Karnataka Sahithya Academy  
ರಾಜ್ಯ

ಯುವ ಬರಹಗಾರರಿಗೆ ಜನಮುಖಿ ಸಾಹಿತ್ಯ ಕಾರ್ಯಾಗಾರ

ಪ್ರಮುಖ ಮುಖ್ಯಾಂಶಗಳು

  • * 30, 31ರಂದು ಸಚಿವಾಲಯ ನೌಕರರ ಕ್ಲಬ್‌ನಲ್ಲಿ ಆಯೋಜನೆ
  • * ಎಲ್.ಎನ್. ಮುಕುಂದರಾಜ್ ಮಾಹಿತಿ
ಬೆಂಗಳೂರು: ಯುವ ಬರಹಗಾರರನ್ನು ಸೃಜನಶೀಲಗೊಳಿಸುವ ಉದ್ದೇಶದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸೌಹಾರ್ದ ಕರ್ನಾಟಕ ಸಂಘಟನೆ ಸಹಯೋಗದಲ್ಲಿ ಮೇ 30 ಮತ್ತು 31ರಂದು ಕಬ್ಬನ್ ಉದ್ಯಾನದಲ್ಲಿನ ಸಚಿವಾಲಯ ನೌಕರರ ಕ್ಲಬ್‌ನಲ್ಲಿ ‘ಜನಮುಖಿ ಸಾಹಿತ್ಯ: ಯುವ ಬರಹಗಾರರ’ ರಾಜ್ಯ ಮಟ್ಟದ ಕಾರ್ಯಾಗಾರ ಹಮ್ಮಿಕೊಂಡಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, 30ರಂದು ಬೆಳಗ್ಗೆ 10.30ಕ್ಕೆ ಕಾರ್ಯಾಗಾರವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ‘ಕರ್ನಾಟಕ ಸೌಹಾರ್ದ ಪರಂಪರೆ’ ವಿಷಯದ ಬಗ್ಗೆ ರಾಜಪ್ಪ ದಳವಾಯಿ, ‘ಸಾಹಿತ್ಯ ಮತ್ತು ಶ್ರೇಣೀಕೃತ ವ್ಯವಸ್ಥೆ’ ವಿಷಯ ಕುರಿತು ಬಂಜಗೆರೆ ಜಯಪ್ರಕಾಶ್ ಮಾತನಾಡಲಿದ್ದಾರೆ ಎಂದರು.
31ರಂದು ನಡೆಯುವ ಗೋಷ್ಠಿಯಲ್ಲಿ ‘ಸಾಹಿತ್ಯ: ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ವಿಷಯದ ಬಗ್ಗೆ ರಾಜೇಂದ್ರ ಚೆನ್ನಿ ಹಾಗೂ ‘ಭಾರತ: ಅಭಿವೃದ್ಧಿಯ ಅಡಿಪಾಯ’ ವಿಷಯದ ಬಗ್ಗೆ ಜಿ.ಎನ್.ನಾಗರಾಜ್ ವಿಚಾರ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಸೌಹಾರ್ದ ಕರ್ನಾಟಕದ ಸಂಯೋಜಕ ಎಸ್. ವೈ. ಗುರುಶಾಂತ್ ಮಾತನಾಡಿ, ಕಾರ್ಯಾಗಾರದಲ್ಲಿ ವಿಷಯ ಮಂಡಿಸುವವರ ಜತೆಗೆ ನಡೆಯುವ ಸಂವಾದಕ್ಕೆ ಈಗಾಗಲೇ ನೂರು ಯುವ ಬರಹಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಆಸಕ್ತರು ಶೀಘ್ರ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.
ಅಕಾಡೆಮಿ ರಿಜಿಸ್ಟ್ರಾರ್ ಎನ್. ಕರಿಯಪ್ಪ ಹಾಗೂ ಸೌಹಾರ್ದ ಕರ್ನಾಟಕದ ಸಂಯೋಜಕ ರಾಮಕೃಷ್ಣ ಉಪಸ್ಥಿತರಿದ್ದರು.

ಜೂ.6ಕ್ಕೆ ವಾರ್ಷಿಕ ಪ್ರಶಸ್ತಿ ಪ್ರದಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜೂನ್ 6ರಂದು ಸಂಜೆ 5.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಹಾಗೂ ಮಹಿಳಾ ಮುನ್ನಡೆ ಪುಸ್ತಕ ಸರಣಿ ಮತ್ತು ಪಂಚಮ ಪತ್ರಿಕೆ ಸಂಪುಟಗಳ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದೆ. 2025ನೇ ಸಾಲಿನ ಗೌರವ ಹಾಗೂ ಸಾಹಿತ್ಯ ಶ್ರೀ ಪ್ರಶಸ್ತಿ ಮತ್ತು 2024ನೇ ಸಾಲಿನ ಪುಸ್ತಕ ಬಹುಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಲಿದ್ದಾರೆ. ಮಹಿಳಾ ಮುನ್ನಡೆ ಶೀರ್ಷಿಕೆಯಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಮಹಿಳಾ ಸಾಧಕರ ಬಗ್ಗೆ 50 ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. 70-80ರ ದಶಕದಲ್ಲಿ ದಲಿತ ಲೇಖಕರು ಪಂಚಮ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳ ಸಂಗ್ರಹವನ್ನು ಎರಡು ಸಂಪುಟಗಳಲ್ಲಿ ಹೊರತರಲಾಗುತ್ತಿದೆ ಎಂದು ಎಲ್.ಎನ್. ಮುಕುಂದರಾಜ್ ಹೇಳಿದರು.