KN Rajanna words on b nagendra's resignation
- ವಾಲ್ಮೀಕಿ ಹಗರಣ ಕೇಸ್ ಜೀವಂತ ಇರುವಾಗ ನಾಗೇಂದ್ರರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೇ ತಪ್ಪು.
- ನಾಗೇಂದ್ರ ಇನ್ನೂ ಯುವಕ, ಇಂಥ ಘಟನೆಯಿಂದ ರಾಜಕೀಯದಲ್ಲಿ ಆಸಕ್ತಿಯೇ ಹೋಗುತ್ತದೆ.
- ಶುಕ್ರವಾರ ನಾಗೇಂದ್ರ ಅವರು ರಾಜೀನಾಮೆ ಕೊಟ್ಟ ಬಗ್ಗೆ ಕೆಎನ್ ರಾಜಣ್ಣ ಮಾತು.
ಬೆಂಗಳೂರು: 'ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಹಣಕಾಸು ಅವ್ಯವಹಾರ ನತ್ತು ಅಕ್ರಮ ವರ್ಗಾವಣೆ ಕೇಸ್ ಇನ್ನೂ ಜೀವಂತವಾಗಿರುವಾಗಲೇ ನಾಗೇಂದ್ರ ಅವರನ್ನು ಕ್ಯಾಬಿನೇಟ್ಗೆ ತೆಗೆದುಕೊಳ್ಳಬಾರದಿತ್ತು' ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕೆಎನ್ ರಾಜಣ್ಣ(KN Rajanna) ಅವರು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 185 ಕೋಟಿ ರೂ. ಹಗರಣ ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಡೆಸಿದ ಹೋರಾಟಕ್ಕೆ ಮಣಿದಿರುವ ಬಿ. ನಾಗೇಂದ್ರ ಕಣ್ಣೀರಿಡುತ್ತಲೇ ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದರು. ಈ ವಿಚಾರದ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಬೆಂಗಳೂರಿನಲ್ಲಿ ಮಾತನಾಡಿದರು.
ಕ್ಯಾಬಿನೆಟ್ಗೆ ಸೇರಿಸಿಕೊಂಡಿದ್ದು ತಪ್ಪು
'ಈ ಹಗರಣ ಕೇಸ್ ಜೀವಂತ ಇರುವಾಗ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೇ ತಪ್ಪು. ನಾಗೇಂದ್ರನನ್ನ ಕ್ಯಾಬಿನೇಟ್ಗೆ ತೆಗೆದುಕೊಳ್ಳಬಾರದಿತ್ತು. ಯಾವ ಕೇಸ್ ಆಧಾರದ ಮೇಲೆ ಕಳೆದ ಬಾರಿ ಅವರು ರಾಜೀನಾಮೆ ಕೊಟ್ಟರೋ, ಆ ಕೇಸ್ ಇನ್ನೂ ಜೀವಂತವಾಗಿದೆ. ಈಗ ಮತ್ತೆ ಅದೇ ಆಧಾರ ಮೇಲೆಯೇ ಮತ್ತೆ ರಾಜೀನಾಮೆ ಕೊಟ್ಟಿದ್ದಾರೆ' ಎಂದು ಕೆಎನ್ ರಾಜಣ್ಣ ಹೇಳಿದರು.
ಬಲಿಪಶು ಮಾಡಿದ್ದಾರೆ
ಮುಂದುವರೆದು, 'ನಾಗೇಂದ್ರ ಕಂಡರೆ I pity for him ಅವನ ಬಗ್ಗೆ ಕರುಣೆ ಇದೆ. ಅವರನ್ನು ಎರಡು ಸಲ ಬಲಿಪಶು ಮಾಡಿದಂತಾಯಿತು. ಮೊದಲ ಬಾರಿಯ ರಾಜೀನಾಮೆ ಬಿಡಿ. ಆದರೆ ಈ ಬಾರಿಯಂತೂ ಅನವಶ್ಯಕವಾಗಿ ಬಲಿಪಶು ಮಾಡಿದಂತಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ನಾಗೇಂದ್ರ ಇನ್ನೂ ಯುವಕ ಇದ್ದಾನೆ. ಈ ರೀತಿಯ ಬೆಳವಣಿಗೆಯಾದರೇ ರಾಜಕೀಯದಲ್ಲಿ ಆಸಕ್ತಿಯೇ ಹೋಗುತ್ತದೆ. ಮತ್ತೆ ಅಂಥ ಪರಿಸ್ಥಿತಿಗೆ ನಾಗೇಂದ್ರನನ್ನ ದೂಡಿರುವುದು ಸರಿಯಲ್ಲ. ಈ ಸಂದರ್ಭ ಸರಿಯಾದ ಪ್ರಕ್ರಿಯೆ ಅಲ್ಲ' ಎಂದು ಅವರು ಹೇಳಿದರು.
ಕಾಂಗ್ರೆಸ್ ಬಿಡಲ್ಲ
'ನಾವು ಯಾವತ್ತೂ ಕಾಂಗ್ರೆಸ್ ಬಿಟ್ಟು ಹೋಗೋ ಪ್ರಶ್ನೆ ಇಲ್ಲ. ಕಾಂಗ್ರೆಸ್ ನಲ್ಲಿ ನಾವು 50 ವರ್ಷ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈಗಲೂ ಅಷ್ಟೇ ಕಾಂಗ್ರೆಸ್ ನಲ್ಲೂ ಇದ್ದೀವಿ, ಮುಂದೇನು ಕೂಡ ಇರ್ತೇವೆ. ಮತ್ತೆ ಮುಂದಿನ ಚುನಾವಣೆಗಳು, ಡಿಲಿಮಿಟೇಶನ್ ಇವೆಲ್ಲ ಆಗ್ತವೆ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದು ಬಿಡೋದು ಅಂತ ಆಗ ತೀರ್ಮಾನ ಮಾಡ್ತೇವೆ ಎಂದು ಹೇಳಿದರು.
'ದೇವೇಗೌಡರನ್ನ ಭೇಟಿ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ದೇವೇಗೌಡರನ್ನು ಹೋಗಿ ಭೇಟಿ ಮಾಡಿದ್ದೇನೆ.ಚನ್ನಮ್ಮನವರು ನಿಧನರಾದಾಗ ಹೊಳೆನರಸೀಪುರಕ್ಕೆ ಹೋಗಿ ಭೇಟಿ ಮಾಡಿದ್ದೆ. ಅವರು ಎಲ್ಲೋ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಬಂದ ಮೇಲೆ ಸೌಜನ್ಯಕ್ಕೆ ಹೋಗಿ ಮಾತಾಡಿರಬಹುದು. ಅದಕ್ಕೆ ಯಾವುದೋ ರಾಜಕೀಯದ ಬಣ್ಣ ಕಟ್ಟೋದು ಸರಿಯಲ್ಲ' ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟನೆ ಕೊಟ್ಟರು.
ಪರಿಶಿಷ್ಟ ಪಂಗಡದವನೆಂದು ನನ್ನನ್ನು ಗುರಿ ಮಾಡಲಾಗಿದೆ
'ನಾನೊಬ್ಬ ಪರಿಶಿಷ್ಟ ಪಂಗಡದವ ಎಂಬ ಕಾರಣಕ್ಕಾಗಿಯೇ ನನ್ನನ್ನು ಗುರಿಯಾಗಿಸಲಾಗಿದೆ. ಶೂದ್ರರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರನ್ನು ಕಂಡರೆ ಬಿಜೆಪಿಗೆ ಸಹಿಸಲು ಸಾಧ್ಯವಿಲ್ಲ. ಈ ಸವಾಲನ್ನು ನಾನು ದಿಟ್ಟವಾಗಿ ಎದುರಿಸುತ್ತೇನೆ' ಎಂದು ಭಾವುಕರಾಗಿಮಾಜಿ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟ ವೇಳೆ ಮಾತನಾಡಿದ್ದರು, (ಏಜೆನ್ಸೀಸ್)