- ರಾಜ್ಯದಲ್ಲಿ ಇದುವರೆಗೆ ಸರಾಸರಿ ಶೇ.40ರಿಂದ 43ರಷ್ಟು ಮಳೆಯ ಕೊರತೆ
- ಮುಂಗಾರು ವೈಫಲ್ಯದಿಂದ ರೈತರು ಸಂಕಷ್ಟ
ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ವೈಪರೀತ್ಯದಿಂದ ಉಂಟಾಗಿರುವ ನೆರೆ ಹಾನಿ ಹಾಗೂ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಜೆಡಿಎಸ್ ವಿಶೇಷ ಅಧ್ಯಯನ ತಂಡಗಳನ್ನು ರಚಿಸಿದೆ.
ಮುಂಗಾರು ಅವಧಿಯಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಬೆಳಗಾವಿ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ, ಕೃಷಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ.
ಇನ್ನೊಂದೆಡೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ವೈಫಲ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ ಬೆಳೆಗಳು ಮಳೆ ಕೊರತೆಯಿಂದ ಒಣಗಿದ್ದು, ಅನೇಕ ತಾಲ್ಲೂಕುಗಳಲ್ಲಿ ಇನ್ನೂ ಬಿತ್ತನೆ ಕಾರ್ಯವೇ ಆರಂಭವಾಗಿಲ್ಲ. ರಾಜ್ಯದಲ್ಲಿ ಇದುವರೆಗೆ ಸರಾಸರಿ ಶೇ.40ರಿಂದ 43ರಷ್ಟು ಮಳೆಯ ಕೊರತೆ ದಾಖಲಾಗಿದ್ದು, ನೆಲಗಡಲೆ, ದ್ವಿದಳ ಧಾನ್ಯಗಳು, ಜೋಳ ಹಾಗೂ ಸಜ್ಜೆ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಮೇಲೆ ತೀವ್ರ ಪರಿಣಾಮ ಬೀರಿದೆ. ಪರಿಣಾಮವಾಗಿ ರಾಜ್ಯದ ಹಲವು ಭಾಗಗಳಲ್ಲಿ ಬರದ ಛಾಯೆ ಆವರಿಸಿದೆ.
ಈ ಹಿನ್ನೆಲೆಯಲ್ಲಿ ನೆರೆ ಹಾಗೂ ಬರದಿಂದ ಉಂಟಾಗಿರುವ ಹಾನಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಪಕ್ಷವು ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಪಕ್ಷದ ಅಭ್ಯರ್ಥಿಗಳು ಹಾಗೂ ಜಿಲ್ಲಾಧ್ಯಕ್ಷರನ್ನು ಒಳಗೊಂಡ ಅಧ್ಯಯನ ತಂಡಗಳನ್ನು ರಚಿಸಿದೆ.
ಮೈಸೂರು ವಿಭಾಗದ ತಂಡಕ್ಕೆ ಎಚ್.ಡಿ.ರೇವಣ್ಣ, ಕರಾವಳಿ ಮತ್ತು ಮಲೆನಾಡು ತಂಡಕ್ಕೆ ಬೋಜೇಗೌಡ, ಬೆಂಗಳೂರು ವಿಭಾಗಕ್ಕೆ ಮಲ್ಲೇಶ್ ಬಾಬು, ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂಡೆಪ್ಪ ಕಾಶಂಪೂರ ಅವರು ಅಧ್ಯಕ್ಷರಾಗಿದ್ದಾರೆ.
ಸಂಬಂಧಿತ ಜಿಲ್ಲೆಗಳ ಜೆಡಿಎಸ್ ಜಿಲ್ಲಾಧ್ಯಕ್ಷರು ಆಯಾ ಜಿಲ್ಲೆಯ ಅಧ್ಯಯನ ತಂಡದ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದು, ಪಕ್ಷದ ಅಭ್ಯರ್ಥಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸಮಗ್ರ ಅಧ್ಯಯನ ವರದಿ ಸಿದ್ಧಪಡಿಸಲಿದ್ದಾರೆ.
*ಮೈಸೂರು ವಿಭಾಗದ ತಂಡಕ್ಕೆ ಎಚ್.ಡಿ.ರೇವಣ್ಣ, ಕರಾವಳಿ ಮತ್ತು ಮಲೆನಾಡು ತಂಡಕ್ಕೆ ಬೋಜೇಗೌಡ, ಬೆಂಗಳೂರು ವಿಭಾಗಕ್ಕೆ ಮಲ್ಲೇಶ್ ಬಾಬು, ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂಡೆಪ್ಪ ಕಾಶಂಪೂರ ಅವರು ಅಧ್ಯಕ್ಷರಾಗಿದ್ದಾರೆ.