ಕಮಲಾಪುರ ತಾಲೂಕಿನ ಭೀಮನಾಳ ಕ್ರಾಸ್​ ಬಳಿಯ ಜಮೀನಿಗೆ ಡಿಪಿಎಆರ್​ ಪ್ರಧಾನ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ ಭೇಟಿ ನೀಡಿ ಪರಿಶೀಲಿಸಿದರು. ರಾಹುಲ್​ ಸಂಕನೂರ, ಸಾಹಿತ್ಯ ಆಲದಕಟ್ಟಿ, ಸಮದ್​ ಪಟೇಲ್​, ಮಹಮ್ಮದ್​ ಮೋಹಸಿನ್​, ರಮೇಶ ಪಾಟೀಲ್​, ಅರುಣಕುಮಾರ ಮೂಲಿಮನಿ ಇದ್ದರು 
ರಾಜ್ಯ

ಮಳೆ ಬರುತ್ತಿಲ್ಲ, ಬಿತ್ತಿದ ಬೆಳೆ ಉಳಿಯುತ್ತಿಲ್ಲ

ಪ್ರಮುಖ ಮುಖ್ಯಾಂಶಗಳು

  • ಡಿಪಿಎಆರ್​ ಪ್ರಧಾನ ಕಾರ್ಯದರ್ಶಿ ಪಾಂಡೆ ಎದುರು ಭೀಮನಾಳ ರೈತರ ಅಳಲು
ಕಮಲಾಪುರ: ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಕಾರ್ಯ ಮಾಡಿದ್ದು, ಮಳೆ ಕೈಕೊಟ್ಟಿದ್ದರಿಂದ ಬೆಳೆ ಮಣ್ಣಿಂದ ಮೇಲೇಳುತ್ತಿಲ್ಲ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಬೆಳೆ ಒಣಗಿ ನಾವೆಲ್ಲರೂ ಬೀದಿಗೆ ಬರುವ ಸ್ಥಿತಿ ಇದೆ. ಸಾಹೇಬ್ರೇ ಸರ್ಕಾರವೇ ನಮ್ಮ ನೆರವಿಗೆ ಬರಬೇಕು, ನಮ್ಮ ನೋವಿಗೆ ಸ್ಪಂದಿಸಬೇಕು ಎಂದು ಭೀಮನಾಳ ರೈತರು ಅಳಲು ತೋಡಿಕೊಂಡ ಪ್ರಸಂಗ ಶುಕ್ರವಾರ ನಡೆದಿದೆ.
ಭೀಮನಾಳ ಕ್ರಾಸ್​ ಬಳಿಯ ಜಮೀನಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಡಿಪಿಎಆರ್​) ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ ನೀಡಿದ ವೇಳೆ ಜಮಾಯಿಸಿದ ರೈತರು, ಪ್ರತಿ ವರ್ಷ ಜೂನ್​ ಮೊದಲನೇ ವಾರದ ಹೊತ್ತಿಗೆ ಮೊಳಕಾಲುದ್ದ ಬೆಳೆ ಬೆಳೆದು ನಿಲ್ಲುತ್ತಿತ್ತು. ಆದರೆ ಇದೀಗ ಆಗಾಗ ಒಂದೆರಡು ಹನಿ ಮಳೆ ಬೀಳುತ್ತಿದೆ. ಮಣ್ಣಿನ ಮೇಲ್ಪದರು ಸಹ ಹಸಿಯಾಗುತ್ತಿಲ್ಲ. ಮೋಡ ಗೋಚರಿಸುವುದು ಮತ್ತೆ ತಿಳಿಯಾಗುವುದು ನಿರಂತರ ಪ್ರಕ್ರಿಯೆಯಾಗಿದೆ. ನಾವೆಲ್ಲರೂ ಮುಗಿಲಿನತ್ತ ನೋಡುತ್ತಾ ಕುಳಿತಿದ್ದೇವೆ ಎಂದು ಸಮಸ್ಯೆ ಹೇಳಿಕೊಂಡರು.
ಪಂಕಜಕುಮಾರ ಪಾಂಡೆ ಮಾತನಾಡಿ, ರೈತಾಪಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಬಿತ್ತನೆಗೂ ಮುನ್ನ ಕೃಷಿ ವಿಜ್ಞಾನಿಗಳಿಂದ ಸಮರ್ಪಕ ಮಾಹಿತಿ ಪಡೆದುಕೊಳ್ಳಬೇಕು. ಪಿಎಂ ಕುಸುಮ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ವಿಬಿ-ಜಿ ರಾಮ್​-ಜಿ ಮತ್ತು ಕೆಕೆಆರ್​ಡಿಬಿ ಅಡಿಯಲ್ಲಿ ಲಭ್ಯವಿರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡಲು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿದೇಶಕ ಸಮದ್​ ಪಟೇಲ್​ ಮಾತನಾಡಿ, ಫಸಲ್​ ಬಿಮಾ ಯೋಜನೆಯಡಿಯ ಎರಡನೇ ಕಂತಿನ ವಿಮೆ ಹಣದ ಕಡತ ಎಫ್​ಡಿಯಿಂದ ಇಲಾಖೆ ಕಾರ್ಯದರ್ಶಿ ಬಳಿಗೆ ಬಂದಿದ್ದು, 15 ದಿನದಲ್ಲಿ ರೈತರ ಖಾತೆಗೆ ಬಾಕಿ ಬೆಳೆ ವಿಮೆ ಹಣ ಜಮೆ ಆಗಲಿದೆ ಎಂದು ಹೇಳಿದರು.
ಜಿಪಂ ಸಿಇಒ ರಾಹುಲ್​ ಸಂಕನೂರ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ತಹಸೀಲ್ದಾರ್​ ಮಹಮ್ಮದ್​ ಮೋಹಸಿನ್​, ತಾಪಂ ಇಒ ರಮೇಶ ಪಾಟೀಲ್​, ಕೃಷಿ ಸಹಾಯಕ ನಿರ್ದೇಶಕ ಅರುಣಕುಮಾರ ಮೂಲಿಮನಿ, ತಾಪಂ ಎಡಿ ಜಗನ್ನಾಥ ರೆಡ್ಡಿ, ಪ್ರಮುಖರಾದ ಕೇಸರಸಿಂಗ್​ ಹಜಾರೆ, ನವರಂಗ ಜಾಧವ್​ ಇತರರಿದ್ದರು.