ಜೆಎಸ್‌ಎಸ್ ಔಷಧ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ ನ್ಯೂಟ್ರಿವಿಷನ್’ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ ಪರ್ವತಂ ಉದ್ಘಾಟಿಸಿದರು. ಡಾ.ಬಿ.ಎನ್.ಜ್ಞಾನೇಶ್, ಡಾ.ಎಚ್. ಬಸವನಗೌಡಪ್ಪ, ಡಾ.ಕೆ.ಎ.ರವೀಶ್, ಡಾ.ಪಿ.ವನೀತಾರೆಡ್ಡಿ ಇದ್ದರು
- ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ ಪರ್ವತಂ ಅಭಿಮತ
ಮೈಸೂರು: ದೇಶದ ಎಲ್ಲ ಜನರಿಗೆ ಈಗಾಗಲೇ ಆಹಾರ ಭದ್ರತೆ ಕಲ್ಪಿಸಲಾಗಿದೆ. ಇದೀಗ ಪೌಷ್ಟಿಕಾಂಶ ಭದ್ರತೆ ಒದಗಿಸಬೇಕಿದೆ ಎಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ) ನಿರ್ದೇಶಕ ಡಾ.ಗಿರಿಧರ ಪರ್ವತಂ ಹೇಳಿದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ, ಲೈಫ್ ಸೈನ್ಸ್ ಶಾಲೆ, ಸಿಎಫ್‌ಟಿಆರ್‌ಐ ಸಹಯೋಗದಲ್ಲಿ ಜೆಎಸ್‌ಎಸ್ ಔಷಧ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ನ್ಯೂಟ್ರಿವಿಷನ್’ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲ ಜನರಿಗೆ, ಎಲ್ಲ ಸಮಯದಲ್ಲೂ ಸಕ್ರಿಯ ಮತ್ತು ಆರೋಗ್ಯಕರ ಜೀವನಕ್ಕಾಗಿ ಅಗತ್ಯವಾದ ಆಹಾರದ ಭೌತಿಕ ಹಾಗೂ ಆರ್ಥಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಆಹಾರ ಭದ್ರತೆಯಾಗಿತ್ತು. ಇದೀಗ ಪೌಷ್ಟಿಕಾಂಶ ಭದ್ರತೆಯತ್ತ ಗಮನ ನೀಡಬೇಕಿದೆ.
ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯಕರ, ಸಕ್ರಿಯ ಜೀವನಕ್ಕೆ ಅಗತ್ಯವಾದ ಪೋಷಕಾಂಶಯುಕ್ತ, ಸುರಕ್ಷಿತ ಮತ್ತು ವೈವಿಧ್ಯಮಯ ಆಹಾರವನ್ನು ಯಾವುದೇ ಅಡಚಣೆಯಿಲ್ಲದೆ, ಕೈಗೆಟುಕುವ ದರದಲ್ಲಿ ನಿರಂತರವಾಗಿ ಪಡೆಯುವ ಸ್ಥಿತಿಯೇ ಪೌಷ್ಟಿಕಾಂಶ ಭದ್ರತೆಯಾಗಿದೆ. ಇದು ಕೇವಲ ಹಸಿವು ನೀಗಿಸುವ ಆಹಾರ ಲಭ್ಯತೆ (ಆಹಾರ ಭದ್ರತೆ) ಮಾತ್ರವಲ್ಲದೆ, ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಾಂಶಗಳ ಲಭ್ಯತೆಯನ್ನೂ ಖಾತ್ರಿಪಡಿಸುತ್ತದೆ ಎಂದು ಹೇಳಿದರು.
ಆಹಾರ ಸೇವನೆ ಮೋಜಿಗಾಗಿ ಅಲ್ಲ, ಅದು ದೇಹಕ್ಕೆ ಪೋಷಕಾಂಶ ಉಣಬಡಿಸಲು ಇರುವ ಪ್ರಕ್ರಿಯೆ. ಪೌಷ್ಟಿಕ ಆಹಾರದಿಂದ ದೇಹ ಸದೃಢಗೊಂಡು ಕೆಲಸ ಕಾರ್ಯ ಮಾಡಲು, ಆರೋಗ್ಯ ಕಾಯ್ದುಕೊಳ್ಳಲು ಕಾರಣವಾಗುತ್ತದೆ. ಹೀಗಾಗಿ, ದೇಹಕ್ಕೆ ಪೂರಕವಾದ ಆಹಾರವನ್ನು ಸೇವನೆ ಮಾಡಬೇಕೇ ಹೊರತು, ಹಾನಿಕಾರಕ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜಂಕ್‌ಫುಡ್ ಅಲ್ಲ ಎಂದು ತಿಳಿಹೇಳಿದರು.
ಆಹಾರ ತಯಾರಿಕೆ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ತ್ವರಿತವಾಗಿ ಮತ್ತು ವ್ಯಾಪಕವಾಗಿ ಈ ತಾಂತ್ರಿಕತೆ ಉಪಯೋಗವಾಗುತ್ತಿದೆ. ಇದರಿಂದ ಅನೇಕ ಅನುಕೂಲ ಮತ್ತು ಪ್ರಯೋಜನಗಳು ಈ ಕ್ಷೇತ್ರಕ್ಕೆ ಈಗಾಗಲೇ ಲಭ್ಯವಾಗಿದ್ದು, ಇದರ ಪ್ರಭಾವ ಇನ್ನಷ್ಟು ವಿಸ್ತಾರವಾಗಲಿದ್ದು, ಹೀಗಾಗಿ, ಎಐ ಕೌಶಲವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಆಹಾರ ಉತ್ಪಾದನೆಯ ನಿರ್ವಹಣೆ, ಮೇಲುಸ್ತುವಾರಿ ಮತ್ತು ಕಣ್ಗಾವಲು ಇಡಲು ಎಐ ಬಳಕೆಯಾಗುತ್ತಿದೆ. ಗುಣಮಟ್ಟ ಕಾಯ್ದಕೊಳ್ಳುವಲ್ಲಿ ಇದರಿಂದ ಸಾಧ್ಯವಾಗುತ್ತಿದೆ. ಈ ಕ್ಷೇತ್ರದಲ್ಲಿ ಟ್ರಯಲ್ ಆ್ಯಂಡ್ ಎರರ್ ಪದ್ಧತಿ ಶೂನ್ಯಕ್ಕೆ ಇಳಿಸಲು ಈ ಆಧುನಿಕ ತಂತ್ರಜ್ಞಾನ ನೆರವಾಗಿದೆ. ಇದು ಭವಿಷ್ಯದ ತಂತ್ರಜ್ಞಾನವಾಗಿದೆ ಎಂದು ಹೇಳಿದರು.
ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕ ಮುಖ್ಯಸ್ಥ ಡಾ.ಬಿ.ಎನ್.ಜ್ಞಾನೇಶ್ ಮಾತನಾಡಿ, ಜಿಐ ಟ್ಯಾಗ್ ಮಾನ್ಯತೆ ಪಡೆದಿರುವ ನಂಜನಗೂಡು ರಸಬಾಳೆ, ಮೈಸೂರು ವೀಳ್ಯೆದೆಲೆ ರಫ್ತು ಮಾಡಲು ರೈತರಿಗೆ ನೆರವು ನೀಡುತ್ತಿದೆ. ಇದರಿಂದ ಭೌಗೋಳಿಕ ಸೂಚಕಪಟ್ಟಿಯಲ್ಲಿರುವ ಈ ಕೃಷಿ ಬೆಳೆಗಳನ್ನು ಬೆಳೆಯಲು ರೈತರಿಗೆ ಉತ್ತೇಜನ ನೀಡಲಾಗುತ್ತದೆ. ಇದರ ಲಾಭವನ್ನು ಅವರಿಗೆ ತಲುಪಿಸಲು ಕೆಲಸ ಮಾಡಲಾಗುತ್ತಿದೆ ಎಂದರು.
ರೈತರು ಬೆಳೆ ಕೃಷಿಗಳ ಉತ್ಪನ್ನಗಳ ಸಂಸ್ಕರಣೆಯಲ್ಲಿ ರೋಬಾಟಿಕ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಎಐ ತಂತ್ರಜ್ಞಾನವನ್ನೂ ಈಗಾಗಲೇ ಅಳವಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜೆಎಸ್‌ಎಸ್ ಎಐಇಆರ್ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಲೈಫ್ ಸೈನ್ಸ್ ಡೀನ್ ಡಾ.ಕೆ.ಎ.ರವೀಶ್, ಡಾ.ಪಿ.ವನೀತಾರೆಡ್ಡಿ, ಪೂಜಾ ಇದ್ದರು.