ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ  
ರಾಜ್ಯ

ಬಿಡದಿ ಟೌನ್​ಶಿಪ್​ ವಿರೋಧಿಸಿ ನಾಳೆ ಜೆಡಿಎಸ್ ಪಾದಯಾತ್ರೆ: ಗೃಹಸಚಿವ ಪ್ರಿಯಾಂಕ್​ ಖರ್ಗೆ ಪ್ರತಿಕ್ರಿಯೆ

ಪ್ರಮುಖ ಮುಖ್ಯಾಂಶಗಳು

  • ಬಿಡದಿ ಟೌನ್​ಶಿಪ್​ ವಿರೋಧಿಸಿ ನಾಳೆ ಜೆಡಿಎಸ್ ಪಾದಯಾತ್ರೆ
  • ಈ ವಿಚಾರಕ್ಕೆ ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ
ಬೆಂಗಳೂರು: ರಾಜ್ಯದಲ್ಲಿ ಬಿಡದಿ ಟೌನ್​ಶಿಪ್​ ವಿವಾದ ಬಲು ಜೋರಾಗಿದ್ದು, ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್​ ಬೃಹತ್ ಪ್ರತಿಭಟನೆ ಕೈಗೊಂಡಿದೆ. ನಾಳೆ ಜೆಡಿಎಸ್​ ಪಾದಯಾತ್ರೆಯನ್ನು ಹಮ್ಮಿಕೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಪಾದಯಾತ್ರೆ ಮಾಡಿಕೊಳ್ಳಲಿ. ರಾಜಸ್ಥಾನದವರು ಅರಾವಳಿ ತೆಗೆಯಲು ಮುಂದಾಗಿದ್ದು ನೆನಪಿದೆಯಾ? ಅದು ಯಾರ ಸರ್ಕಾರ? ಇಡೀ ಅರಾವಳಿಯನ್ನೇ ಅದಾನಿ ಅಂಬಾನಿಗೆ ಮಾರಲು ಹೊರಟಿದ್ದರಲ್ಲ. ಅದರ ಬಗ್ಗೆ ಏಕೆ ಅವರು ಮಾತಾಡುತ್ತಿಲ್ಲ, ಯಾವಾಗ ಬಿಜೆಪಿ-ಜೆಡಿಎಸ್​ ಮಾತನಾಡುತ್ತೆ? ನೂರು ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದಿದ್ದಾರೆ ಅಲ್ಲವೇ ಬಿಜೆಪಿಯವರು, ಅದನ್ನು ಹೇಗೆ ಮಾಡುತ್ತಿದ್ದರು ಎಂದು ಹೇಳಲಿ ಎಂದರು.
ಪರಿಸರವನ್ನು ನಾವು ನಿರ್ಲಕ್ಷ್ಯ ಮಾಡುವ ಕಾರಣ, ಬೆಂಗಳೂರಲ್ಲಿ ಈಗ 15 ಲಕ್ಷ ಗಿಡಗಳನ್ನು ನೆಡ್ತಿದ್ದೀವಿ. ಒಂದು ದೊಡ್ಡ ಜವಾಬ್ದಾರಿಯನ್ನು ಹಾರೀಸ್, ಬಿಡಿಎ ಹಾಗೂ ಕೃಷ್ಣಬೈರೇಗೌಡರು ಹೊತ್ತುಕೊಂಡಿದ್ದಾರೆ. ನಾವು ಬಿಜೆಪಿ ಅವರಂತೆ ಇಡೀ ಅಂಡಮಾನನ್ನೇ ಕಿತ್ತು ಬಿಸಾಕುತ್ತಿಲ್ಲ. ಅಂಡಮಾನಿಗೂ ಬೆಂಗಳೂರಿಗೂ ಎಂತ ವ್ಯತ್ಯಾಸ? ಅವರಿಗೆ ಸಾಮಾನ್ಯ ಪ್ರಜ್ಞೆ ಇದೆಯಾ? ಎಂದು ಪ್ರಶ್ನಿಸಿದರು.
ಅಂಡಮಾನ್ ರಿಚ್​ ಇನ್​ ಬಯೋಡೈವರ್ಸಿಟಿ. ಅದಕ್ಕೂ ಬಿಡದಿಗೂ ಅಜಗಜಾಂತರ ವ್ಯತ್ಯಾಸವಿದೆ. ಬ್ರ್ಯಾಂಡ್​ ಬೆಂಗಳೂರು ಅಂತ ಸಿಎಂ ಆಗಿದ್ದಾಗ ಜೆಡಿಎಸ್ ಅವರು ಮಾಡಿದ್ದರಲ್ಲ. ಅವಾಗ ಅವರು ಯಾವ ಬ್ರ್ಯಾಂಡ್​ ಕಟ್ಟಿದ್ದರು? ಎಷ್ಟು ಮರಗಳನ್ನು ನೆಟ್ಟರು? ಎಂದು ಪ್ರಿಯಾಂಕ್​ ಕೇಳಿದರು

ನಾಯಕತ್ವ ತಿರಸ್ಕಾರ

ಜೆಡಿಎಸ್​-ಬಿಜೆಪಿಯವರು ನನ್ನ ನಾಯಕತ್ವವನ್ನು ತಿರಸ್ಕಾರ ಮಾಡಿರುವ ವಿಚಾರಕ್ಕೆ ಉತ್ತರಿಸಿದ ಸಚಿವರು, ಅದಕ್ಕೆ ಅವರೇ ಕ್ರಾಸ್ ಓಟಿಂಗ್ ಮಾಡಿ ನಮ್ಮನ್ನು ಗೆಲ್ಲಿಸಿದ್ದಾರೆ. ನಾವ್ಯಾರು ಆಮಿಷ ಹಾಕಿಲ್ಲ. ನಿಮ್ಮ ಜನ ವಿರೋಧಿ ವಿಚಾರಗಳನ್ನು ತಿರಸ್ಕರಿಸಿ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದರು.

ವೋಟ್​ಚೂರಿ ಕಿಡಿ

ವೋಟ್‌ಚೂರಿ ಬಗ್ಗೆ ನಾವು ಸಾಕ್ಷಿ ಕೊಟ್ಟಿದ್ದೇವೆ. ಅದರ ಬಗ್ಗೆ 22 ಸಾವಿರ ಪುಟಗಳ ಚಾರ್ಜ್ ಶೀಟ್ ಆಗಿದೆ. ಬಿಜೆಪಿ ಮಾಜಿ ಶಾಸಕ ಹಾಗೂ ಅವರ ಪುತ್ರನ ಮೇಲೆ ಪ್ರಕರಣ ದಾಖಲಾಗಿದೆ. ಬಿಜೆಪಿಯಿಂದ ನಾವು ಯಾವ ಪಾಠನೂ ಕಲಿಯಬೇಕಿಲ್ಲ. ಬಿಜೆಪಿಯವರು ಸಮಸ್ಯೆಯನ್ನು ವಿವರಿಸುವುದನ್ನು ತಿಳಿಯಬೇಕು. ವಿಜಯೇಂದ್ರ ಹಾಗೂ ಅಶೋಕ್ ನಾಯಕತ್ವ ಇಷ್ಟವಿಲ್ಲ ಅಂತಲೇ ತಾನೇ ತಿರಸ್ಕಾರ ಮಾಡಿರೋದು? 7 ಜನ ಅಡ್ಡಮತದಾನ ಆಗಿದೆ ಅಂದರೆ, ಅಲ್ಲಿಗೆ ಯತ್ನಾಳ್ ಹೇಳಿದ್ದು ನಿಜ ಆಯ್ತು ಅಲ್ವಾ ಎಂದು ಹೇಳಿದರು.