- * ಪ್ರಶಸ್ತಿಯು 5 ಸಾವಿರ ರೂ. ನಗದು, ಫಲಕ ಒಳಗೊಂಡಿದೆ
ಬೆಂಗಳೂರು: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ಜೀವನ್ಮುಖಿ ಕನ್ನಡ ಪಾಕ್ಷಿಕ ಪತ್ರಿಕೆಯು ನೀಡುತ್ತಿರುವ 16ನೇ ವರ್ಷದ ‘ಜೀವನ್ಮುಖಿ ಪ್ರಶಸ್ತಿ’ ಪ್ರಕಟವಾಗಿದ್ದು, ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಸೇರಿ ನಾಲ್ವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗೃಹ ಮಂಡಳಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ. ದಯಾನಂದ, ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎನ್. ಯತೀಶ್ ಮತ್ತು ಸಾಹಿತಿ ಹಾಗೂ ಸಾಂಸ್ಕೃತಿಕ ಸಂಘಟಕ ನಂ. ನಂಜಪ್ಪ ರಾಜಣ್ಣ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 5 ಸಾವಿರ ರೂ. ನಗದು, ಫಲಕ ಒಳಗೊಂಡಿದೆ.
ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಜೂ. 7ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭವನ್ನು ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಉದ್ಘಾಟಿಸಲಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ. ತಿಮ್ಮೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ನಾಡಿನ ಪ್ರತಿಭಾವಂತ ಬಾಲ ಪ್ರತಿಭೆಗಳಾದ ಕ್ಷಮಾ ಯು. ಐತಾಳ್, ಎಸ್. ಚಿರಂತ್, ಬಿ. ಶಿವಾನಿ ಮತ್ತಿತರರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.