು ಬೆಳೆದ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುವುದು ಪರಿಷೆಯ ಉದ್ದೇಶ. ಸುಮಾರು 600 ಮಳಿಗೆಗಳನ್ನು ರೈತರು ಹಾಗೂ ವ್ಯಾಪಾರಿಗಳಿಗೆ ಉಚಿತವಾಗಿ ಒದಗಿಸಲಾಗುತ್ತಿದೆ. ರೈತರು ಬೆಳೆದ ಕಡಲೆಕಾಯಿಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಉತ್ತಮ ವೇದಿಕೆ ಕಲ್ಪಿಸಲಾಗಿದೆ. ರೈತರ ಶ್ರಮಕ್ಕೆ ಗೌರವ ನೀಡುವ ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಈ ಉಚಿತ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ 6 ಲಕ್ಷಕ್ಕೂ ಅಧಿಕ ಜನ ಆಗಮಿಸುವ ನಿರೀಕ್ಷೆಯಿದೆ. ಯಾವುದೇ ಗೊಂದಲವಾಗದಂತೆ ದೇವರ ದರ್ಶನ, ಕುಡಿಯುವ ನೀರು, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಜನಸಂದಣಿಯನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಿವರಾಂ ವಿವರಿಸಿದರು.

ಮಲ್ಲೇಶ್ವರ ಕಾಡುಮಲ್ಲಿಕಾರ್ಜುನ ಸ್ವಾಮಿ10ನೇ ವರ್ಷದ ಕಡ್ಲೆಕಾಯಿ ಪರೆಷೆಯ ಪೂರ್ವಭಾವಿಯಾಗಿ ಆಯೋಜಕರು ಕಡ್ಲೆಕಾಯಿಗಳನ್ನು ಪ್ರದರ್ಶಿಸಿದರು.

ಅನಾಥ ಶವಗಳನ್ನು ಅಂತ್ಯ ಸಂಸ್ಕಾರ ಮಾಡಿ ಮಾನವೀಯ ಕಾರ್ಯದಲ್ಲಿ ತೊಡಗಿರುವ ಉಡುಪಿಯ ವನಜ ಪಿ. ಪೂರ್ಣಾರ್ತಿ ಬಿಟ್ಪಾಡಿ ಅವರಿಗೆ ಪರಿಷೆಯಲ್ಲಿ ಹುಣ್ಣಿಮೆ ಹಾಡು 2026 ರ ರಾಜ್ಯೋತ್ಸವ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಳಗದ ಅನೂಪ್ ಅಯ್ಯಂಗಾರ್, ಚಂದ್ರಶೇಖರ್ ನಾಯ್ಡು, ಡಾ. ಲೀಲಾ ಸಂಪಿಗೆ, ಎನ್.ಶ್ರೀನಿವಾಸ್, ಪಿ.ಜಿ. ಮನು, ಅರ್ಚಕರಾದ ಗಂಗಾಧರ್ ದೀಕ್ಷಿತ್, ಶಶಿಧರ್ ಮತ್ತಿತರರಿದ್ದರು.