ಬೆಂಗಳೂರು: ಭಾರತದ ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯು ‘Purpose to Possibility’ ಎಂಬ ಧ್ಯೇಯವಾಕ್ಯದೊಂದಿಗೆ ತನ್ನ 16ನೇ ವಾರ್ಷಿಕ ಘಟಿಕೋತ್ಸವವನ್ನು ಬೆಂಗಳೂರಿನ ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್‌ನಲ್ಲಿರುವ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ಆಯೋಜಿಸಿತು.
ಈ ಘಟಿಕೋತ್ಸವವು ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಸಂಭ್ರಮಿಸುವುದರ ಜೊತೆಗೆ ಅವರ ಶೈಕ್ಷಣಿಕ ಜೀವನದ ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಯಿತು. ಈ ಸಮಾರಂಭದಲ್ಲಿ ಗಣ್ಯ ಅತಿಥಿಗಳು, ಕಾರ್ಯಕಾರಿ ಮಂಡಳಿ ಮತ್ತು ಶೈಕ್ಷಣಿಕ ಮಂಡಳಿಯ ಸದಸ್ಯರು, ಬೋಧಕ ವರ್ಗದವರು, ಪದವೀಧರ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಆಗಮಿಸಿದ್ದ ರೆಂಟೋಮೋಜೋ ಮತ್ತು ಲಿಕ್ವಿಲೋನ್ಸ್ ಸಂಸ್ಥೆಗಳ ಸಹ-ಸಂಸ್ಥಾಪಕರಾದ ಶ್ರೀ ಅಚಲ್ ಮಿತ್ತಲ್ “ಪರಿಪೂರ್ಣತೆಯ ಗುರಿಯನ್ನು ಹೊಂದಬೇಡಿ. ಏಕೆಂದರೆ ಅದು ಕೆಲಸವನ್ನು ಮುಂದೂಡಲು ಒಂದು ನೆಪವಾಗಬಹುದು. ಮೊದಲ ಹೆಜ್ಜೆಯನ್ನು ಇಡಿ, ಅನಿಶ್ಚಿತತೆಗಳನ್ನು ಸ್ವೀಕರಿಸಿ ಮತ್ತು ಅವಕಾಶಗಳು ಎದುರಾದಾಗ ಅವುಗಳನ್ನು ಬಳಸಿಕೊಳ್ಳಲು ಸಿದ್ಧರಾಗಿರಿ” ಎಂದು ಹೇಳಿದರು.
ಮುಂದುವರಿದು, “ನೀವು ಎಲ್ಲಿಂದ ಪ್ರಾರಂಭಿಸಿದ್ದೀರಿ ಎಂಬುದಕ್ಕಿಂತ, ಅಲ್ಲಿಂದ ಎಷ್ಟು ದೂರ ಪ್ರಯಾಣಿಸಿದ್ದೀರಿ ಎಂಬುದು ಮುಖ್ಯ. ದೊಡ್ಡ ಕನಸುಗಳನ್ನು ಕಾಣಿರಿ, ಕಠಿಣ ಪರಿಶ್ರಮ ಪಡಿರಿ, ಯಶಸ್ಸನ್ನು ಬೆನ್ನಟ್ಟಿರಿ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಜೀವನದ ಪ್ರಯಾಣವನ್ನು ಆನಂದಿಸಲು ಮರೆಯಬೇಡಿ” ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜೈನ್ ಸಂಘಟನೆಯ (BJS) ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶ್ರೀ ಶಾಂತಿಲಾಲ್ ಗುಲಾಬಚಂದ್ ಮುತ್ಥಾ ಅವರಿಗೆ ಸಮಾಜ ಸುಧಾರಣಾ ಕಾರ್ಯಗಳು ಮತ್ತು ಭಾರತದಾದ್ಯಂತ ಪುನರ್ವಸತಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ನಾಯಕತ್ವವನ್ನು ಗುರುತಿಸಿ ಡಾಕ್ಟರ್ ಆಫ್ ಲೆಟರ್ಸ್ (ಗೌರವ ಡಾಕ್ಟರೇಟ್) ಪದವಿಯನ್ನು ವಿಶ್ವವಿದ್ಯಾಲಯದ ವತಿಯಿಂದ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮುತ್ಥಾ ಅವರು, “ನಮ್ಮ ಯುವಜನತೆಯಲ್ಲಿ ಅಪಾರ ಶಕ್ತಿ, ಸಾಮರ್ಥ್ಯ ಮತ್ತು ಪ್ರತಿಭೆ ಅಡಗಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಶಕ್ತಿ ಅವರಲ್ಲಿದೆ. ಇದು ಹಳೆಯ ಕಾಲವಲ್ಲ, ಹೊಸ ಯುಗ. ಈ ಹೊಸ ಯುಗದಲ್ಲಿ ನಿಮ್ಮ ಮುಂದೆ ಅಪಾರ ಅವಕಾಶಗಳು ಹಾಗೂ ಸವಾಲುಗಳಿವೆ. ಅವುಗಳನ್ನು ಸ್ವೀಕರಿಸಿ ಮುನ್ನಡೆಯುವ ಅವಕಾಶವೂ ನಿಮ್ಮದಾಗಿದೆ” ಎಂದು ಹೇಳಿದರು.
ಜೈನ್ ಯೂನಿವರ್ಸಿಟಿಯ ಕುಲಾಧಿಪತಿಗಳಾದ ಡಾ. ಚೆನರಾಜ್ ರಾಯಚಂದ್ 16ನೇ ವಾರ್ಷಿಕ ಘಟಿಕೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು, “ಕೆಲವೊಮ್ಮೆ ನೀವು ಒತ್ತಡಕ್ಕೆ ಒಳಗಾಗಬಹುದು, ಕುಗ್ಗಿಹೋಗಬಹುದು ಅಥವಾ ಅನಿಶ್ಚಿತತೆಯ ಪರಿಸ್ಥಿತಿಯನ್ನು ಎದುರಿಸಬಹುದು. ಆದರೆ ಇಂತಹ ಕ್ಷಣಗಳೇ ನಿಮ್ಮ ಜೀವನದ ಅತ್ಯಂತ ಶಕ್ತಿಯುತ ಪರಿವರ್ತನೆಯ ಹಂತಗಳಾಗಬಹುದು ಎಂಬುದನ್ನು ನೆನಪಿಡಿ” ಎಂದು ಹೇಳಿದರು.
ಮುಂದುವರಿದು, “ನೀವು ಯಾವುದಾದರೂ ಮೌಲ್ಯ ಅಥವಾ ತತ್ವಕ್ಕಾಗಿ ನಿಲ್ಲದಿದ್ದರೆ, ಯಾವುದಕ್ಕೂ ಬಲಿಯಾಗುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಮೌಲ್ಯಗಳನ್ನು ಸ್ಥಾಪಿಸಿಕೊಳ್ಳಿ, ತತ್ವಗಳನ್ನು ಎತ್ತಿಹಿಡಿಯಿರಿ ಹಾಗೂ ಜೀವನದಲ್ಲಿ ನಿಮ್ಮ ಗುರಿ ಮತ್ತು ಉದ್ದೇಶಗಳನ್ನು ಸ್ಪಷ್ಟವಾಗಿ ನಿರ್ಧರಿಸಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜೈನ್ ಯೂನಿವರ್ಸಿಟಿಯ ಕುಲಪತಿಗಳಾದ ಡಾ. ಜೆ. ಲೇತಾ ಅವರು ಸ್ವಾಗತ ಭಾಷಣದ ಜೊತೆಗೆ ವಿಶ್ವವಿದ್ಯಾಲಯದ ವಾರ್ಷಿಕ ವರದಿಯನ್ನು ಮಂಡಿಸಿದರು. ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆಗಳು, ಪ್ರಮುಖ ಮೈಲಿಗಲ್ಲುಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆಗಳನ್ನು ವಿವರಿಸಿದರು.
“ನಿರಂತರವಾಗಿ ಕಲಿಯುತ್ತಿರಿ, ಜೀವನದ ಅನುಭವಗಳಿಂದ ಪಾಠಗಳನ್ನು ಪಡೆದುಕೊಳ್ಳಿ ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಪ್ರಯತ್ನಿಸುತ್ತಿರಿ. ತಂತ್ರಜ್ಞಾನ ಆಧಾರಿತ ಜಗತ್ತು ನಿರಂತರವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ನಿಮ್ಮ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಸದಾ ಕುತೂಹಲದಿಂದಿರಿ ಹಾಗೂ ಬದಲಾವಣೆಗಳಿಗೆ ಹೊಂದಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಘಟಿಕೋತ್ಸವದಲ್ಲಿ ಒಟ್ಟು 449 ರ‍್ಯಾಂಕ್ ವಿಜೇತರಿಗೆ ರ‍್ಯಾಂಕ್ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಇವರಲ್ಲಿ 145 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದು ಗೌರವಕ್ಕೆ ಪಾತ್ರರಾದರು.
‘ಚರೈವೇತಿ ಚರೈವೇತಿ’ ಅಂದರೆ “ಮುಂದೆ ಸಾಗುತ್ತಿರಿ, ಪ್ರಗತಿ ಹೊಂದುತ್ತಿರಿ, ಕಲಿಕೆಯನ್ನು ಎಂದಿಗೂ ನಿಲ್ಲಿಸಬೇಡಿ” ಎಂಬ ಆಶಯವನ್ನು ಪ್ರತಿಬಿಂಬಿಸಿದ 16ನೇ ವಾರ್ಷಿಕ ಘಟಿಕೋತ್ಸವವು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಜ್ಞಾನಾರ್ಜನೆಯ ಹಂಬಲ ಮತ್ತು ನಿರಂತರ ಕಲಿಕೆಯ ಮನೋಭಾವವನ್ನು ಸಂಭ್ರಮಿಸಿತು. ಪದವೀಧರ ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಪಯಣ, ಹೊಸ ಅವಕಾಶಗಳು ಹಾಗೂ ಹೊಸ ಸವಾಲುಗಳಿಗೆ ನಾಂದಿ ಹಾಡುವ ಮಹತ್ವದ ಕ್ಷಣವಾಗಿ ಈ ಘಟಿಕೋತ್ಸವ ಮೂಡಿಬಂದಿತು.