It rained...millet sowing has accelerated! 
ರಾಜ್ಯ

ಮಳೆ ಬಿತ್ತು...ರಾಗಿ ಬಿತ್ತನೆ ಚುರುಕಾಯ್ತು!

ರೇಷ್ಮೆ ನಗರ ಡೆಸ್ಕ್

ಮಾಗಡಿ

ತಾಲೂಕಿನಾದ್ಯಂತ ತಡವಾಗಿಯಾದರೂ ಮಳೆ ಕೃಪೆ ತೋರಿರುವುದರಿಂದ ಕೃಷಿಕರು ಕೊನೆಗೂ ನಿಟ್ಟುಸಿರು ಬಿಟ್ಟು, ರಾಗಿ ಬಿತ್ತನೆಯಲ್ಲಿ ಸಕ್ರಿಯವಾಗಿದ್ದಾರೆ. ಆದರೆ, ಬೆಳೆ ಮಾಡಬೇಕಿದ್ದ ನಿಗದಿತ ಸಮಯಕ್ಕಿಂತ ಒಂದು ತಿಂಗಳು ತಡವಾಗಿ ಮಳೆ ಬಂದಿರುವುದು ಕೃಷಿ ೇತ್ರದ ಮೇಲೆ ಪರಿಣಾಮ ಬೀರಲಿದೆ.

ಇಲಾಖೆ ಸಲಹೆ

ಒಂದು ತಿಂಗಳು ಸಮಯ ಮೀರಿ ಹೋಗಿರುವುದರಿಂದ ಸಾಂಪ್ರದಾಯಿಕ ರಾಗಿ ಬೆಳೆಯುವುದು ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಕಡಿಮೆ ಅವಧಿಯಲ್ಲಿ ಕೊಯ್ಲಿಗೆ ಬರುವ ಅಲ್ಪಾವಧಿ ರಾಗಿ ತಳಿ ಜಿಪಿ 28 ಹಾಗೂ ಎಂಡಿಎಲ್​ 365 ರಾಗಿ ಬಿತ್ತನೆ ತಳಿ ಮಾತ್ರ ಬಿತ್ತನೆ ಮಾಡುವಂತೆ ಕೃಷಿ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಅಲ್ಪಾವಧಿ ತಳಿಗಳ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ಕೃಷಿಕರು ಬಳಸಿಕೊಂಡು ಬಿತ್ತನೆ ಮಾಡಲು ಮನವಿ ಮಾಡಿದ್ದಾರೆ.

ಸಾಂಪ್ರದಾಯಿಕವಾಗಿ ಜುಲೈನಲ್ಲಿ ಪೂರ್ಣಗೊಳ್ಳಬೇಕಿದ್ದ ಬಿತ್ತನೆ ಆಗಸ್ಟ್​ನಲ್ಲೂ ತಡವಾಗಿ ಸಾಗುತ್ತಿದೆ, ಈ ಬೆಳವಣಿಗೆ ಇಳುವರಿ ಕುಸಿತ ಹಾಗೂ ಮುಂಬರುವ ದಿನಗಳಲ್ಲಿ ಭೀಕರ ಬರಗಾಲ ಸೃಷ್ಟಿಯಾಗುವ ಭೀತಿ ಹುಟ್ಟುಹಾಕಿದೆ.

ತಾಲೂಕಿನಲ್ಲಿ ತೀವ್ರ ಮಳೆ ಅಭಾವದಿಂದ ಅನ್ನದಾತರು ಕಂಗಾಲಾಗಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ, ಅನುಕೂಲವಾಗುವ ವಿಶೇಷ ಆರ್ಥಿಕ ಹಾಗೂ ಕೃಷಿ ಯೋಜನೆ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕಿನ ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.

— ಆರ್​.ದಿನೇಶ್​, ಯುವ ಅಧ್ಯಕ , ಕೆಂಪೇಗೌಡ ರೈತಸಂ

ತಾಲೂಕಿನಲ್ಲಿ 31 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆ ಅಭಾವದಿಂದ 813 ಹೆಕ್ಟೇರ್​ ಪ್ರದೇಶದಲ್ಲಷ್ಟೇ ಬಿತ್ತನೆ ಪೂರ್ಣಗೊಂಡಿದೆ. ಮಳೆ ಬರದೆ ಬಿತ್ತನೆ ತಡವಾಗಿರುವುದರಿಂದ ಬೆಳೆಯ ಒಟ್ಟಾರೆ ಬೆಳವಣಿಗೆಯ ಅವಧಿ ಕಡಿಮೆಯಾಗಲಿದೆ.

ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ರೈತರು ನಷ್ಟ ತಪ್ಪಿಸಿಕೊಳ್ಳಲು ಅಲ್ಪಾವಧಿ ತಳಿಗಳ ಬಿತ್ತನೆಗೆ ಆದ್ಯತೆ ನೀಡಬೇಕು. ಇಲಾಖೆಯಲ್ಲಿ ರೈತರಿಗೆ ಅಗತ್ಯವಿರುವ ಅಲ್ಪಾವಧಿ ತಳಿ ದಾಸ್ತಾನು ಮಾಡಲಾಗಿದೆ. ಅದರೊಂದಿಗೆ ಬರಗಾಲದ ಭೀತಿಯಿಂದಾಗುವ ಆರ್ಥಿಕ ನಷ್ಟದಿಂದ ರಕ್ಷಣೆ ಪಡೆಯಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಕಡ್ಡಾಯ ಮಾಡಿಸಿಕೊಳ್ಳಬೇಕು.

— ವಿಜಯ ಸವಣೂರು, ಸಹಾಯಕ ಕೃಷಿ ನಿರ್ದೇಶಕಿ ಮಾಗಡಿ

ಕೃಷಿ ಇಲಾಖೆಯಿಂದ ಪೂರೈಕೆ: ರೈತರ ತುರ್ತು ಅಗತ್ಯ ಪೂರೈಸಲು ಕೃಷಿ ಇಲಾಖೆ ರೈತರ ಎಫ್​ಐಡಿ ಆಧಾರದ ಮೇಲೆ ಸಬ್ಸಿಡಿ ದರದಲ್ಲಿ ಬಿತ್ತನೆ ರಾಗಿ ವಿತರಣೆ ಮಾಡುತ್ತಿದೆ. ಇಲಾಖೆಯಿಂದ 800 ಕ್ವಿಂಟಾಲ್​ ಬಿತ್ತನೆ ರಾಗಿ ರೈತರಿಗೆ ತಲುಪಿಸಲಾಗಿದ್ದು, ಇನ್ನುಳಿದಂತೆ 600 ಕ್ವಿಂಟಾಲ್​ ವಿತರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕೃಷಿ ಇಲಾಖೆ 5 ಕೆಜಿ ರಾಗಿ ಬಿತ್ತನೆ ಬೀಜದ ಪ್ಯಾಕೇಟ್​ಗೆ 255 ರೂ. ನಿಗದಿಪಡಿಸಿದೆ. ಇಲಾಖೆ ವ್ಯಾಪ್ತಿಯಲ್ಲಿ ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್​ ರಸಗೊಬ್ಬರಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದರೂ ಮಳೆಯ ಅನಿಶ್ಚಿತತೆಯಿಂದಾಗಿ ಕೃಷಿಕರು ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ರಸಗೊಬ್ಬರ ಹಾಗೂ ಬೀಜ ಖರೀದಿಗೆ ಭಾರಿ ಸ್ಪಂದನೆ ವ್ಯಕ್ತವಾಗಿತ್ತು, ಈ ಸಲ ಕಡಿಮೆಯಾಗಿದೆ.