JDS Complaint | ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ಆರೋಪ; ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು!  
ರಾಜ್ಯ

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ಆರೋಪ; ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು! | JDS Complaint

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಜೆಡಿಎಸ್ ನಿಯೋಗವು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ರಸ್ತೆಯಲ್ಲಿರುವ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಜೆಡಿಎಸ್ ನಾಯಕರ ತಂಡ ದೂರು ಸಲ್ಲಿಸಿದೆ.
ಇದೇ ವಿಷಯವಾಗಿ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮತ್ತು ಶಾಸಕ ಎ. ಮಂಜು ಮಾತನಾಡಿ, ನಡೆಯುತ್ತಿರುವ ಅಕ್ರಮಗಳನ್ನು ಬಿಚ್ಚಿಟ್ಟರು.

ಎಲ್ಲೋ ಕುಳಿತು ಎಸ್‌ಐಆರ್ ಮಾಡಿಸುತ್ತಿದ್ದಾರೆ: ಸುರೇಶ್ ಬಾಬು

ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು ಮಾತನಾಡಿ, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಶುರುವಾಗಿ ಕೇವಲ ಮೂರು ದಿನಗಳಾಗಿವೆ. ನಿಯಮದ ಪ್ರಕಾರ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಆದರೂ ಸಹ, ನಿಯಮಗಳನ್ನು ಗಾಳಿಗೆ ತೂರಿ ಎಲ್ಲೋ ಖಾಸಗಿ ಜಾಗದಲ್ಲಿ ಕುಳಿತುಕೊಂಡು ಅಕ್ರಮವಾಗಿ ಎಸ್‌ಐಆರ್ ಮಾಡಿಸಲಾಗುತ್ತಿದೆ. ಇದರ ಹಿಂದೆ ದೊಡ್ಡ ಮಟ್ಟದ ಜಾಲವಿರುವ ಅನುಮಾನ ನಮಗಿದೆ. ಯಾರು ಈ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೋ, ಅಂತಹ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗ ತಕ್ಷಣವೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮಕ್ಕಳ ಕೈಯಲ್ಲಿ ಫಾರಂ ಕೊಟ್ಟು ಕಳಿಸುತ್ತಿದ್ದಾರೆ: ಶಾಸಕ ಎ. ಮಂಜು ಆಕ್ರೋಶ

ಇದೇ ವೇಳೆ ಅರಕಲಗೂಡು ಶಾಸಕ ಎ. ಮಂಜು ಅವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದು, ನನ್ನ ಕ್ಷೇತ್ರದಲ್ಲಿ ಎಸ್‌ಐಆರ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ನಿಯಮದ ಪ್ರಕಾರ ಅಧಿಕಾರಿಗಳೇ ಖುದ್ದಾಗಿ ಮನೆ ಮನೆಗೆ ಹೋಗಿ ಫಾರಂಗಳನ್ನು ನೀಡಬೇಕು. ಆದರೆ, ಇಲ್ಲಿ ಅಧಿಕಾರಿಗಳು ಸಣ್ಣ ಸಣ್ಣ ಮಕ್ಕಳ ಕೈಯಲ್ಲಿ ಫಾರಂಗಳನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಈ ಬೇಜವಾಬ್ದಾರಿತನದ ಕುರಿತು ನಾನು ಈಗಾಗಲೇ ಸ್ಥಳೀಯ ತಹಶೀಲ್ದಾರ್ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ನಮ್ಮ ದೂರನ್ನು ಸ್ವೀಕರಿಸಿರುವ ಅಧಿಕಾರಿಗಳು, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.