ದೊಡ್ಡಬಳ್ಳಾಪುರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮವನ್ನು ಡಿಎಚ್ಒ ಡಾ.ಕೃಷ್ಣಾಲಕ್ಕಾರೆಡ್ಡಿ ಉದ್ಘಾಟಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಶಾರದಾ ನಾಗನಾಥ್, ಡಾಕ್ಟರ್ಸ್ ಫಾರ್ ಯು ಸಂಸ್ಥೆ ವೈದ್ಯ ಡಾ.ನಿಖಿತ, ಜಿಲ್ಲಾ ಸಂಯೋಜಕರಾದ ಸಿದ್ದರಾಜು, ಕಿರಣ್, ಹಿರಿಯ ಮೇಲ್ವಿಚಾರಕರಾದ ಆನಂದ್, ಸುದೀಪ್, ಜಗದೀಶ್, ಕ್ಷಯರೋಗ ಸಂದರ್ಶಕ ಚಂದ್ರಶೇಖರ್, ಯುವರಾಜ್ ಇದ್ದರು.
ದೊಡ್ಡಬಳ್ಳಾಪುರ : ಜಿಲ್ಲೆಯಲ್ಲಿ ಕ್ಷಯರೋಗ ಸಂಪೂರ್ಣ ನಿಮೂರ್ಲನೆಗೆ ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೃಷ್ಣಾಲಕ್ಕಾ ರೆಡ್ಡಿ ಹೇಳಿದರು.
ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಮೂರ್ಲನೆ ಕೇಂದ್ರ, ಡಾಕ್ಟರ್ಸ್ ಫಾರ್ ಯೂ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಹೌದು, ಭಾರತದ ನೇತೃತ್ವದಲ್ಲಿ ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗ ನಿಮೂರ್ಲನೆ ಮಾಡಬಹುದು ಎಂಬ ಘೋಷವಾಕ್ಯದೊಂದಿಗೆ ನಡೆದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷಯರೋಗ ಮಾರಣಾಂತಿಕ ಕಾಯಿಲೆ ಅಲ್ಲ. ಸೂಕ್ತ ಚಿಕಿತ್ಸೆ ಮೂಲಕ ಅದನ್ನು ಗುಣಪಡಿಸಬಹುದು. ಕ್ಷಯರೋಗದ ಲಕ್ಷಣಗಳು ಕಂಡುಬಂದಲ್ಲಿ ಭಯಭೀತರಾಗದೆ ಪ್ರಾಥಮಿಕ ಹಂತದಲ್ಲೆ ಚಿಕಿತ್ಸೆ ಪಡೆಯುವುದರ ಮೂಲಕ ಗುಣಮುಖರಾಗಬಹುದು ಎಂದರು.
ಜಿಲ್ಲೆಯಲ್ಲಿ ಕ್ಷಯರೋಗ ನಿಮೂರ್ಲನೆಗೆ ಈಗಾಗಲೇ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಮ್ಮ ಮನೆ ಅಕ್ಕ ಪಕ್ಕದ ಜನರಿಗೆ ಕ್ಷಯರೋಗ ಗುಣಲಕ್ಷಣ ಕಂಡುಬಂದರೆ ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗಳಿಗೆ ಕರೆತನ್ನಿ ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿಮೂರ್ಲನಾ ಅಧಿಕಾರಿ ಡಾ.ನಾಗೇಶ್ ಮಾತನಾಡಿ, ಕ್ಷಯರೋಗಿಗಳ ಪತ್ತೆ ಹಚ್ಚಿ, ಚಿಕಿತ್ಸೆ ನೀಡಲು ಜಿಲ್ಲೆಯಾದ್ಯಂತ ಇಂದಿನಿಂದ 100 ದಿನ ಆಂದೋಲನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕ್ಷಯರೋಗ ಕ್ರಮೇಣ ಇಳಿಕೆಯಾಗುತ್ತಿದೆ. ಕ್ಷಯರೋಗ ಸಂಪರ್ಕಿತರಿಗೆ ಸೋಂಕಿನ ತಪಾಸಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷಯರೋಗದ ನಿಮೂರ್ಲನೆಗೆ ಒತ್ತು ನೀಡಲಾಗುವುದು ಎಂದರು.