ನೈಸ್​ ಸಂಸ್ಥೆಯ ಅನಧಿಕೃತ ಟೋಲ್ ಸಂಗ್ರಹ ನಿಷೇಧಿಸಿ, ತಕ್ಷಣ ಸರ್ಕಾರದ ವಶಕ್ಕೆ ಪಡೆಯುವಂತೆ ಜೆಡಿಎಸ್ ನಿಯೋಗ ಮನವಿ! JDS Delegation  
ರಾಜ್ಯ

ನೈಸ್​ ಸಂಸ್ಥೆಯ ಅನಧಿಕೃತ ಟೋಲ್ ಸಂಗ್ರಹ ನಿಷೇಧಿಸಿ, ತಕ್ಷಣ ಸರ್ಕಾರದ ವಶಕ್ಕೆ ಪಡೆಯುವಂತೆ ಜೆಡಿಎಸ್ ನಿಯೋಗ ಮನವಿ! JDS Delegation

ಪ್ರಮುಖ ಮುಖ್ಯಾಂಶಗಳು

  • ನೈಸ್ ಸಂಸ್ಥೆಯ ಒಪ್ಪಂದ ಉಲ್ಲಂಘನೆ ಖಂಡಿಸಿ ಮುಖ್ಯ ಕಾರ್ಯದರ್ಶಿಗೆ ಜೆಡಿಎಸ್ ನಿಯೋಗ ಮನವಿ
  • ಅನಧಿಕೃತ ಟೋಲ್ ಸಂಗ್ರಹ ನಿಷೇಧ ಹಾಗೂ ಹೆಚ್ಚುವರಿ ಜಮೀನು ವಶಕ್ಕೆ ಪಡೆದುಕೊಳ್ಳಲು ಆಗ್ರಹ
  • ಆರ್ಥಿಕ ಅಪರಾಧಗಳ ತನಿಖೆಗಾಗಿ ವಿಶೇಷ ತನಿಖಾ ತಂಡದ ರಚನೆ ಹಾಗೂ ಫೊರೆನ್ಸಿಕ್ ಆಡಿಟ್​ಗಾಗಿ ಜೆಡಿಎಸ್​ ಒತ್ತಾಯ
  • ಹೊಸ ಶಾಸನ ರಚಿಸಿ ಬಿಎಂಐಸಿಪಿ ಯೋಜನೆಯನ್ನು ಸಂಪೂರ್ಣವಾಗಿ ಸರ್ಕಾರವೇ ವಶಪಡಿಸಿಕೊಳ್ಳಲು ಮನವಿ
ಬೆಂಗಳೂರು: ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (NICE) ಯೋಜನೆಯು ದಶಕಗಳಿಂದಲೂ ವಿವಾದಕ್ಕೆ ಗ್ರಾಸವಾಗಿರುವ ಮಹತ್ವದ ವಿಷಯವಾಗಿದ್ದು, ಇದೀಗ ಈ ಯೋಜನೆಗೆ ಸಂಬಂಧಿಸಿದಂತೆ ಕಾನೂನು ಉಲ್ಲಂಘನೆ ಮತ್ತು ವ್ಯಾಪಕ ಅಕ್ರಮಗಳ ಆರೋಪ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನೈಸ್​ ಕಂಪನಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿರುವ ಜೆಡಿಎಸ್ ಪಕ್ಷವು ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತನ್ನ ನಿಯೋಗವನ್ನು ( JDS Delegation ) ಕಳುಹಿಸಿ ಅಧಿಕೃತ ಮನವಿ ಸಲ್ಲಿಸುವ ಮೂಲಕ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು ಅವರ ನೇತೃತ್ವದ ನಿಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ, 'ನೈಸ್' ಸಂಸ್ಥೆಯು ಒಪ್ಪಂದದ (FWA/PTA) ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ ಎಂದು ಗಂಭೀರ ಆರೋಪ ಮಾಡಿದೆ. ಹೈಕೋರ್ಟ್ ವಿಭಾಗೀಯ ಪೀಠವು ಈ ಯೋಜನೆಯನ್ನು ರಾಜ್ಯದ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದೆಂದು ತೀವ್ರ ಕಳವಳ ವ್ಯಕ್ತಪಡಿಸಿರುವುದಲ್ಲದೆ, ಇದು ರೈತರ ಭೂಮಿ ಸುಲಿಗೆಯಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದನ್ನು ಈ ಸಂದರ್ಭದಲ್ಲಿ ನಿಯೋಗವೂ ನೆನಪಿಸಿದೆ.
ಸಂಸ್ಥೆಯ ಅನಧಿಕೃತ ಟೋಲ್ ಸಂಗ್ರಹವನ್ನು ತಕ್ಷಣವೇ ನಿಷೇಧಿಸಬೇಕು ಹಾಗೂ ಹೆಚ್ಚುವರಿಯಾಗಿ ಒದಗಿಸಲಾಗಿರುವ 554 ಎಕರೆ ಜಮೀನು ಮತ್ತು ಕೆರೆ-ಕಟ್ಟೆಗಳನ್ನು ಕೂಡಲೇ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಜೆಡಿಎಸ್ ಮುಖ್ಯ ಬೇಡಿಕೆಗಳನ್ನು ಮುಂದಿಟ್ಟಿದೆ. ಇದರೊಂದಿಗೆ, ಸಂಸ್ಥೆಯ ಆರ್ಥಿಕ ಅಪರಾಧಗಳನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡದ (SIT) ರಚನೆ, 'ಫೊರೆನ್ಸಿಕ್ ಆಡಿಟ್' ನಡೆಸುವುದು ಹಾಗೂ ಹೊಸ ಶಾಸನವನ್ನು ರಚಿಸಿ ಬಿಎಂಐಸಿಪಿ (BMICP) ಯೋಜನೆಯನ್ನು ಸಂಪೂರ್ಣವಾಗಿ ಸರ್ಕಾರವೇ ವಶಪಡಿಸಿಕೊಳ್ಳಬೇಕೆಂದು ಜೆಡಿಎಸ್​ ಬಲವಾಗಿ ಆಗ್ರಹಿಸಿದೆ.

ನೈಸ್ ಲೂಟಿ ಇಡೀ ಭಾರತದಲ್ಲಿಯೇ ಅತೀ ದೊಡ್ಡ ಭೂಹಗರಣ ಎಂದು ಎಚ್​.ಡಿ.ಕುಮಾರಸ್ವಾಮಿ

ನಿನ್ನೆ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ರಾಜ್ಯದ ಈಗಿನ ಮುಖ್ಯಮಂತ್ರಿ ನೈಸ್ ಅಕ್ರಮಗಳಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಈ ಮುಖ್ಯಮಂತ್ರಿಯೇ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಭೂ ಲೂಟಿಯ ಮಹಾನಾಯಕ ಎಂದು ಕುಮಾರಸ್ವಾಮಿ ಹೇಳಿದರು. ಅಲ್ಲದೆ, ನನಗಿರುವ ಮಾಹಿತಿ ಪ್ರಕಾರ ಬೇನಾಮಿ ಕಂಪನಿಗಳ ಮೂಲಕ ಈ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ ಮಾಡಲು ಹೊರಟಿದ್ದಾರೆ. ರೈತರಿಗೊಂದು ಕಾನೂನು, ಮುಖ್ಯಮಂತ್ರಿಗೆ ಇನ್ನೊಂದು ಕಾನೂನು ಇದೆಯಾ ಈ ರಾಜ್ಯದಲ್ಲಿ? ಬಿಎಂಐಸಿ ಯೋಜನೆ ಹೆಸರಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಹೊಡೆಲು ಸಂಚು ರೂಪಿಸಿದ್ದಾರೆ. ನಾನಿಲ್ಲಿ ಕೂತು ಸಂತೆ ಭಾಷಣ ಮಾಡುತ್ತಿಲ್ಲ. ಮುಂದಿನ ವಾರ ದಾಖಲೆ ಸಮೇತ ಹೇಳುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದ್ದಾರೆ.