ಸರ್ವೇ ನಡೆಸದೆ ಜಮೀನು ತೆರವುಗೊಳಿಸುವುದು ಸರಿಯಲ್ಲ survey
ಮುಳಬಾಗಿಲು: ತಾಲೂಕಿನಲ್ಲಿ ಅರಣ್ಯ ಇಲಾಖೆ ರೈತರ ಜಮೀನನ್ನು ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ರೈತರಿಗೆ ಮಾಹಿತಿ ನೀಡದೆ ತೆರವಿಗೆ ಮುಂದಾಗಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಹೆಬ್ಬಣಿ ಎಂ.ಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು.survey
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ವಿ.ಗೀತಾ ಅಧ್ಯತೆಯಲ್ಲಿ ಆಯೋಜಿಸಿದ್ದ ರೈತ ಕುಂದು, ಕೊರತೆಗಳ ಸಭೆಯಲ್ಲಿ ಮಾತನಾಡಿ, ಅರಣ್ಯ ಇಲಾಖೆ ರೈತರು ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಏಕಾಏಕಿಯಾಗಿ ವಶಕ್ಕೆ ಪಡೆಯುತ್ತಿರುವುದು ಸರಿಯಲ್ಲ. ಒತ್ತುವರಿ ಆದ ಜಮೀನುಗಳನ್ನು ವಶಕ್ಕೆ ಪಡೆಯಬೇಕಾದರೆ ಸರ್ವೇ ನಡೆಸಬೇಕು. ಒತ್ತುವರಿದಾರರಿಗೆ ಮುಂಚಿತವಾಗಿ ನೋಟಿಸ್ ಜಾರಿ ಮಾಡಬೇಕು. ಇವು ಯಾವುದನ್ನು ಅರಣ್ಯ ಇಲಾಖೆ ಗಣನೆಗೆ ತೆಗೆದುಕೊಂಡಿಲ್ಲ. ಕಂದಾಯ ಇಲಾಖೆಯ ಜತೆಗೆ ಜಂಟಿ ಸರ್ವೇ ಮಾಡದೆ ತಮಗೆ ಇಷ್ಟಬಂದಂತೆ ಒತ್ತುವರಿ ಮಾಡುತ್ತಿರುವುದು ನಿಜಕ್ಕೂ ರೈತ ವಿರೋಧಿ ಹಾಗೂ ಕಾನೂನು ಬಾಹಿರ ಆಗಿದೆ. ಮುಂದಿನ ದಿನಗಳಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ನಡೆಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ವಿ.ಗೀತಾ ಮಾತನಾಡಿ, ಈ ವಿಚಾರದ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.