ಯಾದಗಿರಿಯಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಉದ್ಘಾಟಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಅಪರ ಡಿಸಿ ರಮೇಶ ಕೋಲಾರ, ಶ್ರೀಹರಿ ದೇಶಪಾಂಡೆ, ಹೆಚ್ಚುವರಿ ಎಸ್ಪಿ ಧರಣೇಶ ಇತರರಿದ್ದರು.
- ಸತ್ರ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಕರೆ
- ವಿವಿಧ ಇಲಾಖೆಗಳಿಂದ ಕಾರ್ಯಕ್ರಮ ಆಯೋಜನೆ
ಯಾದಗಿರಿ: ಸಮಾಜದಲ್ಲಿರುವ ಬಾಲಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಎಲ್ಲರೂ ಮುಂದಾಗುವಂತೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಅವರು ಕರೆ ನೀಡಿದರು.
ನಗರದ ಪದವಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತ, ಜಿಪಂ, ಕಾರ್ಮಿಕ, ಪೋಲಿಸ್ ಹಾಗೂ ವಿವಿಧ ಇಲಾಖೆ ಮತ್ತು ವಿವಿಧ ಸಂ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಶಾಸನಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ಬಾಲ ಕಾರ್ಮಿಕ ಪದ್ಧತಿಗೆ ಶಿೆ ಸಹ ಇದೆ. ಈ ಹಿನ್ನೆಲೆಯಲ್ಲಿ ಬಾಲಕಾರ್ಮಿಕರನ್ನಾಗಿ ಮಕ್ಕಳನ್ನು ದುಡಿಸಿಕೊಳ್ಳುವ ಪಾಲಕರಲ್ಲಿ ಸೂಕ್ತ ಅರಿವು ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಮಕ್ಕಳು ಮನೆಗಳಲ್ಲಿ ಕೆಲಸ ಮಾಡುವುದು ಹಿರಿಯರಿಗೆ ಗೌರವ ನೀಡಿದಂತೆ. ಆದರೆ 14 ವರ್ಷದೊಳಗಿನ ಬಾಲ ಕಾರ್ಮಿಕರು ಹಾಗೂ 14ರಿಂದ 18 ವರ್ಷದೊಳಗಿನ ಕಿಶೋರ್ ಮಕ್ಕಳನ್ನು ಬಾಲ ಕಾರ್ಮಿಕತೆಗೆ ಬಳಸುವುದು ಅಪರಾಧ ಹಾಗೂ ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಸಹ ಇದೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಮಕ್ಕಳು ಜೀವನದಲ್ಲಿ ಆಕಾಶದೆತ್ತರದ ಗುರಿ ಹೊಂದಬೇಕು. ಸ್ವಾಮಿ ವಿವೇಕಾನಂದ, ಎಪಿಜೆ ಅಬ್ದುಲ್ ಕಲಾಂ ಅವರಂತಹ ಗಣ್ಯರ ಜೀವನಸಾಧನೆ ತಿಳಿದು, ದೇಶದ ಅಭಿವೃದ್ಧಿಯಲ್ಲಿ ನೆರವಾಗಬೇಕು. ಮಕ್ಕಳು ದೇಶದ ಆಸ್ತಿ, ಮಾನವೀಯತೆ ದೃಷ್ಟಿಯಿಂದ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳದಂತೆ ನೆರೆ ಹೊರೆಯವರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಅವರು ಪ್ರಮಾಣ ವಚನ ಬೋಧಿಸಿದರು. ಕಾರ್ಮಿಕ ಇಲಾಖೆ ಉಪನಿರ್ದೇಶಕ ಶ್ರೀಹರಿ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಎಸ್ಪಿ ಧರಣೇಶ, ಅಧಿಕಾರಿಗಳಾದ ತಿಪ್ಪಣ್ಣ ಸಿರಸಗಿ, ದಿನೇಶಕುಮಾರ, ಸಾವಿತ್ರಿ ಗುಗ್ಗರಿ, ಡಾನ್ ಬಾಸ್ಕೋ ಸಂಸ್ಥೆ ನಿರ್ದೇಶಕ ವಾಸು ಫ್ರಾನ್ಸಿಸ್, ವರ್ಲ್ಡ್ ವಿಜಿಯನ್ ಸಂಸ್ಥೆ ಅನಿಲ ಸೇರಿ ಇತರರಿದ್ದರು.
ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ಸ್ವಾಗತಿಸಿದರು. ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಚರ್ಚಾಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬೆಳಗ್ಗೆ ಬಾಲಕಾರ್ಮಿಕ ವಿರೋಧಿ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಮರಿಯಪ್ಪ ಚಾಲನೆ ನೀಡಿದರು.
"
ಸಾಮಾನ್ಯ ಮಕ್ಕಳಂತೆ ಬಾಲಕಾರ್ಮಿಕ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು. ಮಕ್ಕಳು ಬಾಲ ಕಾರ್ಮಿಕರಾಗಿ ಉಳಿಯುವುದರಿಂದ ದೇಶದ ಅಭಿವೃದ್ಧಿಗೆ ಮಾರಕ. ಅದರಂತೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೂ ತೊಂದರೆಯಾಗುವದರಿಂದ ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ನೆರವಾಗಬೇಕು.
— ಮರುಳಸಿದ್ದಾರಾಧ್ಯ ಎಚ್.ಜೆ. ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು, ಯಾದಗಿರಿ