ಹುಬ್ಬಳ್ಳಿ: ಭಾರತೀಯ ದೇಶಿ ಕ್ರಿಕೆಟ್‌ನ ಅತ್ಯಂತ ಪ್ರತಿಷ್ಠಿತ 'ರಣಜಿ ಟ್ರೋಫಿ'ಯ(Ranji Trophy) ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ದಿನ. ದಶಕಗಳ ಕಾಲ ಕ್ರಿಕೆಟ್ ಲೋಕದಲ್ಲಿ ಸಾಮಾನ್ಯ ತಂಡವೆಂದು ಗುರುತಿಸಿಕೊಂಡಿದ್ದ ಜಮ್ಮು-ಕಾಶ್ಮೀರ ಇದೀಗ ಮೊದಲ ಬಾರಿಗೆ 'ರಣಜಿ ಚಾಂಪಿಯನ್' ಆಗಿ ಹೊರಹೊಮ್ಮಿದೆ.
ಹೌದು,ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಮೊದಲ ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗುವ ಮೂಲಕ ಹೊಸ ಇತಿಹಾಸ ರಚಿಸಿದೆ. ನೆಚ್ಚಿನ ತಂಡವಾಗಿದ್ದ ಆತಿಥೇಯ ಕರ್ನಾಟಕ ನಿರಾಸೆ ಅನುಭವಿಸಿತು.
ಹುಬ್ಬಳ್ಳಿಯ ಕೆಎಸ್‌ಸಿಎ ರಾಜನಗರ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪ್ರವಾಸಿ ಜಮ್ಮು-ಕಾಶ್ಮೀರ ತಂಡವು ಆತಿಥೇಯ ಕರ್ನಾಟಕದ ವಿರುದ್ಧ ಸರ್ವಶ್ರೇಷ್ಠ ಪ್ರದರ್ಶನ ನೀಡಿತು. ಫೇವರಿಟ್ ಕರ್ನಾಟಕ ವಿರುದ್ಧ ಪ್ರವಾಸಿ ತಂಡ ಜಮ್ಮು ಕಾಶ್ಮೀರ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಟ್ರೋಫಿ ತನ್ನದಾಗಿಸಿಕೊಂಡಿತು. ಜಮ್ಮು ಕಾಶ್ಮೀರ ಮೊದಲ ಇನ್ನಿಂಗ್ಸ್ ನಲ್ಲಿ 291 ರನ್ ಗಳ ಬೃಹತ್ ಮುನ್ನಡೆ ಗಳಿಸಿತ್ತು.
1959-60 ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಜಮ್ಮು ಕಾಶ್ಮೀರ ತಂಡ ಇದೇ ಮೊದಲ ಬಾರಿ ಫೈನಲ್ ತಲುಪಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಬಲಿಷ್ಠ ಕರ್ನಾಟಕ ಕ್ಕಿಂತ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಫೈನಲ್ ಪಂದ್ಯದ 5 ನೇ ದಿನವಾದ ಶನಿವಾರ ಯಾವುದೇ ಪವಾಡ ನಡೆಯಲಿಲ್ಲ. 9 ನೇ ಬಾರಿ ಟ್ರೋಫಿ ಗೆಲ್ಲುವ ಆತಿಥೇಯ ಕರ್ನಾಟಕದ ಕನಸು ಬಹಳ ಬೇಗನೇ ನುಚ್ಚುನೂರಾಯಿತು. 7 ನೇ ಬಾರಿ ರನ್ನರ್ ಅಪ್ ಸ್ಥಾನಕ್ಕೆತೃಪ್ತಿ ಪಟ್ಟಿತು. 2009-10ರಲ್ಲಿ ಕೊನೆಯ ಬಾರಿ ಮೈಸೂರಿನಲ್ಲಿ ರನ್ನರ್ ಅಪ್ ಆಗಿತ್ತು.
ಪಂದ್ಯದಲ್ಲಿ ಜಮ್ಮು ಕಾಶ್ಮೀರ ಮೊದಲ ಇನ್ನಿಂಗ್ಸ್ ನಲ್ಲಿ 584 ರನ್ ಗಳಿಸಿದ್ದರೆ, ಕರ್ನಾಟಕ ಪ್ರಥಮ ಇನ್ನಿಂಗ್ಸ್ ನಲ್ಲಿ 293 ರನ್ ಗಳಿಸಿತ್ತು. ಜಮ್ಮು ಕಾಶ್ಮೀರ ದ್ವಿತೀಯ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗೆ 342 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಕರ್ನಾಟಕಕ್ಕೆ ನಿರಾಸೆ, 7ನೇ ಬಾರಿ ರನ್ನರ್ ಅಪ್
9ನೇ ಬಾರಿಗೆ ಟ್ರೋಫಿ ಗೆದ್ದು ಬೀಗುವ ತವಕದಲ್ಲಿದ್ದ ಮನೀಶ್ ಪಾಂಡೆ ಪಡೆಗೆ ತವರಿನಲ್ಲೇ ತೀವ್ರ ನಿರಾಸೆ ಎದುರಾಯಿತು. 2009-10ರ ನಂತರ ಕರ್ನಾಟಕವು ಮತ್ತೊಮ್ಮೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಶನಿವಾರ ಪಂದ್ಯದ ಐದನೇ ದಿನ ಯಾವುದೇ ಪವಾಡಗಳು ನಡೆಯದಿದ್ದಾಗ, ಕಣಿವೆ ರಾಜ್ಯದ ಆಟಗಾರರು ಮೈದಾನದಲ್ಲಿ ಸಂಭ್ರಮದ ಹೊಳೆಯನ್ನೇ ಹರಿಸಿದರು.