ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿ ಸಂದೀಪ್ ಅಪಹರಣ ಮತ್ತು ಬೆದರಿಕೆ ಹಾಕಿರುವ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸ್ಪೋಟಕ ಅಂಶಗಳು ಬೆಳಕಿಗೆ ಬಂದಿದ್ದು, ಇಬ್ಬರು ಉದ್ಯಮಿಗಳ ಜತೆ ಪ್ರಭಾವಿ ಮಹಿಳೆಯೊಬ್ಬರ ಕೈವಾಡ ಪತ್ತೆಯಾಗಿದೆ.
ಉದ್ಯಮಿಗಳ ಜತೆಗೆ ಆ ಮಹಿಳೆಗೂ ಸದ್ಯದಲ್ಲೇ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನಟ ದರ್ಶನ್ ವಿರುದ್ಧ ಸಾಕ್ಷಿ ನುಡಿಯಬಾರದು ಎಂದು ಕೊಲೆ ಪ್ರಕರಣದ ಸಾಕ್ಷಿಯಾಗಿರುವ ಸಂದೀಪ್ಗೆ ದರ್ಶನ್ ಆಪ್ತ ಪುನೀತ್ ಮೂಲಕ ಗೌರವ್ ಶೆಟ್ಟಿ ಮತ್ತು ಕಿರಣ್ ಸೂಚಿಸಿದ್ದರು. ಅದಕ್ಕೂ ಮೊದಲು ಗೌರವ್ ಶೆಟ್ಟಿ ಜತೆ ಆ ಮಹಿಳೆ, ಸಾಕ್ಷಿಗೆ ಬೆದರಿಕೆ ಹಾಕುವ ಕುರಿತು ರ್ಚಚಿಸಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಪುನೀತ್, ಕಿರಣ್ ಮತ್ತು ಗೌರವ್ ಶೆಟ್ಟಿ ಮೂವರೂ ವಾಟ್ಸ್ಆಪ್ ಕಾನ್ಪೆರೆನ್ಸ್ ಕಾಲ್ನಲ್ಲಿದ್ದರು ಎಂಬುದು ಎಫ್ಎಸ್ಎಲ್ ವರದಿಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಚಿತ್ರದುರ್ಗದಲ್ಲಿ ಬಾರ್ವೊಂದರಲ್ಲಿ ಸಂದೀಪ್ ಕ್ಯಾಷಿಯರ್ ಆಗಿದ್ದರು. ರೇಣುಕಸ್ವಾಮಿ ಅಪಹರಣ ಮಾಡಿದ ಗ್ಯಾಂಗ್ ಇದೇ ಬಾರ್ನಲ್ಲಿ ಮದ್ಯ ಸೇವಿಸಿತ್ತು. ಹೀಗಾಗಿ ದರ್ಶನ್ ವಿರುದ್ಧ ಸಾಕ್ಷಿ ಹೇಳಲು ಮುಂದಾದಾಗ ಸಂದೀಪ್ನನ್ನು ಪುನೀತ್ ಮತ್ತು ತಂಡ ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು, ಬೆದರಿಕೆ ಹಾಕಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ಪುನೀತ್, ಸುಹಾಸ್, ವೇಣು ಎಂಬುವರನ್ನು ಬಂಧಿಸಿದ್ದರು. ನಂತರದ ತನಿಖೆಯಲ್ಲಿ ಪುನೀತ್ ಮೊಬೈಲ್ ಜಪ್ತಿ ಮಾಡಿ ವಾಟ್ಸ್ಆಪ್ ಕರೆ ಮತ್ತು ಸಂದೇಶ ಸಂಗ್ರಹಿಸಿದಾಗ ಗೌರವ್ ಶೆಟ್ಟಿ, ಕಿರಣ್ ಜತೆ ಆ ಪ್ರಭಾವಿ ಮಹಿಳೆ ಸಂಭಾಷಣೆ ನಡೆಸಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಹೇಳಿದಂತೆ ಕೇಳಿ ಎಂದ ಮಹಿಳೆ: ಎಫ್ಎಸ್ಎಲ್ ವರದಿಯ ಪ್ರಕಾರ, ಈ ಕೃತ್ಯದ ಮೊದಲು ಪುನೀತ್ಗೆ ಪ್ರಭಾವಿ ಮಹಿಳೆಯೊಬ್ಬರಿಂದ ಕರೆ ಬಂದಿತ್ತು. ಗೌರವ್ ಶೆಟ್ಟಿ ಮತ್ತು ಕಿರಣ್ ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೆ ಮಾಡು ಎಂದು ಆ ಮಹಿಳೆ ಪುನೀತ್ಗೆ ಸೂಚಿಸಿದ್ದರು. ಅದರಂತೆ ಪುನೀತ್ ತನ್ನ ಸಹಚರರ ಜತೆ ಸಂದೀಪ್ನನ್ನು ಅಪಹರಿಸಿ ಬೆದರಿಕೆ ಹಾಕಿದ್ದರು.
ಪ್ರಕರಣದ 19ನೇ ಪ್ರಾಸಿಕ್ಯೂಷನ್ ಸಾಕ್ಷಿಯ ಪಾಟಿ ಸವಾಲು ಪ್ರಕ್ರಿಯೆ ವೇಳೆ ನಾನು ಇರುವುದು ಬಹಳ ಅನಿವಾರ್ಯ. ಅದರಂತೆ ನ್ಯಾಯಾಲಯಕ್ಕೆ ಖುದ್ದು ಹಾಜರಾತಿಗೆ ಅನುಮತಿಸುವಂತೆ ನೀಡಬೇಕೆಂದು ಆರೋಪಿ ನಟ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಬುಧವಾರ (ಆ.12)ಕ್ಕೆ ಮುಂದೂಡಲಾಗಿದೆ. ದರ್ಶನ್ ಅರ್ಜಿಗೆ, ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದರು. ಜತೆಗೆ 10ನೇ ಆರೋಪಿ ವಿನಯ್, ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು 14ನೇ ಆರೋಪಿ ಪ್ರದೋಷ್ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಿಸಿ 2ನೇ ಆರೋಪಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ನ್ಯಾಯಾ ಲಯ, ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ದರ್ಶನ್ಗೆ ಒಂದು ವಾರ ಕಾಲಾವಕಾಶ ನೀಡಿದೆ. ಒಂದು ವಾರ ಮಾಫಿ ಸಾಕ್ಷಿಗೆ ಅವಕಾಶವಿಲ್ಲ. ಅಲ್ಲಿಯವರೆಗೂ ಪ್ರದೋಷ್ಗೆ ಜೈಲು ಅಧಿಕಾರಿಗಳು ರಕ್ಷಣೆ ಒದಗಿಸಬೇಕು ಹಾಗೂ ಪ್ರತ್ಯೇಕ ಕೊಠಡಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಬೇಕು ಎಂದು ನಿರ್ದೇಶನ ನೀಡಿದೆ.
ಪ್ರದೋಷ್ ಪರ ವಕೀಲರು, ನಮ್ಮ ಕಕ್ಷಿದಾರ ಮಾಫಿ ಸಾಕ್ಷಿ ಆಗಲು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಬೇಕು ಹಾಗೂ ವಿಚಾರಣೆ ಮುಂದೂಡದಂತೆ ಮನವಿ ಮಾಡಿಕೊಂಡರು. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ ಉಭಯ ವಕೀಲರ ವಾದಗಳನ್ನು ಆಲಿಸಿದ ನ್ಯಾಯಾಲಯ, ಸಹ ಆರೋಪಿಗಳಿಗೆ ಮೇಲ್ಮನವಿ ಸಲ್ಲಿಸಲು ಆ.18ರವರೆಗೆ ಕಾಲಾವಕಾಶ ನೀಡಿ ಆದೇಶಿಸಿತು.