ಮುಧೋಳ ತಾಲೂಕಿನ ರನ್ನ ಬೆಳಗಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ ತೋಟ ನಂ. 2ರಲ್ಲಿ ಶಾಲಾ ಸಂಸತ್ ರಚನೆ ಕಾರ್ಯಕ್ರಮದಲ್ಲಿ ಎಸ್.ಎಸ್. ಮಾಳಿ ಮಾತನಾಡಿದರು. ಶಿಕ್ಷಕರಾದ ಪಿ.ಬಿ. ಪರೀಟ, ಬಿ.ಬಿ. ಸಾವಕಾರ, ಎ.ಎಚ್. ಕುಂಬಾಳಿ, ಸಿ.ಎ. ಕೊಣ್ಣೂರ ಇತರರಿದ್ದರು.
- ಸಿದ್ದಾಪುರ ತೋಟದ ಶಾಲೆಯಲ್ಲಿ ಪ್ರಜಾಪ್ರಭುತ್ವದ ಪಾಠ
- ಶಾಲಾ ಸಂಸತ್ ರಚನೆ
ಮುಧೋಳ: ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವು ಚುನಾವಣಾ ವ್ಯವಸ್ಥೆಯಲ್ಲಿದೆ. ನಮ್ಮ ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಮಹತ್ವವನ್ನು ಬಾಲ್ಯದಲ್ಲಿಯೇ ಅರಿವು ಮೂಡಿಸುವುದು ಅತ್ಯಂತ ಅವಶ್ಯಕ ಎಂದು ಪ್ರಭಾರಿ ಮುಖ್ಯಗುರು ಎಸ್.ಎಸ್. ಮಾಳಿ ಹೇಳಿದರು.
ತಾಲೂಕಿನ ರನ್ನ ಬೆಳಗಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ ತೋಟ ನಂ. 2ರಲ್ಲಿ ಶಾಲಾ ಸಂಸತ್ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ಪುಸ್ತಕದ ಪಾಠಗಳಷ್ಟೇ ಅಲ್ಲದೆ ಇಂತಹ ಪ್ರಾಯೋಗಿಕ ಕಾರ್ಯಕ್ರಮಗಳ ಮೂಲಕ ಮಕ್ಕಳು ಜವಾಬ್ದಾರಿಯುತ ನಾಯಕರಾಗಿ ಬೆಳೆಯಲು ಸಾಧ್ಯ ಎಂದರು.
ಶಾಲೆಯ ಇಂದಿನ ಈ ಶಾಲಾ ಸಂಸತ್ ರಚನೆಯು ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದರ ಜೊತೆಗೆ, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆಚರಣೆಯಲ್ಲಿ ತರಲು ಪ್ರೇರಣೆಯಾಗಿದೆ. ಭಾರತೀಯ ಪ್ರಜಾಪ್ರಭುತ್ವ ಮತ್ತು ದೇಶದ ಚುನಾವಣಾ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶಾಲಾ ಸಂಸತ್ ರಚನೆಗಾಗಿ ಚುನಾವಣಾ ಪೂರ್ವ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ನಿಗದಿತ ದಿನಾಂಕ ಮತ್ತು ನಿಯಮಗಳೊಂದಿಗೆ ಅಧಿಸೂಚನೆ ಹೊರಡಿಸಲಾಯಿತು. ವಿವಿಧ ಮಂತ್ರಿ ಸ್ಥಾನಗಳಿಗೆ ಆಕಾಂಕ್ಷಿ ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಸ್ಪರ್ಧಾ ಕಣದಲ್ಲಿದ್ದರು.
ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತಮ್ಮ ಆಲೋಚನೆಗಳು ಮತ್ತು ಮುಂದಿನ ಕಾರ್ಯ ಯೋಜನೆಗಳನ್ನು ಸಹಪಾಠಿಗಳ ಮುಂದೆ ಹಂಚಿಕೊಂಡು ಮತಯಾಚನೆ ನಡೆಸಿದರು. ನಂತರ ನಡೆದ ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಪೇಪರ್ ಬ್ಯಾಲೆಟ್ ಮೂಲಕ ರಹಸ್ಯ ಮತದಾನ ಮಾಡಿದರು.
ಅತ್ಯಂತ ಪಾರದರ್ಶಕವಾಗಿ ನಡೆದ ಮತ ಎಣಿಕೆ ಕಾರ್ಯದ ನಂತರ, ಅತಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ವಿಜೇತರೆಂದು ಘೋಷಿಸಲಾಯಿತು. ಆಯ್ಕೆಯಾದ ನೂತನ ಮಂತ್ರಿಗಳಿಗೆ ಶಿಕ್ಷಕರು ಪ್ರಮಾಣ ವಚನ ಬೋಧಿಸಿದರು.
ಶಿಕ್ಷಕರಾದ ಪಿ.ಬಿ. ಪರೀಟ, ಸಹ ಶಿಕ್ಷಕಿ ಬಿ.ಬಿ. ಸಾವಕಾರ, ಎ.ಎಚ್. ಕುಂಬಾಳಿ, ಸಿ.ಎ. ಕೊಣ್ಣೂರ ಇದ್ದರು.