Join hands to build a hunger-free society.
ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಉಳಿಯುವ ಆಹಾರವನ್ನು ಹಸಿವಿನಿಂದ ಬಳಲುತ್ತಿರುವ ಬಡವರು, ನಿರ್ಗತಿಕರಿಗೆ ತಲುಪಿಸುವ ಮೂಲಕ ಹಸಿವುಮುಕ್ತ ಸಮಾಜ ನಿಮಾರ್ಣದ ನಿಟ್ಟಿನಲ್ಲಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕರ್ನಾಟಕ ಫುಡ್ ಬ್ಯಾಂಕ್ ಸಂಸ್ಥೆ ಮಾಡುತ್ತಿರುವ ಸೇವೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಫುಡ್ಬ್ಯಾಂಕ್ ಸಂಸ್ಥೆ ಮುಖ್ಯಸ್ಥ ಮಾರಾಂಡಹಳ್ಳಿ ಎಂ.ಬಿ. ಕೃಷ್ಣಮೂರ್ತಿ ಹಾಗೂ ಮುಳಬಾಗಿಲಿನ ಡಿವಿಜಿ ಕನ್ನಡ ಸಂಘದ ಅಧ್ಯಕ್ಷ ಕೆ. ಮಧುಸೂದನ್, ತಿಪಟೂರಿನ ಫುಡ್ ಬ್ಯಾಂಕ್ ಲೋಕೇಶ್ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಆಹಾರ ವ್ಯರ್ಥವಾಗುವುದನ್ನು ತಡೆಯುವುದರ ಜತೆಗೆ, ಅಗತ್ಯವಿರುವವರ ಹಸಿವು ನೀಗಿಸುವ ಕಾರ್ಯಕ್ಕೆ ಸಮಾಜದಲ್ಲಿ ಹೆಚ್ಚಿನ ಆದ್ಯತೆ ದೊರೆಯಬೇಕು. ಸಮಾರಂಭಗಳಲ್ಲಿ ಬಳಕೆಯಾಗದೆ ಉಳಿಯುವ ಆಹಾರವನ್ನು ಕಸದ ಪಾಲು ಮಾಡದೆ, ಹಸಿವಿನಿಂದ ಬಳಲುತ್ತಿರುವವರಿಗೆ ತಲುಪಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದ ಎಲ್ಲ ವರ್ಗದ ಜನರು ಇಂತಹ ನಿಸ್ವಾರ್ಥ ಸೇವಾ ಕಾರ್ಯಗಳಿಗೆ ಪ್ರೋತ್ಸಾಹ ಹಾಗೂ ಬೆಂಬಲ ನೀಡಬೇಕು. ಸಂಘ-&ಸಂಸ್ಥೆಗಳು ಕೈಗೊಳ್ಳುವ ಸಮಾಜಮುಖಿ ಚಟುವಟಿಕೆಗಳಿಗೆ ಜಿಲ್ಲಾಡಳಿತದಿಂದಲೂ ಅಗತ್ಯ ಸಹಕಾರ ನೀಡಲಾಗುವುದು. ಜಿಲ್ಲಾಡಳಿತದ ನೆರವು ಹಾಗೂ ಸೌಲಭ್ಯಗಳನ್ನು ಸೇವಾ ಉದ್ದೇಶಕ್ಕೆ ಸಮರ್ಪಕವಾಗಿ ಬಳಸಿಕೊಂಡು, ಯಾವುದೇ ಕಾರಣಕ್ಕೂ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಗ್ರಾಮ ಭಾರತಿ ಟ್ರಸ್ಟ್ ಹಾಗೂ ಫುಡ್ ಬ್ಯಾಂಕ್ ಸಂಸ್ಥೆಗಳು ಕಳೆದ ಹಲವು ವರ್ಷಗಳಿಂದ ಆಹಾರ ವಿತರಣೆ ಮಾತ್ರವಲ್ಲದೆ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಶಾಲಾ ಮಕ್ಕಳಿಗೆ ಆಹಾರ, ಬಟ್ಟೆ ಹಾಗೂ ಶೈಕ್ಷಣಿಕ ಪರಿಕರ ಒದಗಿಸುತ್ತಿರುವುದು ಶ್ಲಾಘನೀಯ.