ಹಾಸನ: ಇಂದಿನ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ಮತ್ತು ಮಾಹಿತಿ ಹಕ್ಕು ಕಾಯ್ದೆ(RTI) ಎರಡೂ ಸಂಕಷ್ಟದ ಸ್ಥಿತಿಯಲ್ಲಿವೆ. ಇವುಗಳ ಮೂಲ ಉದ್ದೇಶ ನಾಗರಿಕ ಸಬಲೀಕರಣವಾಗಿದ್ದರೂ, ಇಂದು ದಾರಿ ತಪ್ಪುತ್ತಿರುವುದು ಕಳವಳಕಾರಿ ಎಂದು ರಾಜ್ಯ ಮಾಹಿತಿ ಹಕ್ಕು ಆಯುಕ್ತ ರುದ್ರಣ್ಣ ಹರ್ತಿಕೋಟೆ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಸಾಂಸ್ಕೃತಿಕ ಸಮಿತಿ ಆಯೋಜಿಸಿದ್ದ 'ಸ್ಟಡಿ ವಿತ್ ಸೊಸೈಟಿ' ಉಪನ್ಯಾಸ ಸರಣಿಯಲ್ಲಿ 'ಮಾಹಿತಿ ಹಕ್ಕು ಕಾಯ್ದೆ: ಪರಿಣಾಮ ಮತ್ತು ಬಳಕೆ' ವಿಷಯದ ಕುರಿತು ಅವರು ಮಾತನಾಡಿದರು. ಪತ್ರಕರ್ತರು ತನ್ನ ವೃತ್ತಿ ನೈತಿಕತೆಯನ್ನು ಜೀವಂತವಾಗಿಟ್ಟುಕೊಳ್ಳಬೇಕಿರುವುದು ಇಂದಿನ ತುರ್ತು ಅಗತ್ಯ ಎಂದು ಮಾರ್ಮಿಕವಾಗಿ ನುಡಿದರು.
ಪ್ರಜಾಪ್ರಭುತ್ವದ ಆಮ್ಲಜನಕವೇ RTI
ಮಾಹಿತಿ ಹಕ್ಕು ಕಾಯ್ದೆಯನ್ನು ಪ್ರಜಾಪ್ರಭುತ್ವದ 'ಆಮ್ಲಜನಕ' ಎಂದು ಬಣ್ಣಿಸಿದ ಅವರು, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಇದೊಂದು ಪ್ರಬಲ ಅಸ್ತ್ರ. ಆದರೆ ಇದರ ದುರ್ಬಳಕೆ ಆಗಬಾರದು. ಕುವೆಂಪು ಅವರ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸುವಲ್ಲಿ ಪತ್ರಕರ್ತರು ಮತ್ತು ಸಾರ್ವಜನಿಕರು ಈ ಕಾಯ್ದೆಯನ್ನು ಶಕ್ತಿಯಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ.ಅಂಬೇಡ್ಕರ್ ಪತ್ರಿಕೋದ್ಯಮ ಪ್ರಾಣವಾಯು ಎಂದರೆ, ಮಹಾತ್ಮಾಗಾಂಧಿ ಸೇವೆ ಅಂದರು, ಆದರೀಗ ಅದು ಇದೆಯೇ ಎಂಬುದು ಪ್ರಶ್ನೆಯಾಗಿದೆ. ಇಂದು ನಾವು ಸಹಿಷ್ಣುತೆ ಕಡೆಗೆ ನಾವು ಹೋಗಬೇಕಾದ ಅಗತ್ಯ ಇದೆ. ಮಾಧ್ಯಮ ಇಂದು ವಿಶ್ವಾಸ ಉಳಿಸಿಕೊಂಡಿಲ್ಲ ಗೋಧಿ ಮೀಡಿಯಾ ಈಗ ಸುಳ್ಳು ಉತ್ಪಾದಕರು ಎಂಬ ಟೀಕೆ ಹೋಗಲಾಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ನಿರಂತರ ಅಧ್ಯಯನವೇ ಪತ್ರಕರ್ತನ ಬಲ
ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ. ಮಾತನಾಡಿ,ತಂತ್ರಜ್ಞಾನ ಬೆಳೆದಂತೆ ಪತ್ರಿಕೋದ್ಯಮ ಸುಲಭವಾಗಿದೆ ನಿಜ, ಆದರೆ ಅಧ್ಯಯನಶೀಲತೆ ಕಡಿಮೆಯಾಗಿದೆ. ಪತ್ರಕರ್ತರಿಗೆ ಪ್ರಶ್ನಿಸುವ ಮನೋಭಾವ ಮತ್ತು ನಿರಂತರ ಕಲಿಕೆ ಇರಬೇಕು. ಮಾಹಿತಿ ಹಕ್ಕು ಕಾಯ್ದೆ 1766ರಲ್ಲಿ ಸ್ವೀಡನ್‌ನಲ್ಲಿ ಆರಂಭವಾಗಿ ಇಂದು 130 ದೇಶಗಳಲ್ಲಿ ವ್ಯಾಪಿಸಿದೆ. ಇದು ಜನರ ಕೈಲಿರುವ ಬ್ರಹ್ಮಾಸ್ತ್ರವಿದ್ದಂತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ ವಹಿಸಿದ್ದರು. ಕೆಯೂಡಬ್ಲ್ಯೂಜೆ ರಾಜ್ಯ ಉಪಾಧ್ಯಕ್ಷ ಎಚ್.ಬಿ. ಮದನಗೌಡ ಸೇರಿದಂತೆ ಜಿಲ್ಲೆಯ ಹಿರಿಯ ಹಾಗೂ ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು.