ಎಸ್.ತಿಪ್ಪೇಸ್ವಾಮಿ 
ರಾಜ್ಯ

ಲೋಕಾ ಬಲೆಗೆ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ

ಪ್ರಮುಖ ಮುಖ್ಯಾಂಶಗಳು

  • ಚಿತ್ರದುರ್ಗ ಜಿಲ್ಲೆಯ ಹಿರಿಯೂರಲ್ಲಿ ಐದು ಲಕ್ಷ ರೂ. ಲಂಚದ ಹಣ ಪಡೆಯುತ್ತಿದ್ದಾಗ ದಾಳಿ
ಹೊಸಪೇಟೆ: ನಿಯಮಾನುಸಾರ ಕಾಮಗಾರಿ ನಿರ್ವಹಿಸಿದ್ದರೂ ಬಿಲ್ ವಿಚಾರವಾಗಿ 5 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು, ಆ ಹಣವನ್ನು ಸ್ವೀಕರಿಸುತ್ತಿದ್ದ ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಎಸ್.ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರದ ಗುತ್ತಿಗೆದಾರ ಎನ್.ಲಕ್ಷ್ಮೀಪತಿ 2024-25ನೇ ಸಾಲಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ (ಡಿ.ಟಿ.ಡಿ.ಸಿ.) ವಿಜಯನಗರ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಸಾಕ್ಷ್ಯಚಿತ್ರ, ಕ್ಯೂಆರ್ ಕೋಡ್ ಹಾಗೂ ಡೈರೆಕ್ಷನ್ ಬೋರ್ಡ್‌ಗಳನ್ನು ಅಳವಡಿಸುವ 18.37 ರೂ. ವೆಚ್ಚದ ಕಾಮಗಾರಿಯನ್ನು ನಿರ್ವಹಿಸಿದ್ದರು. ಆದರೆ, ತಾನು ಮೇಲಾಧಿಕಾರಿಯಾಗಿದ್ದು ಈ ಕಾಮಗಾರಿಯನ್ನು ನಿಯಮಾನುಸಾರ ಸರಿಯಾಗಿ ಮಾಡಿಲ್ಲ ಎಂದು ಆರೋಪಿಸಿದ ಜಂಟಿ ನಿರ್ದೇಶಕ ಎಸ್.ತಿಪ್ಪೇಸ್ವಾಮಿ ಗುತ್ತಿಗೆದಾರ ಲಕ್ಷ್ಮೀಪತಿ ಹಾಗೂ ಅವರ ಸ್ನೇಹಿತ ಲಕ್ಷ್ಮೀನಾರಾಯಣ ಅವರಿಗೆ ಕಳೆದ ಕೆಲ ತಿಂಗಳಿನಿಂದ 5 ಲಕ್ಷ ರೂ. ಲಂಚ ನೀಡುವಂತೆ ಪೀಡಿಸುತ್ತಿದ್ದರು. ಲಂಚಕ್ಕೆ ಬೇಡಿಕೆಯಿಟ್ಟ ಇಲಾಖಾ ಅಧಿಕಾರಿಯ ಸಂಭಾಷಣೆಯನ್ನು ಗುತ್ತಿಗೆದಾರರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು.
ನಿಯಮದಂತೆ ಕೆಲಸ ಮಾಡಿದ್ದರೂ ಲಂಚ ನೀಡಲು ಇಷ್ಟವಿಲ್ಲದ ಗುತ್ತಿಗೆದಾರ ಲಕ್ಷ್ಮೀಪತಿ ಅವರು ನಗರದ ಕರ್ನಾಟಕ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಜು.16 ರಂದು ಪಿಸಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಶುಕ್ರವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಅಗ್ನಿಶಾಮಕ ದಳದ ಕಚೇರಿ ಬಳಿ ಫಿರ್ಯಾದಿ ಲಕ್ಷ್ಮೀಪತಿ ಅವರಿಂದ 5 ಲಕ್ಷ ರೂಪಾಯಿ ಲಂಚದ ಹಣವನ್ನು ಪಡೆದುಕೊಳ್ಳುತ್ತಿದ್ದಾಗ ಜಂಟಿ ನಿರ್ದೇಶಕ ಎಸ್.ತಿಪ್ಪೇಸ್ವಾಮಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಬಳ್ಳಾರಿ ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ನಗರದ ಡಿವೈಎಸ್ಪಿ ಸಚಿನ್ ಎಸ್.ಚಲವಾದಿ ನೇತೃತ್ವದಲ್ಲಿ ಪಿಐ ರಾಜೇಶ್ ಎಸ್.ಲಮಾಣಿ, ಅಮರೇಶ್ ಹುಬ್ಬಳ್ಳಿ ದಾಳಿ ನಡೆಸಿದರು. ಸಿಬ್ಬಂದಿಗಳಾದ ರೇಣುಕಪ್ಪ, ಕೃಷ್ಣ, ಕುಮಾರ್‌ನಾಯ್ಕ, ಚನ್ನಬಸವ, ಅಂಜಿನಪ್ಪ, ದಾಸಪ್ಪ, ನಜೀಮ್, ಚಂದ್ರಶೇಖರ್ ಇತರರಿದ್ದರು.