ರೈತ ಸಂಘಟನೆಗಳು  
ರಾಜ್ಯ

ಕರ್ನಾಟಕ ಬಂದ್ ಮುಂದೂಡುವುದು ಸೂಕ್ತ: ರೈತ ಸಂಘಟನೆಗಳು ಅಭಿಪ್ರಾಯ- It is advisable to postpone the Karnataka bandh

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು, ಆ.13ರಂದು ಕರೆ ನೀಡಿದ್ದ ‘ಕರ್ನಾಟಕ ಬಂದ್’ ಮುಂದೂಡುವುದು ಸೂಕ್ತ ಎಂದು ರೈತ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ಸಮಿತಿ, ಶುಕ್ರವಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ‘ಕಾವೇರಿ ನೀರಿನ ಹಂಚಿಕೆಯ ಸಮಸ್ಯೆ ಹಾಗೂ ವಿವಾದಗಳ’ ಕುರಿತು ಸಮಾಲೋಚನಾ ಸಭೆಯಲ್ಲಿ
ಜನರು,ರೈತರ ಹಿತದೃಷ್ಟಿಯಿಂದ ಕರ್ನಾಟಕ ಬಂದ್’ ಸದ್ಯದ ಪರಿಸ್ಥಿತಿಯಲ್ಲಿ ಸಾಧುವಲ್ಲ, ಹೀಗಾಗಿ, ಬಂದ್ ಮುಂದೂಡುವುದು ಸೂಕ್ತ ಎಂದು ರೈತರ ಸಂಘಟನೆಗಳು ನಿರ್ಣಯ ತೆಗೆದುಕೊಂಡಿವೆ. ಇದಕ್ಕೂ ಮುನ್ನ ಸಭೆಯಲ್ಲಿ ಮೇಕೆದಾಡು, ಕಾವೇರಿ ನೀರಿನ ವಿವಾದಗಳ ಕುರಿತು ನೀರಾವರಿ ತಜ್ಞರು, ರೈತರು ಬೆಳಕು ಚೆಲ್ಲಿದರು.
ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಸಮಿತಿಯ ಸಂಚಾಲಕ ಕುರುಬೂರು ಶಾಂತಕುಮಾರ್ ಮಾತನಾಡಿ, ಕಳೆದ ಒಂದು ವಾರದಲ್ಲಿ ಕಬಿನಿ ಜಲಾಶಯದಿಂದ ಕನಿಷ್ಠ 15 ಟಿಎಂಸಿ ನೀರು ತಮಿಳುನಾಡಿಗೆ ಹರಿಸಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಆದೇಶಕ್ಕಿಂತ ಅಧಿಕವಾಗಿ ನೀರು ಹರಿದುಹೋಗಿದೆ. ಪ್ರಸ್ತುತ ಪ್ರತಿದಿನ 2 ಟಿಎಂಸಿ ಹೆಚ್ಚುವರಿ ನೀರು ಬಿಡಲಾಗುತ್ತಿದೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 106 ಅಡಿಗೆ ಏರಿಕೆಯಾಗಿದೆ. ನಾಲೆಗಳಿಗೆ ನೀರು ಹರಿಸಲಾಗಿರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಂದ್ ಮುಂದೂಡುವುದು ಸೂಕ್ತ ಎಂದರು.
ಸಮಿತಿಯ ಮತ್ತೊಬ್ಬ ಸಂಚಾಲಕ ಮತ್ತು ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕಬಿನಿ, ಹೇಮಾವತಿ, ಹಾರಂಗಿ ಹಾಗೂ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ರೈತರ ಕೃಷಿ ಚಟುವಟಿಕೆಗೆ ತಕ್ಷಣವೇ ನೀರು ಹರಿಸಬೇಕು. ಕನ್ನಡ, ನೆಲ-ಜಲ ಚಳುವಳಿಗಳಲ್ಲಿ ಭಾಗವಹಿಸಿದ್ದ ಹೋರಾಟಗಾರರ ಮೇಲೆ ದಾಖಲಾಗಿರುವ ಎಲ್ಲ ಕೇಸ್‌ಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಸಭೆಯಲ್ಲಿ ಕನ್ನಡ ಚಳುವಳಿ ಮುಖಂಡರಾದ ಜಿ.ಆರ್.ರಮೇಶ್, ಗುರುದೇವ್ ನಾರಾಯಣ ಕುಮಾರ್, ರಾಜ್ಯ ಕಬ್ಬು ಬೆಳಗಾರ ಸಂಘದ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.
2 ರಾಜ್ಯ ಸಿಎಂಗಳು ಮಾತುಕತೆ ನಡೆಸಿ:
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ಸಿಎಂಗಳು ಸೌಹಾರ್ದಯುತವಾಗಿ ಮಾತುಕತೆ ನಡೆಸಬೇಕು. ಎರಡು ರಾಜ್ಯಗಳ ತಜ್ಞರು, ರೈತ ಮುಖಂಡರ ಒಳಗೊಂಡ ಸಮನ್ವಯ ಸಮಿತಿ ರಚಿಸಿ, ಸಂಕಷ್ಟದ ಸಮಯದಲ್ಲಿ ತುರ್ತು ಸಭೆ ನಡೆಸಿ ಚರ್ಚಿಸಲು ಅನುಕೂಲವಾಗುವಂತೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಕಬಿನಿ ಜಲಾಶಯಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಕೂಡಲೇ ಬಾಗಿನ ಅರ್ಪಿಸಬೇಕು. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ರೈತರೇ ಈ ಕಾರ್ಯ ನಡೆಸಲಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ವಾಸಿಸುವ ವಿವಿಧ ರಾಜ್ಯಗಳ ಪರಭಾಷಿಕರು, ರಾಜ್ಯದ ನೆಲ-ಜಲ ವಿಚಾರ ಬಂದಾಗ ನಿರ್ಲಕ್ಷ್ಯ ವಹಿಸದೆ ನಾಡಿನ ಹಿತಕ್ಕಾಗಿ ಹೋರಾಟಕ್ಕೆ ಬೆಂಬಲ ನೀಡಬೇಕು. ಎಲ್ಲ ಪಕ್ಷಗಳ ಶಾಸಕರು ಹಾಗೂ ಸಂಸದರು ಪಕ್ಷಾತೀತವಾಗಿ ಒಂದಾಗಿ ಹೋರಾಡ ನಡೆಸುವಂತಾಗಬೇಕು.
ಮುಖ್ಯಮಂತ್ರಿ ಚಂದ್ರು, ಮಾಜಿ ಶಾಸಕ.