- ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಾಜೀವ್ ಕುಮಾರ್ ಮಾಹಿತಿ
ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ಕ್ರಾಸ್ನ ಜ್ಞಾನ ಜ್ಯೋತಿ ಶಾಲೆ ಆವರಣದಲ್ಲಿ ಡಿ.6ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಾಜೀವ್ ಕುಮಾರ್ ತಿಳಿಸಿದರು. job
ಜ್ಞಾನ ಜ್ಯೋತಿ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಬಿ.ಎಂ.ಮೂರ್ತಿ ಅವರ 25ನೇ ಪುಣ್ಯಸ್ಮರಣೆ ಅಂಗವಾಗಿ ಮೇಳ ಆಯೋಜಿಸಿದ್ದು, ಉದ್ಯೋಗದಾತ ಫೌಂಡೇಷನ್, 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳ ಸಹಯೋಗದಲ್ಲಿ ಸ್ಥಳಿಯ ಯುವಜನರು ಭವಿಷ್ಯ ರೂಪಿಸಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಮೇಳಕ್ಕೆ ಬರುವ ಕಂಪನಿಗಳಿಗೆ ಹತ್ತು ಸಾವಿರ ಉದ್ಯೋಗಿಗಳ ಅವಶ್ಯಕತೆ ಇದೆ. ಎಸ್ಸೆಸ್ಸೆಲ್ಸಿ, ಐಟಿಐ, ಡಿಪೊಮಾ, ಡಿ.ಎಡ್, ಬಿ.ಎಡ್, ಡಿ ಫಾರ್ಮ, ಬಿ ಫಾರ್ಮ, ಯಾವುದೇ ಪದವಿ ಹೊಂದಿರುವ ಯುವಕ ಯುವತಿಯರು ಭಾಗವಹಿಸಬಹುದು. ಯಾವುದೇ ಶುಲ್ಕವಿಲ್ಲ, ಸ್ವವಿವರ, ವಿದ್ಯಾರ್ಹತೆಯ ಪ್ರಮಾಣಪತ್ರದೊಂದಿಗೆ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು. ಅಗತ್ಯ ಕೌಶಲಗಳ ಕೊರತೆಯಿದ್ದಲ್ಲಿ ತರಬೇತಿ ನೀಡಲಾಗುವುದು ಎಂದರು.
ಉದ್ಯೋಗದಾತ ಫೌಂಡೇಷನ್ ಅಧ್ಯಕ್ಷ ರುಕ್ಮಾಂಗದ ಮಾತನಾಡಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಸುತ್ತಮುತ್ತಲಿನ ಕಂಪನಿಗಳನ್ನು ಕರೆಸುತ್ತಿರುವುದರಿಂದ ಯುವ ಜನರು ಉದ್ಯೋಗಕ್ಕಾಗಿ ಹೆಚ್ಚು ದೂರ ಹೋಗಬೇಕಾಗುವುದಿಲ್ಲ. ಐಫೋನ್ ತಯಾರಿಕಾ ಕಂಪನಿ 1500 ಮಂದಿ ಐಟಿಐ, ಡಿಪ್ಲೊಮಾ, ಪಿಯುಸಿ ಆಗಿರುವ ಯುವಜನರಿಗೆ ಉದ್ಯೋಗ ನೀಡಲು ಆಸಕ್ತಿ ತೋರಿಸುತ್ತಿದ್ದಾರೆ ಎಂದರು.
ಕ್ರಿಯೆಟಿವ್ ಇಂಜಿನಿಯರಿಂಗ್ ಕಂಪನಿಗೆ ಐಟಿಐ, ಡಿಪ್ಲೊಮಾ ಮಾಡಿರುವ 500 ಉದ್ಯೋಗಿಗಳ ಅವಶ್ಯಕತೆಯಿದೆ. ಮೆಟ್ ಪ್ಲಸ್ ಕಂಪನಿಗೆ ಡಿಫಾರ್ಮ, ಬಿಫಾರ್ಮ ಮಾಡಿರುವ ನೂರು ಜನರ ಅಗತ್ಯವಿದೆ. ಕೋಲಾರದ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಗೆ ಐಟಿಐ, ಡಿಪ್ಲೊಮಾ, ಪದವಿ ಹೊಂದಿರುವ 500 ಮಂದಿಯ ಅಗತ್ಯವಿದೆ ಎಂದರು.
ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕೆ.ಗುಡಿಯಪ್ಪ, ಜ್ಞಾನ ಜ್ಯೋತಿ ಶಾಲೆ ಪ್ರಾಂಶುಪಾಲೆ ಮನುಶ್ರೀ ರಾಜೀವ್ ಕುಮಾರ್ ಇದ್ದರು.