ಆಳಂದನಲ್ಲಿ ವಚನ ಚಾರಿಟೇಬಲ್ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಕೋರಣೇಶ್ವರ ಸ್ವಾಮೀಜಿ, ವಿ.ರಂಗಸ್ವಾಮಿ ಶೆಟ್ಟಿ, ಡಾ.ಶಿವಶಂಕರ ಟೋಕರೆ ಇತರರಿದ್ದರು.
- ಪ್ರಾಧ್ಯಾಪಕ ಗಣಪತಿ ಸಿನ್ನೂರ ಅನಿಸಿಕೆ
- ಆಳಂದನಲ್ಲಿ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ
ಆಳಂದ: ಇಂದು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಆತ್ಮವಿಶ್ವಾಸ ಹಾಗೂ ಮಾನವೀಯ ಮೌಲ್ಯ ಬೆಳೆಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗಣಪತಿ ಸಿನ್ನೂರ ಹೇಳಿದರು.
ಮನೋರಮ ಶಹಾ ಸಭಾಗೃಹದಲ್ಲಿ ಬೀದರ್ನ ವಚನ ಚಾರಿಟೇಬಲ್ ಸಂಸ್ಥೆಯಿಂದ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಮುಂದೆ ಸಾಗಬೇಕು, ಅಂದಾಗಲೇ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರು.
ತೊಂಟದಾರ್ಯ ಅನುಭವ ಮಂಟಪದ ಶ್ರೀ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶಾಲಾ-ಕಾಲೇಜು ಮಕ್ಕಳನ್ನು ಅಂಕ ಗಳಿಕೆಗೆ ಸೀಮಿತಗೊಳಿಸದೆ, ಅವರಲ್ಲಿ ವೈಚಾರಿಕ ಮನೋಭಾವ ಮೂಡಿಸುವುದು ಅವಶ್ಯ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಡಾ.ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ, ಶಿಕ್ಷರ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ ಜಿಡಗಿ, ಪ್ರಮುಖರಾದ ಗುರುಶರಣ ಪಾಟೀಲ್ ಕೊರಳ್ಳಿ, ಸತೀಶ ಎಸ್., ಸಿದ್ದಪ್ಪ ಜಮಾದಾರ ಇತರರಿದ್ದರು. ಚಂದ್ರಕಾಂತ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ವೈಜನಾಥ ಸಜ್ಜನಶೆಟ್ಟಿ ವಚನ ಸಂಗೀತ ಸೇವೆ ಸಲ್ಲಿಸಿದರು. ಅಲ್ಲಮಪ್ರಭು ನಾವದಗೆರೆ ಸ್ವಾಗತಿಸಿದರು. ಹನುಮಂತ ತೀರ್ಥೆ ನಿರೂಪಣೆ ಮಾಡಿದರು. ವೀರಶೆಟ್ಟಿ ವಂದಿಸಿದರು.