ಜಯದೇವ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರಕ್ತ ಪರೀಕ್ಷಾ ಯಂತ್ರ ಅಳವಡಿಕೆ  
ರಾಜ್ಯ

ಜಯದೇವ ಆಸ್ಪತ್ರೆಯಲ್ಲಿ ಮಾದರಿ ರಕ್ತಪರೀಕ್ಷಾ ಯಂತ್ರ ಅಳವಡಿಕೆ

ಪ್ರಮುಖ ಮುಖ್ಯಾಂಶಗಳು

  • ರೋಶ್ ಕೋಬಾಸ್ ಪ್ರೋ ಯಂತ್ರ
  • ನೂತನ ಯಂತ್ರದಿಂದ ಶೀಘ್ರ ಪರೀಕ್ಷಾ ವರದಿ ಲಭ್ಯ
  • ಸಮಯ ಉಳಿತಾಯ ತುರ್ತು ಚಿಕಿತ್ಸೆಗೆ ಅನುಕೂಲ
ಬೆಂಗಳೂರು: ಸತತ ನಾಲ್ಕು ಬಾರಿ ಎನ್‌ಎಬಿಎಚ್ (ಆಸ್ಪತ್ರೆ ಮತ್ತು ಆರೋಗ್ಯ ಸೇವೆ ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿ) ಮಾನ್ಯತೆ ಪಡೆದಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಅತೀ ಶೀಘ್ರ ನಿಖರವಾದ ರಕ್ತ ಪರೀಕ್ಷೆ ವರದಿ ನೀಡುವ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ರೋಶ್ ಕೋಬಾಸ್ ಪ್ರೋಯಂತ್ರವನ್ನು ಅಳವಡಿಸಿಕೊಂಡಿದೆ.
ಈ ರೀತಿಯ ಸೌಲಭ್ಯ ಹೊಂದಿರುವ ಯಂತ್ರ ಅಳವಡಿಸಿಕೊಂಡ ರಾಜ್ಯದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಯೊಂದಿಗೆ ಹೊಸ ಮೈಲಿಗಲ್ಲು ಸಾಧಿಸಿದೆ. ಸಂಸ್ಥೆಯ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಇನ್ನುಮುಂದೆ ವಿಳಂಬವಿಲ್ಲದೆ ರಕ್ತಪರೀಕ್ಷೆ ವರದಿ ದೊರೆಯಲಿದೆ. ಆಸ್ಪತ್ರೆಗೆ ನಿತ್ಯ 1,800ರಿಂದ 2,000 ಮಂದಿಗೆ ಹೊರ ರೋಗಿಗಳ ವಿಭಾಗದಲ್ಲಿ ತಪಾಸಣೆಗೆ ಒಳಪಡುತ್ತಾರೆ. ಹೀಗಾಗಿ ಬರುವ ಎಲ್ಲಾ ರೋಗಿಗಳಿಗೂ ರಕ್ತಪರೀಕ್ಷಾ ವರದಿಯನ್ನು ಶೀಘ್ರ ಹಾಗೂ ಸೂಕ್ತ ಸಮಯಕ್ಕೆ ಒದಗಿಸಲು ಈ ಯಂತ್ರ ಸಹಕಾರಿಯಾಗಲಿದೆ. ತುರ್ತು ಚಿಕಿತ್ಸೆ ವೇಳೆ ಪರೀಕ್ಷಾ ವರದಿ ಆಧರಿಸಿ ಚಿಕಿತ್ಸೆ ನೀಡಲು ಇದು ಅನುಕೂಲವಾಗಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಬಿ. ದಿನೇಶ್ ತಿಳಿಸಿದ್ದಾರೆ.