ನಶೆ ಮುಕ್ತ ಚಿಂತಾಮಣಿ ನಿರ್ಮಾಣಕ್ಕೆdrug ಕೈ ಜೋಡಿಸಿದ ಆಟೋ ಚಾಲಕರು 'ಬೇಡ ಬ್ರೋ' ಅಭಿಯಾನಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು.
ಮಾದಕ ವಸ್ತುಗಳಿಗೆ ದಾಸರಾದರೆ ಇಡೀ ಕುಟುಂಬವೇ ಬೀದಿಪಾಲಾಗುತ್ತದೆ. ಆದ್ದರಿಂದ ಚಿಂತಾಮಣಿಯನ್ನು ನಶೆ ಮುಕ್ತಗೊಳಿಸಲು ನೀವೆಲ್ಲರೂ ಒಕ್ಕೊರಲಿನಿಂದ ಡ್ರಗ್ಸ್ ಬೇಡ ಬ್ರೋ ಎಂದು ಪಣ ತೊಡಿ ಎಂದು ತಹಸೀಲ್ದಾರ್ ಸುದರ್ಶನ್ ಯಾದವ್ ಕರೆ ನೀಡಿದರು.
ತಾಲೂಕು ಆಡಳಿತ, ಪೊಲೀಸ್ ಇಲಾಖೆದಿಂದ ನಗರದ ಜನರಿಗೆ ಮಾದಕ ವಸ್ತುಗಳ ವ್ಯಸನದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಚಿಂತಾಮಣಿಯನ್ನು ನಶೆಮುಕ್ತ ಹಾಗೂ ಡ್ರಗ್ಸ್ಮುಕ್ತ ನಗರವನ್ನಾಗಿ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿದ್ದ 'ಬೇಡ ಬ್ರೋ' ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಚಿಂತಾಮಣಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವರಾಜ್ ಮಾತನಾಡಿ, ದೇಶದಲ್ಲಿ ಪ್ರತಿದಿನ ಸಾವಿರಾರು ಜನರು ಧೂಮಪಾನ, ಗಾಂಜಾ, ಗುಟ್ಕಾ ಮುಂತಾದ ಮಾದಕ ವಸ್ತುಗಳಿಂದ ಬರುವ ಶ್ವಾಸಕೋಶದ ಕ್ಯಾನ್ಸರ್ನಿಂದ ಮೃತಪಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಮಾದಕ ವ್ಯಸನಗಳನ್ನು ತೊಡೆದುಹಾಕಲು ಕರ್ನಾಟಕ ಸರ್ಕಾರ ಆರಂಭಿಸಿರುವ 'ರೈಸ್' ಯೋಜನೆ ಬಗ್ಗೆ ವಿವರಿಸಿದರು.
ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟವಾಗುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ, ಆರೋಗ್ಯಯುತವಾದ ಚಿಂತಾಮಣಿ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.ಚಿಂತಾಮಣಿ ನಗರ ಠಾಣೆ ಇನ್ಸ್ಪೆಕ್ಟರ್ ವಿಜಿಕುಮಾರ್ ಮಾತನಾಡಿ, ಆಟೋ ಚಾಲಕರು ನೀವು ಗಲ್ಲಿಗಲ್ಲಿಗಳಲ್ಲಿ ಸಂಚರಿಸುತ್ತೀರಿ, ಶಾಲಾ&ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರ ಸಂಪರ್ಕ ನಿಮಗಿರುತ್ತದೆ.
ಸಮಾಜಕ್ಕೆ ನಿಮ್ಮ ಕಡೆಯಿಂದಲೂ ಒಳ್ಳೆಯ ಸಂದೇಶ ನೀಡುವ ಅವಕಾಶವಿದೆ. ಸ್ಕೂಲ್ ಪರಿಸರಗಳಲ್ಲಿ ಸಿಗರೇಟ್ ಅಥವಾ ಇತರ ಗಾಂಜಾ ಚಟಗಳಿಗೆ ಬಲಿಯಾಗುತ್ತಿರುವ ಹುಡುಗರಿಗೆ ಬುದ್ಧಿಮಾತು ಹೇಳಿದರೆ ಅವರ ಜೀವನವೇ ಬದಲಾಗುತ್ತದೆ ಎಂದರು.drug
ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ, ನಮ್ಮೂರು ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರಲು ಸಾಧ್ಯ. ಕಷ್ಟಪಟ್ಟು ದುಡಿಯುವ ಆಟೋ ಚಾಲಕರಿಗೆ ನಿಮ್ಮ ಭವಿಷ್ಯ ನಮಗೆ ಮುಖ್ಯ. ಡ್ರಗ್ಸ್, ಸೊಲ್ಯೂಷನ್ ಕುಡಿಯುವುದು, ಟ್ಯಾಬ್ಲೆಟ್ಸ್ ತಿನ್ನುವುದು ಮತ್ತು ಇಂಜೆಕ್ಷನ್ ಹಾಕಿಕೊಳ್ಳುವುದರಿಂದ ದೂರವಿದ್ದು ಚಿಂತಾಮಣಿ ಡ್ರಗ್ಸ್ ಮುಕ್ತವಾಗಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ದಂಡಾಧಿಕಾರಿಗಳು, ನಗರ ಮತ್ತು ಗ್ರಾಮಾಂತರ ಠಾಣೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಅಟೋ ಚಾಲಕರು ಚಿಂತಾಮಣಿಯನ್ನು ನಶೆ ಮುಕ್ತಗೊಳಿಸುವುದಾಗಿ ಎಲ್ಲರೂ ಪ್ರತಿೆ ಮಾಡಿದರು.