ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ನಡೆದ ಶ್ರೀಗುರುದೇವ ಸತ್ಸಂಗದ ಮಹಾಪ್ರಸಾದ ದಾಸೋಹಿ ಸುಭಾಸ ಕೋರಡ್ಡಿ ದಂಪತಿಯನ್ನು ಸನ್ಮಾನಿಸಲಾಯಿತು. ಗಂಗಾಧರ ಶ್ರೀಗಳು, ಹರ್ಷಾನಂದ ಶ್ರೀಗಳು, ಪ್ರೊ.ಬಸವರಾಜ ಕಡ್ಡಿ ಇತರರಿದ್ದಾರೆ. 
ರಾಜ್ಯ

ಬದುಕಿನಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಪ್ರೊ. ಬಸವರಾಜ ಕಡ್ಡಿ ಹೇಳಿಕೆ
  • ಸತ್ಸಂಗ ಕಾರ್ಯಕ್ರಮ
ಜಮಖಂಡಿ: ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಪರಮಾತ್ಮನ ಪರೀಕ್ಷೆ ಹಾಗೂ ಸುಖವನ್ನು ಪರಮಾತ್ಮನ ಪ್ರಸಾದವೆಂದು ಸ್ವೀಕರಿಸುವ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಹಿರಿಯ ಸಾಹಿತಿ ಪ್ರೊ. ಬಸವರಾಜ ಕಡ್ಡಿ ಹೇಳಿದರು.
ತಾಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಸ್ಯೆಗಳ ಕಾರಣ ಮತ್ತು ಪರಿಹಾರ ಎರಡೂ ನಮ್ಮೊಳಗೇ ಇವೆ. ಪರಿಹಾರ ಸಿಗದಿದ್ದರೆ ಪರಿಸ್ಥಿತಿಗೆ ಹೊಂದಿಕೊಂಡು ಬದುಕುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಹರ್ಷಾನಂದ ಮಹಾಸ್ವಾಮಿಗಳು ಷಟ್‌ಸ್ಥಲದ ಭಕ್ತನ ಪ್ರಾರ್ಥನೆ ಕುರಿತು ಆಶೀರ್ವಚನ ನೀಡಿ, ಇಷ್ಟಲಿಂಗದ ಮೇಲಿನ ಸಂಪೂರ್ಣ ಸಮರ್ಪಣಾಭಾವವೇ ನಿಜವಾದ ಭಕ್ತಿ. ತನು-ಮನ ಶುದ್ಧಿಯಿಂದ ನಿರಂತರ ಸಾಧನೆ ಮಾಡಿದಾಗ ಮಾತ್ರ ಆಧ್ಯಾತ್ಮಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು. 
ಋಷಿಕೇಶದ ಗಂಗಾಧರ ಸ್ವಾಮಿಗಳು, ಹುನ್ನೂರಿನ ಶಿವಪುತ್ರಯ್ಯ ಸಿದ್ಧಗಿರಿಮಠ ಹಾಗೂ ಮರೇಗುದ್ದಿಯ ಕೈಲಾಸಪತಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ನಿರ್ಮಾಣ ಹಂತದಲ್ಲಿರುವ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಲಾಯಿತು. ಹಿರಿಯರು, ವಿಶೇಷ ಸಾಧಕರು ಹಾಗೂ ಮಹಾಪ್ರಸಾದ ದಾಸೋಹ ಸೇವೆ ಸಲ್ಲಿಸಿದ ಸುಭಾಸ ಕೋರಡ್ಡಿ ದಂಪತಿ ಅವರನ್ನು ಸನ್ಮಾನಿಸಲಾಯಿತು.
ಶ್ರೀಗುರುದೇವ ಸಂಗೀತ ಬಳಗದ ಕಲಾವಿದರು ಭಕ್ತಿಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು. ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಉಪನ್ಯಾಸಕ ಸಂಗಮೇಶ ತೆಲಸಂಗ ನಿರೂಪಿಸಿದರು.