Join hands to build an addiction-free society 
ರಾಜ್ಯ

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ

ಕೊರಟಗೆರೆ: ಮಾದಕ ವ್ಯಸನಮುಕ್ತ ಸಮಾಜ ನಿಮಾರ್ಣವು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಕೊರಟಗೆರೆ ಪೊಲೀಸ್​ ಠಾಣೆಯ ಪಿಎಸ್​ಐ ತೀರ್ಥೇಶ್​ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಪ್ರಯುಕ್ತ ಪೊಲೀಸ್​ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನ ಮತ್ತು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಜನತೆಯನ್ನು ಗುರಿಯಾಗಿಸಿಕೊಂಡು ವಿವಿಧ ಮಾದರಿಗಳಲ್ಲಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಮಾದಕ ವಸ್ತುಗಳ ಸಾಗಣೆ, ಸಂಗ್ರಹಣೆ ಮತ್ತು ಗಾಂಜಾ ಬೆಳೆ ಪ್ರಕರಣಗಳ ವಿರುದ್ಧ ಪೊಲೀಸ್​ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದರು.
ಪಾಲಕರು ತಮ್ಮ ಮಕ್ಕಳ ನಡವಳಿಕೆಯ ಮೇಲೆ ನಿಗಾ ವಹಿಸುವುದು ಅಗತ್ಯವಾಗಿದ್ದು, ಸಮಾಜದ ಸಹಭಾಗಿತ್ವದಿಂದ ಮಾತ್ರ ಮಾದಕ ವ್ಯಸನವನ್ನು ತಡೆಗಟ್ಟಲು ಸಾಧ್ಯ ಎಂದರು.