DK Shivakumar | ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಕಾರವಾರ: ಸಿಎಂ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಒಪ್ಪಂದವಾಗಿದ್ದು ನಿಜ. ಹೈಕಮಾಂಡ್ ಸೂಚನೆಯಂತೆ ನಾವು ಮಾತುಕತೆ ನಡೆಸಿ ಒಟ್ಟಾಗಿ ಸಾಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದಲ್ಲಿ ಜಗದೀಶ್ವರಿ ದೇವರಿಗೆ ಪೂಜೆ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಸಿದ್ದರಾಮಯ್ಯ ಪರವಾಗಿ ಹೈಕಮಾಂಡ್ ಇರುವುದರಿಂದ ಸಿಎಂ ಆಗಿದ್ದಾರೆ, ಅವರು ಐದು ವರ್ಷ ಅಧಿಕಾರ ಪೂರ್ಣಗೊಳಿಸುವುದಿಲ್ಲ ಎಂದು ನಾನೆಲ್ಲೂ ಹೇಳಿಲ್ಲ ಎಂದರು.
ಶಾಸಕ, ಸಚಿವರನ್ನು ಹೊರಗಿಟ್ಟು ಪೂಜೆ
ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್ ಮತ್ತು ಅನೇಕ ಕಾರ್ಯಕರ್ತರು ಆಂದ್ಲೆ ಜಗದೀಶ್ವರಿ ದೇವಾಲಯದ ಬಳಿ ಇದ್ದರು. ಅವರನ್ನೆಲ್ಲಾ ಹೊರಗಿಟ್ಟು ಡಿ.ಕೆ.ಶಿವಕುಮಾರ್ ತಾವೊಬ್ಬರೇ ಗರ್ಭಗುಡಿಗೆ ತೆರಳಿ ಕೆಲವು ಪ್ರಶ್ನೆಗಳನ್ನು ಕೇಳಿದ ಬಳಿಕ ಪೂಜೆ ಸಲ್ಲಿಸಿದರು. ಐದು ವರ್ಷಗಳ ಹಿಂದೆ ಇಲ್ಲಿಗೆ ಬಂದು ಹರಕೆ ಹೊತ್ತಿದ್ದೆ. ಇಷ್ಟಾರ್ಥ ಈಡೇರಿತ್ತು. ಈಗ ಬಂದು ಹರಕೆ ತೀರಿಸಿದ್ದೇನೆ ಎಂದು ಹೇಳಿದರು.
ಡಿನ್ನರ್ ಮೀಟಿಂಗ್ ಬಗ್ಗೆ ಹೇಳಿದ್ದೇನು..?
ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಈ ರೀತಿ ಪ್ರತಿಕ್ರಿಯೆ ನೀಡಿದ ಡಿಸಿಎಂ, ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಗುರುವಾರ ರಾತ್ರಿ ಡಿನ್ನರ್ ಮೀಟಿಂಗ್ ನಡೆದಿದೆಯಲ್ಲ ಎಂದು ಕೇಳಿದಾಗ ಡಿಸಿಎಂ ಈ ರೀತಿ ಉತ್ತರಿಸಿದರು. ಎಲ್ಲ ಸೇರಿ ಊಟ ಮಾಡೋದ್ರಲ್ಲಿ ತಪ್ಪು ಹುಡುಕಬೇಡಿ. "ಅದು ನನಗ್ಯಾಕೆ ಬೇಕು. ನನ್ನನ್ಯಾಕೆ ಈ ಪ್ರಶ್ನೆ ಕೇಳ್ತೀರಿ" ಎಂದು ಮರು ಪ್ರಶ್ನಿಸಿದರು.
ಕಾಲವೇ ಉತ್ತರ ನೀಡುತ್ತೆ
ನಿಮ್ಮನ್ನು ಭ್ರಷ್ಟಾಚಾರದ ಪಿತಾಮಹ ಎಂದು ವಿಜಯೇಂದ್ರ ಕರೆದಿರುವ ಬಗ್ಗೆ ಕೇಳಿದಾಗ, "ವಿಜಯೇಂದ್ರ ಅವರಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡೋಣ. ಹೈಕಮಾಂಡ್ ಗೆ ನಾವು ಎಟಿಎಂ ಎಂದು ವಿಜಯೇಂದ್ರ ಹೇಳಿದ್ದಾರೆ. ಇದನ್ನು ಅವರು ಸಾಬೀತು ಮಾಡಬೇಕು. ಯಾವ ಲೆಕ್ಕಾಚಾರದ ಮೇಲೆ ಅವರು ಆರೋಪ ಮಾಡಿದ್ದಾರೆ. ಇಲ್ಲಿ ಸರಕಾರನಾ ನಾವು ದಿವಾಳಿ ಮಾಡಿ ದುಡ್ಡು ತೆಗೆದುಕೊಂಡು ಹೋಗಿ ಹೈಕಮಾಂಡ್ ಗೆ ಕೊಡುತ್ತಿದ್ದೇವೆ, ನಾವು ಹೈ ಕಮಾಂಡ್ ಗೆ ಎಟಿಎಂ ಎಂದು ಹೇಳಿದ್ದಾರೆ. ಈಗ ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಉಳಿದ ಉತ್ತರಕ್ಕೆ ಸಮಯ ಬರುತ್ತದೆ, ಕಾಲವೇ ಉತ್ತರ ನೀಡುತ್ತದೆ. ಅವರಿಗೆ ಏನು ಬೇಕೋ ಆ ಉತ್ತರ ಈಗಾಗಲೇ ನೀಡಿದ್ದೇನೆ" ಎಂದರು.