ಅರಸೀಕೆರೆ ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಎಚ್. ಡಿ.ರೇವಣ್ಣ ಮಾತನಾಡಿದರು. ಜಿ.ಎಸ್, ಪರಮೇಶ್ವರಪ್ಪ, ಕೆ.ಎಸ್ .ಲಿಂಗೇಶ್, ಎನ್. ಆರ್. ಸಂತೋಷ್, ರಾಜಣ್ಣ, ಕುಮಾರ್, ಗಂಗಾಧರ್, ಶೇಖರಪ್ಪ ಇತರರಿದ್ದಾರೆ. 
ರಾಜ್ಯ

ಜೆಡಿಎಸ್ ಪಕ್ಷ ಬಲಪಡಿಸಲು ಕೈಜೋಡಿಸಿ

ಅರಸೀಕೆರೆ: ಜಿಲ್ಲೆಯಲ್ಲಿ ಜೆಡಿಎಸ್ ಬಲಪಡಿಸಲು ಕಾರ್ಯಕರ್ತರು ಹಾಗೂ ಮುಖಂಡರು ಕೈ ಜೋಡಿಸಬೇಕು ಎಂದು ಮಾಜಿ ಸಚಿವ ಎಚ್. ಡಿ.ರೇವಣ್ಣ ಹೇಳಿದರು.

ನಗರದ ಲಂಬಾಣಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಕಾರ್ಯಕರ್ತರು ಹಾಗೂ ಮುಖಂಡರನ್ನು ರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಶಕ್ತಿ ಪ್ರದರ್ಶನ ಮಾಡಲು ಹೊರಟಿರುವವರಿಗೆ ತಕ್ಕ ಉತ್ತರ ನೀಡುವ ಕಾಲ ಸನ್ನಿಹಿತವಾಗಿದೆ. ಆದ್ದರಿಂದಲೇ ಜ.24ರಂದು ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ನಿರೀಕ್ಷೆಗೂ ಮೀರಿ ಪಾಲ್ಗೊಂಡು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರಿಗೆ ಶಕ್ತಿ ತುಂಬುವ ಮೂಲಕ ಪಕ್ಷ ಬಲಪಡಿಸಲು ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ಥಗಿತವಾಗಿವೆ. ಏಕೈಕ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜತೆಗೂಡಿ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಸತ್ಯ ಹೇಳಲು ಹಿಂದೇಟು ಹಾಕುವ ಅಗತ್ಯ ನನಗಿಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಜೇನುಕಲ್ ಬೆಟ್ಟದಲ್ಲಿ ಆಣೆ ಮಾಡಲಿ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಎಸ್. ಈಶ್ವರಪ್ಪ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ಕೊಟ್ಟಿದ್ದರು. ಅದ್ಯಾವ ಕಾರಣದಿಂದ ಕೆಲಸ ಎರಡೂವರೆ ವರ್ಷ ನಿಂತು ಹೋಗಿತ್ತೋ ಗೊತ್ತಿಲ್ಲ. ಬೆಳಗಾವಿ ಅಧಿವೇಶನದ ವೇಳೆ ಆಸ್ಪತ್ರೆಗೆ ಸೇರಿದ್ದ ಶಿವಲಿಂಗೇಗೌಡ ಅವರನ್ನು ಡಿಸ್ಚಾರ್ಜ್ ಮಾಡಿಸಿ ಕರೆದುಕೊಂಡು ಬರುವ ವೇಳೆ ಸಿಎಂ ಸಿದ್ದರಾಮಯ್ಯ ಬರುವುದನ್ನು ಕಂಡು ಯಾರದ್ದೋ ಹಾಸಿಗೆ ಮೇಲೆ ಮಲಗಿ ನಾಟಕ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅಂದಾಜು ಸಮಿತಿಗೆ ಸದಸ್ಯನನ್ನಾಗಿ ಮಾಡಿದ್ದು ರೇವಣ್ಣ. ಇದು ಸುಳ್ಳು ಎಂದು ಹೇಳಿವುದಾದರೆ ಜೇನುಕಲ್ ಬೆಟ್ಟಕ್ಕೆ ಬಂದು ಆಣೆ ಮಾಡಲಿ ಎಂದು ಸವಾಲು ಹಾಕಿದರು.

ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಎಚ್. ಕೆ.ಜವರೇಗೌಡರಂತಹ ಹಿರಿಯರು ಇಂತಹವರಿಗೆ ಟಿಕೆಟ್ ಕೊಡಬಾರದು ಎಂದು ಹೇಳಿದ್ದರು. ಅವರ ಮಾತು ಕೇಳದೇ ಮೂರು ಬಾರಿ ಅವಕಾಶ ಕೊಟ್ಟು ದೊಡ್ಡ ತಪ್ಪು ಮಾಡಿದೆ ಎಂದರು.

ಜಿಲ್ಲೆಗೆ ಐಐಟಿ ತರಲು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ನಿರಂತರ ಪ್ರಯತ್ನ ನಡೆಸಿದ್ದಾರೆ. ಇಂತಹ ಮಹತ್ವದ ಕೆಲಸಕ್ಕೆ ನಿಮ್ಮ ಆಶೀರ್ವಾದ ಅಗತ್ಯವಿದೆ. ಮುಂದೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ತರುವ ಅಗತ್ಯವಿದೆ ಎಂದರು.

ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ ಮಾತನಾಡಿ, ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜಿಲ್ಲೆಯಲ್ಲಿ ಎಚ್.ಡಿ.ರೇವಣ್ಣ ಅವರದ್ದೇ ಆಡಳಿತ ಎಂಬುದನ್ನು ಮರೆಯಬಾರದು. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಸಮಾವೇಶಕ್ಕೆ ತೆರಳೋಣ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶೇಖರಪ್ಪ, ಮಾಜಿ ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ ಇತರರು ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಗಂಗಾಧರ್, ಜನತಾ ಬಜಾರ್ ಅಧ್ಯಕ್ಷ ಗಂಡಸಿ ಮಂಜಣ್ಣ, ನಗರಸಭೆ ಮಾಜಿ ಅಧ್ಯಕ್ಷ ಸಿ.ಗಿರೀಶ್, ವಕೀಲ ವಿವೇಕ್, ಬಿ.ಜೆ.ನಿರಂಜನ್,ಪುಟ್ಟಸ್ವಾಮಿ, ಹುಲ್ಲೇಕೆರೆ ಕುಮಾರ್, ಹರ್ಷವರ್ಧನ್, ಮಂಜಣ್ಣ, ಕೆಂಕೆರೆ ಕೇಶವಮೂರ್ತಿ, ಸತೀಶ್, ಲಾಳನಕೆರೆ ಯೋಗೀಶ್, ಜಾಕೀರ್, ಇಮ್ರಾನ್, ಮುನ್ನಾ, ನಾಜಿಮ್, ಇತರರು ಇದ್ದರು.