ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಚಿತ್ರದುರ್ಗದ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಜೆಡಿಎಸ್ ತಯಾರಿ ನಡೆಸಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಹಿರಿಯೂರು ಕ್ಷೇತ್ರದ ಮುಖಂಡರ ಸಭೆ ನಡೆಸಲಾಗಿದೆ.
ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದ 2023ರ ಪರಾಜಿತ ಅಭ್ಯರ್ಥಿ ಎಂ. ರವೀಂದ್ರಪ್ಪ ಮತ್ತು ಚಿತ್ರದುರ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.
ಅನಾರೋಗ್ಯ ಹಿನ್ನೆಲೆಯಲ್ಲಿ ಮೃತಪಟ್ಟ ಮಾಜಿ ಸಚಿವ ಡಿ.ಸುಧಾಕರ್ ಅವರಿಂದ ತೆರವಾದ ಶಾಸಕ ಸ್ಥಾನಕ್ಕೆ ಶೀಘ್ರವೇ ಉಪ ಚುನಾವಣೆ ನಡೆಯಲಿದೆ. ಆದ್ದರಿಂದ ಟಿಕೆಟ್ ಪಡೆಯುವ ಸಲುವಾಗಿ ಹಿರಿಯೂರು ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸಭೆ ಕರೆದ ಕುಮಾರಸ್ವಾಮಿ, ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು. ಕಳೆದ ಬಾರಿಯಂತೆ ತನಗೆ ಉಪಚುನಾವಣೆಯಲ್ಲಿ ಅವಕಾಶ ನೀಡಬೇಕೆಂದು ಎಂ.ರವೀಂದ್ರಪ್ಪ ಕೋರಿದ್ದಾರೆ. ಇದೇ ವೇಳೆ ಜಯಣ್ಣ, ಕಳೆದ ಬಾರಿ ನನಗೆ ಟಿಕೆಟ್ ಕೈತಪ್ಪಿದೆ. ಈ ಬಾರಿಯಾದರೂ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇಬ್ಬರ ಮನವಿ ಆಲಿಸಿದ ಕುಮಾರಸ್ವಾಮಿ, ಮೊದಲು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯನ್ನು ಬಲಿಷ್ಠವಾಗಿ ಮಾಡಿ ಹೋರಾಟಕ್ಕೆ ಸಿದ್ಧರಾಗಿ ಎಂದು ಸಲಹೆ ನೀಡಿದರು. ಇದಲ್ಲದೆ, ಬಿಜೆಪಿ ಜತೆಗೆ ಮೈತ್ರಿ ಇರುವ ಕಾರಣ ಟಿಕೆಟ್ ಜೆಡಿಎಸ್‌ಗೆ ಸಿಗಲಿದೆಯೇ ಎಂಬ ಪ್ರಶ್ನೆಗಳು ಕೇಳಿಬಂದಿವೆ. ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಪಡೆಯುವ ಜವಾಬ್ದಾರಿ ನನಗೆ ಬಿಡಿ. ನಾನು ಬಿಜೆಪಿ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುತ್ತೇನೆ. ನಿಮ್ಮ ಪಾಡಿಗೆ ನೀವು ಪಕ್ಷ ಸಂಘಟನೆಯಲ್ಲಿ ತೊಡಗಿ ಎಂದು ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು. ಜತೆಗೆ ಉಪ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡುವುದರ ಸಂಬಂಧ ಯಶೋಧರ ಎಂಬುವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಜೆಡಿಎಸ್ ಪೈಪೋಟಿ
2023ರಲ್ಲಿ ಕಾಂಗ್ರೆಸ್‌ನ ಡಿ.ಸುಧಾಕರ್ 92,050 ಮತಗಳನ್ನು ಗಳಿಸಿದ್ದರು. ಬಿಜೆಪಿ ಪಿ.ಪೂರ್ಣಿಮಾ 61,728 ಮತ್ತು ಜೆಡಿಎಸ್‌ನ ಎಂ.ರವೀಂದ್ರಪ್ಪ 38,686 ಮತ ಗಳಿಸಿ 3ನೇ ಸ್ಥಾನ ಪಡೆದಿದ್ದರು. ಅದೇ ರೀತಿ ಜೆಡಿಎಸ್‌ನಿಂದ 2018ರಲ್ಲಿ ಡಿ. ಯಶೋಧರ 42,044 ಮತಗಳನ್ನು ಗಳಿಸಿ ಮತ್ತು 2013ರಲ್ಲಿ ಎ.ಕೃಷ್ಣಪ್ಪ 70,456 ಮತಗಳನ್ನು ಗಳಿಸಿದ್ದರು.