ಕಂಪ್ಲಿಯಲ್ಲಿ ಚಿನ್ನದ ಆಭರಣ ತಯಾರಿಕೆಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಕೆಲಸ ಸ್ಥಗಿತಗೊಂಡಿರುವುದು.
ಕಂಪ್ಲಿ: ನಿತ್ಯ ಕೈಯಲ್ಲಿ ಬೆಲೆಬಾಳುವ ಚಿನ್ನ ಹಿಡಿದು ಗ್ರಾಹಕರ ಬೇಡಿಕೆಯಂತೆ ಆಭರಣ ತಯಾರಿಸುವ ಅಕ್ಕಸಾಲಿಗರು ಪ್ರಸ್ತುತ ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಶದ ಆರ್ಥಿಕತೆ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸಧ್ಯಕ್ಕೆ ಚಿನ್ನ ಖರೀದಿಸಬೇಡಿ ಎಂದು ಹೇಳಿಕೆ ಕೊಟ್ಟ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಎಂದಿಗಿಂತ ಚಿನ್ನ ಖರೀದಿ ಕಡಿಮೆಯಾಗತೊಡಗಿದ್ದು, ತಾಲೂಕಿನಲ್ಲಿಯೂ ಬೇಡಿಕೆ ಕುಸಿದಿದೆ.
ಪಾರಂಪರಿಕವಾಗಿ ಚಿನ್ನದ ಆಭರಣ ತಯಾರಿಸುವವರು ಕೆಲಸ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಕೆಲವರು ಬೇರೆ ವೃತ್ತಿಗಳತ್ತ ದೃಷ್ಟಿ ಹಾಯಿಸುತ್ತಿದ್ದರೆ, ಮತ್ತೆ ಹಲವರು ಕೆಲಸ ಅರಸಿ ಬೇರೆಡೆ ತೆರಳುತ್ತಿದ್ದಾರೆ. ಅಕ್ಕಸಾಲಿಗರ ಒಲೆ, ಊದುಕೊಳವೆ, ತಳಕಲ್ಲು-ಸುತ್ತಿಗೆ, ತಂತಿ ಎಳೆವ ಹಲಗೆ, ಮೂಸೆ, ಕೈಗತ್ತರಿ, ಒಲೆ, ಕುಲುಮೆ, ನಾನಾ ಯಂತ್ರಗಳಿಗೆ ಕೆಲಸ ಇಲ್ಲದಂತಾಗಿದೆ.
ಒಂದೆಡೆ ಚಿನ್ನದ ದರ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಆಭರಣದ ತಯಾರಿಕೆ ಬದಲಿಗೆ ನವೀನ ಶೈಲಿಯ ಚಿನ್ನದ ಸಿದ್ಧ ಆಭರಣಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಚಿನ್ನ-ಬೆಳ್ಳಿ ಕರಗಿಸುವ, ಪಾಲಿಶ್ ಹಾಕುವ ಕೆಲಸಗಾರರಿಗೂ ಕೆಲಸ ಇಲ್ಲದಂತಾಗಿದೆ.
ಕೆಲಸ ಇಲ್ಲದೆ ಬ್ಯಾಂಕ್‌ಗಳಲ್ಲಿ ಚಿನ್ನ ಅಡಮಾನ ಇಟ್ಟುಕೊಳ್ಳುವ ಚಿನ್ನದ ಪರೀಕ್ಷೆಗೆ ಹಾಗೂ ಬೇರೆ ಬೇರೆ ವೃತ್ತಿಗಳತ್ತ ವಾಲುತ್ತಿದ್ದಾರೆ ಎಂದು ಚಿನ್ನ-ಬೆಳ್ಳಿ ಕರಗಿಸುವ ಸುಹಾಸ್ ಬೇರ‌್ಗಾರ್, ಗಿರಿರಾಜಾಚಾರ್ ನೋವು ತೋಡಿಕೊಂಡರು.
ದರ ಏರಿಕೆಯಿಂದ ಮದುವೆಗೆ ಅಗತ್ಯವಿದ್ದಷ್ಟೆ ಆಭರಣ ಕೊಳ್ಳುವಂತಾಗಿದೆ. ವಿವಾಹಕ್ಕೆ ಅಗತ್ಯವಿರುವ ಮಾಂಗಲ್ಯ, ಕಾಲುಸುತ್ತು (ಐದುಕಡಗ), ಆರ್ಥಿಕ ಸ್ಥಿತಿವಂತರು ಇದರೊಟ್ಟಿಗೆ ಜುಮುಕಿ, ಬೆಂಡೋಲಿ ಮಾತ್ರ ಖರೀದಿಸುತ್ತಿದ್ದಾರೆ. ಗ್ರಾಮ್‌ಗಳ ಲೆಕ್ಕದಲ್ಲಿ ಮಾಂಗಲ್ಯ ಖರೀದಿಸುತ್ತಿದ್ದಾರೆ.
ಚಿನ್ನ ಖರೀದಿ, ಮಾರಾಟಕ್ಕೆ ಹೆಚ್ಚಿನ ದಾಖಲೆಗಳು ಬೇಕಿಲ್ಲ. ತಕರಾರು ಇಲ್ಲದ ಕಾರಣ ಗಟ್ಟಿ ಚಿನ್ನದ ಮೇಲೆ ಹೂಡಿಕೆಗೆ ಆಸಕ್ತಿ ತೋರುತ್ತಿದ್ದರಿಂದಲೂ ಆಭರಣ ಕೊಳ್ಳುವಲ್ಲಿ ಜನರ ಆಸಕ್ತಿ ಕಡಿಮೆ ಆಗಿದೆ ಎನ್ನುವುದು ಕೆಲವರ ತರ್ಕವಾಗಿದೆ.
ತಾಲೂಕಿನ ಚಿನ್ನದ ವ್ಯಾಪಾರ ಕೃಷಿ ಮತ್ತು ಕೃಷಿಕರ ಮೇಲೆ ಅವಲಂಬಿತವಾಗಿದೆ. ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯ ಸಲುವಾಗಿ ಎರಡನೇ ಬೆಳೆಗೆ ನೀರಿಲ್ಲದಂತಾಗಿ ರೈತರು ಆದಾಯ ವಂಚಿತರಾಗಿದ್ದಾರೆ.
ಪ್ರತಿ ಬೆಳೆಗೂ ರಸಗೊಬ್ಬರ ಸೇರಿ ಕೃಷಿ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿರುವುದು, ಆದಾಯ ಕಡಿಮೆಯಾಗುತ್ತಿರುವುದರಿಂದ ಚಿನ್ನದ ಆಭರಣ ಕೊಳ್ಳುವಲ್ಲಿ ರೈತರು ಹಿಂದೇಟು ಹಾಕುತ್ತಿದ್ದಾರೆ.
"
ಜೋಡಿ ತಾಳಿ, ಐದು ಕಡಗ, ಜುಮುಕಿ, ಬೆಂಡಾಲಿ ಖರೀದಿಸಲು ಒಂದೇ ಕುಟುಂಬದ ಹೆಚ್ಚಿನ ಸಂಖ್ಯೆಯ ಜನರು ಬರುವುದರಿಂದ ಬಂಗಾರದ ವ್ಯಾಪಾರ ಜೋರಾಗಿದೆ ಎನ್ನುವಂತೆ ಕಾಣುತ್ತಿದೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ. ರೈತರಿಗೆ ಉತ್ತಮ ಆದಾಯವಿದ್ದಲ್ಲಿ ಚಿನ್ನದ ವ್ಯಾಪಾರ ವೃದ್ಧಿಸಲಿದೆ.
— ಜಗದೀಶ್ ರಾಯ್ಕರ್ ಸರಾಫ್ ವರ್ತಕರು ಮತ್ತು ಕೆಲಸಗಾರರ ಸಂಘದ ಅಧ್ಯಕ್ಷ, ಕಂಪ್ಲಿ