ಚಿತ್ರರ್ಶಿಷಿಕೆ. ಆಳಂದ ತಾಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಬುಧವಾರ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ ಸಸಿಗೆ ನೀರೆರೆದು ಉದ್ಘಾಟಿಸಿದರು. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ, ಹರ್ಷಾನಂದ ಗುತ್ತೇದಾರ್​, ಅಂಬಾರಾಯ ಅಷ್ಟಗಿ, ಸಿದ್ದರಾಮ ಪ್ಯಾಟಿ ಇತರರಿದ್ದರು. 
ರಾಜ್ಯ

ನವಕಲ್ಯಾಣವಾಗಲಿದೆ ಜಿಡಗಾ ಮಠ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ.ಮುರುರಾಜೇಂದ್ರ ಮಹಾಸ್ವಾಮೀಜಿ ನುಡಿ
  • ಗುರುಪೂರ್ಣಿಮೆ ಕಾರ್ಯಕ್ರಮ
ಆಳಂದ: ಬಸವಣ್ಣನವರ ತತ್ವ ಸಿದ್ಧಾಂತದ ಮೇಲೆ ಬಸವಕಲ್ಯಾಣ ಒಂದಾದರೆ, 21ನೇ ಶತಮಾನದಲ್ಲಿ ನವಕಲ್ಯಾಣ ಎಂಬ ನಾಮಕರಣದೊಂದಿಗೆ ಹೊರಹೊಮ್ಮಲಿದೆ ಶ್ರೀ ಸಿದ್ಧರಾಮ ಶಿವಯೋಗಿಗಳ ಭಕ್ತಿ ಪ್ರಧಾನವಾದ ಜಿಡಗಾ ಮಠ ಎಂದು ಜಿಡಗಾ ಮುಗಳಖೋಡ ಮಠದ ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ ನುಡಿದರು.
ಜಿಡಗಾ ನವಕಲ್ಯಾಣ ಮಠದಲ್ಲಿ ಬುಧವಾರ ಆಯೋಜಿಸಿದ್ದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅಜ್ಞಾನದ ಅಂಧಕಾರ ದೂರ ಮಾಡಿ ಜ್ಞಾನದ ಬೆಳಕು ತೋರುವವರೇ ಗುರುದೇವ. ಜ್ಞಾನವಿಲ್ಲದೆ ಜೀವನಕ್ಕೆ ಮುಕ್ತಿ ಸಿಗಲ್ಲ. ಸಮಸ್ತ ಜೀವರಾಶಿಗಳನ್ನು ನಿಯಂತ್ರಿಸಲು ದೇವಾನುದೇವತೆಗಳು ಎಷ್ಟೋ ಸಲ ಗುರು ಎಂಬ ಶಕ್ತಿಗೆ ಮೊರೆಹೋಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದರು.
ಶಿಕ್ಷಣ ಅಜ್ಞಾನ ಎಂಬ ಕಣ್ಣು ಬೇನೆಯನ್ನು ಜ್ಞಾನ ಎಂಬ ಆಂಜನದಿಂದ ಗುಣಪಡಿಸುತ್ತದೆ. ಕೀರ್ತಿ ಎಲ್ಲೆಡೆ ಹರಿಯುವಂತೆ ಮಾಡುವಂತಹ ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಗುರುಪೂರ್ಣಿಮೆ ಮಹತ್ವದ್ದು ಎಂದ ಅವರು, ಭಕ್ತರ ಭಕ್ತಿ ಸೇವೆಯಿಂದ ಇಂದು ಜಿಡಗಾ ಮಠ 500 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಮಾತನಾಡಿ, ಜಿಡಗಾ ಮಠ ರಾಜ್ಯವಲ್ಲದೆ ರಾಷ್ಟ್ರಾದ್ಯಂತ ಭಕ್ತರ ಮನ ಮುಟ್ಟಿದೆ. ಈ ಮಠ ಕಲ್ಯಾಣ ಪರ್ವತವಾಗಲಿದೆ. ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಇಲ್ಲಿ ಕೆರೆ ನಿಮಾರ್ಣ ಕುರಿತು ಮಠದಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಿನ ಸರ್ಕಾರ ಕೆರೆ ನಿಮಾರ್ಣಕ್ಕೆ 25 ಕೋಟಿ ರೂ. ಅನುದಾನ ಕಾದಿರಿಸಿದ್ದು ಯಾತಕ್ಕೂ ಸಾಲದು. 200 ಕೋಟಿ ಅನುದಾನ ಸರ್ಕಾರ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್​ ಮಾತನಾಡಿ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ಕೆ ಭಕ್ತರು ಹೆಚ್ಚೆಚ್ಚು ಕೈಜೋಡಿಸಬೇಕು. ಅಂದಾಗಲೇ ಇನ್ನಷ್ಟು ಮಕ್ಕಳು ಇಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ದಾಸೋಹಕಾಗಿ 100 ಕ್ವಿಂಟಾಲ್​ ಅಕ್ಕಿ ಸಮರ್ಪಿಸುವುದಾಗಿ ಹೇಳಿದರು.
ಚಿನಮಗಿರಿ ಶ್ರೀ ಮಹಾಂತ ಶಿವಾಚಾರ್ಯ ಆಶೀರ್ವಚನ ನೀಡಿದರು. ಸಿದ್ದರಾಮ ಪ್ಯಾಟಿ, ಅಂಬಾರಾಯ ಬೆಳಮಗಿ ಮಾತನಾಡಿದರು. ಪ್ರಮುಖರಾದ ನೀಲಕಂಠ ಮೂಲಗೆ, ಪವನಕುಮಾರ ವಳಕೇರಿ, ಸಿದ್ದರಾಮ ಪ್ಯಾಟಿ, ರೇವಣಸಿದ್ದಪ್ಪ ನಾಗೂರ, ಶಂಕರರಾವ ದೇಶಮುಖ, ಮಲ್ಲಪ್ಪ ಹತರಕಿ, ಡಾ.ಮಹಾದೇವಿ ಮಾಲಕರಡ್ಡಿ ಇತರರಿದ್ದರು. ಭಕ್ತಿ ಸೇವೆ ಸಲ್ಲಿಸಿದ ಭಕ್ತರನ್ನು ಸನ್ಮಾನಿಸಿ ಆಶೀರ್ವದಿಸಲಾಯಿತು.