It was the BJP that implemented the SIR 
ರಾಜ್ಯ

ಎಸ್​ಐಆರ್​ ಜಾರಿಗೆ ತಂದಿದ್ದೇ ಬಿಜೆಪಿ

ಗುಬ್ಬಿ:ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ದೇಶದಲ್ಲಿ ಜಾರಿಗೆ ತಂದಿದ್ದೆ ಬಿಜೆಪಿ. ಆದರೆ ರಾಜ್ಯದಲ್ಲಿ ಇದಕ್ಕೆ ವಿರೋಧ ವ್ಯಕ್ತ ಪಡಿಸಿರುವುದು ಹಾಸ್ಯಾಸ್ಪದ ಎನಿಸುತ್ತದೆ. ಎಲ್ಲ ಪಕ್ಷದಲ್ಲಿ ಬೂತ್​ ಮಟ್ಟದ ಏಜೆಂಟ್​ ನೇಮಕ ಮಾಡಿ ತರಬೇತಿ ನೀಡಿ ಪರಿಷ್ಕರಣೆ ನಡೆಸಿದ್ದರೂ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಎಸ್​.ಆರ್​.ಶ್ರೀನಿವಾಸ್​ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಪತ್ರೆ ಮತ್ತಿಘಟ್ಟ ಹಾಗೂ ಕರೆಕುರಿಹಟ್ಟಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿಮಾರ್ಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ ಮ್ಯಾಪಿಂಗ್​ ಮೂಲಕ 98.07ರಷ್ಟು ಮತದಾರರು ಅರ್ಹರು ಎನ್ನಲಾಗಿದೆ. ಉಳಿದ ಮತದಾರರು ತಮ್ಮ ದಾಖಲಾತಿ ನೀಡುತ್ತಾರೆ. ಅಚ್ಚುಕಟ್ಟಾಗಿ ನಡೆದ ಎಸ್​ಐಆರ್​ ಕಾರ್ಯದಲ್ಲಿ ಗೊಂದಲ ಮೂಡಿಸುವ ಬಿಜೆಪಿಯ ಡೋಂಗಿ ಆಟ ಏನೂ ಎಂದು ತಿಳಿಯಲಾಗುತ್ತಿಲ್ಲ ಎಂದು ಛೇಡಿಸಿದರು.
ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ ಬಿಜೆಪಿಗೆ ಬಾರದ ಮತಗಳನ್ನು ಕಿತ್ತು ಹಾಕಲು ನಮ್ಮಲ್ಲಿ ಆಗುತ್ತಿಲ್ಲ ಎಂದು ನೋವು ಬಿಜೆಪಿಗೆ ಆಗುತ್ತಿರಬೇಕು. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಇರುವ ಕಾರಣವನ್ನೇ ಮುಂದಿಟ್ಟುಕೊಂಡು ಇಲ್ಲಸಲ್ಲದ ಆರೋಪಕ್ಕೆ ಮುಂದಾಗಿದೆ. ಕಾಂಗ್ರೆಸ್​ ಕಾರ್ಯಕರ್ತರು ಎಲ್ಲೆಡೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲಿ ನಮ್ಮ ಸರ್ಕಾರ ಸ್ಥಳಿಯ ಚುನಾವಣೆ ನಡೆಸಲಿದೆ. ಮೀಸಲಾತಿ ಮಾತ್ರ ಬಾಕಿ ಇದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಕೃಷಿಕರಿಗೆ ಸಮಸ್ಯೆಯಾಗಿದೆ. ಮುಂದೆ ಕುಡಿಯುವ ನೀರಿನ ಸಮಸ್ಯೆ ಸಹ ತಲೆದೋರುತ್ತದೆ. ಬೆಂಗಳೂರಿನಲ್ಲಿ ನೀರು ಪೂರೈಕೆ ಮಾಡುವುದು ಕಷ್ಟವಾಗಲಿದೆ. ನಮ್ಮ ಗುಬ್ಬಿ ತಾಲೂಕಿನಲ್ಲಿ 12 ಕಡೆ ಮಾತ್ರ ಸಮಸ್ಯೆ ಕಂಡು ಬಂದಿದ್ದು, ಈಗಾಗಲೇ ಕ್ರಮ ವಹಿಸಿ ಬೋರ್​ ವೆಲ್​ ಕೊರೆಸಲಾಗಿದೆ ಎಂದರು.