ಮುಧೋಳದ ಬಾಗಲಕೋಟೆ ಬವಿವ ಸಂಘದ ಎಸ್ ಆರ್.ಕಂಠಿ ಮಹಾವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಹೇಶ ಅಥಣಿ ಮಾತನಾಡಿದರು. ಡಾ. ಎಸ್.ಎಂ. ಗಾಂವಕರ, ಪ್ರಾಚಾರ್ಯ ಡಾ. ಎಂ.ಆರ್. ಜರಗುಂಟಿ ಇತರರಿದ್ದರು.
- ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾಹಿತಿ
- ನಾಳೆ ಮುಧೋಳದಲ್ಲಿ ಉದ್ಘಾಟನೆ
ಮುಧೋಳ: ಬಾಗಲಕೋಟೆ ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ನಗರದ ಶ್ರೀ ಎಸ್.ಆರ್. ಕಂಠಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮದಡಿ ಐಟಿಇಪಿ ನೂತನವಾಗಿ 4 ವರ್ಷಗಳ ಬಿ.ಎ. ಬಿ.ಎಡ್., ಮತ್ತು ಬಿ.ಎಸ್ಸಿ., ಬಿ.ಎಡ್., ಕೋರ್ಸ್ ಗಳನ್ನು ಆರಂಭಿಸಲಾಗಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ತಿಳಿಸಿದ್ದಾರೆ.
ಎಸ್.ಆರ್. ಕಂಠಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಷನಲ್ ಕಾಮನ್ ಎಂಟ್ರೆನ್ಸ್ ಟೆಸ್ಟ್ (ಎನ್‌ಸಿಇಟಿ) ಮೂಲಕ ಪ್ರವೇಶ ಪಡೆಯುವ ಈ ಸಮಗ್ರ ಶಿಕ್ಷಕರ ಶಿಕ್ಷಣ ಕೋರ್ಸ್ ಆರಂಭಿಸಿದ ಉತ್ತರ ಕರ್ನಾಟಕದ ಮೊದಲ ಸಂಸ್ಥೆ ಎಂಬ ಹೆಮ್ಮೆಗೆ ನಮ್ಮ ಮಹಾವಿದ್ಯಾಲಯ ಪಾತ್ರವಾಗಿದೆ.
ಸಾಮಾನ್ಯ ವಿಧಾನದಲ್ಲಿ ಪದವಿ ಹಾಗೂ ಬಿ.ಎಡ್., ಮುಗಿಸಲು ಐದು ವರ್ಷಗಳು ಬೇಕಾಗುತ್ತಿದ್ದು, ಈ ಐಟಿಇಪಿ ಕೋರ್ಸ್ ಮೂಲಕ ವಿದ್ಯಾರ್ಥಿಗಳು ಕೇವಲ ನಾಲ್ಕು ವರ್ಷಗಳಲ್ಲೇ ಪದವಿಯೊಂದಿಗೆ ಶಿಕ್ಷಣ ಅರ್ಹತೆ ಪಡೆಯಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಸಮಯ ಹಾಗೂ ಆರ್ಥಿಕ ನಷ್ಟ ತಪ್ಪಲಿದೆ ಎಂದರು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈ ಕೋರ್ಸ್‌ಗೆ ಕರ್ನಾಟಕ ರಾಜ್ಯ ಸೇರಿ ಹೊರ ರಾಜ್ಯಗಳಿಂದ ಈಗಾಗಲೇ ಒಟ್ಟು ಹನ್ನೊಂದು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಬಿ.ಎಸ್ಸಿ., ಬಿ.ಎಡ್., ಪದವಿಗೆ ಐವತ್ತು ವಿದ್ಯಾರ್ಥಿಗಳು ಹಾಗೂ ಬಿ.ಎ., ಬಿ.ಎಡ್., ಪದವಿಗೆ ಐವತ್ತು ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ಪಡೆಯಲಾಗಿದ್ದು, ಬಿ.ಎಸ್ಸಿ., ಬಿ.ಎಡ್., ಪದವಿಗೆ 21,150 ರೂ. ಹಾಗೂ ಬಿ.ಎ. ಬಿ.ಎಡ್., ಪದವಿಗೆ 19,150 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಈ ಮಹತ್ವಾಕಾಂಕ್ಷಿ ಕೋರ್ಸ್‌ನ ಸದುಪಯೋಗವನ್ನು ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಅವರು ಕೋರಿದರು.
ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, ಸೆಪ್ಟೆಂಬರ್ 12ರಂದು ಬೆಳಗ್ಗೆ 10.30ಕ್ಕೆ ನಗರದ ಬಿಜೆವಿಎಂಟಿ ಕಾಲೇಜಿನ ಸಭಾಂಗಣದಲ್ಲಿ ಐಟಿಇಪಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಲಿದೆ. ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಉದ್ಘಾಟಿಸುವರು. ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ ಹಾಗೂ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಾ. ಎಸ್.ಎಂ. ಗಾಂವಕರ, ಪ್ರಾಚಾರ್ಯ ಡಾ. ಎಂ.ಆರ್. ಜರಗುಂಟಿ, ಬಿವಿವಿ ಸಂಘದ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಿರೇಮಠ, ಮಾರುತಿ ಮೋರೆ, ಡಾ. ಶ್ರವಣಕುಮಾರ ಕೆರೂರ ಇತರರಿದ್ದರು.