ಅರಕಲಗೂಡಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮವನ್ನು ಶಾಸಕ ಎ.ಮಂಜು ಉದ್ಘಾಟಿಸಿದರು. ಕೆ.ಸಿ.ಸೌಮ್ಯಾ, ಪುಷ್ಪಲತಾ, ಶಿವಕುಮಾರ್, ಮಂಜುನಾಥ್ ಇತರರಿದ್ದರು.
- ಶಾಸಕ ಎ.ಮಂಜು
- ದೇವರಾಜ ಅರಸು ಭವನ
ಅರಕಲಗೂಡು: ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಶಾಸಕ ಎ.ಮಂಜು ಹೇಳಿದರು.
ಪಟ್ಟಣದ ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದೆ. ಸಂವಿಧಾನದ ಆಶಯದಂತೆ ನಾವೆಲ್ಲರೂ ಮುನ್ನಡೆಯಬೇಕು. ಸಾಮಾನ್ಯ ಜನರು ನೆಮ್ಮದಿಯ ಜೀವನ ನಡೆಸಲು ಪ್ರಜಾಪ್ರಭುತ್ವ ಆಡಳಿತ ಮಹತ್ವದ ಪಾತ್ರ ವಹಿಸುತ್ತದೆ. ಈ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದ್ದು, ತಮ್ಮ ಕ್ಷೇತ್ರದ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನದ ಪುಸ್ತಕವನ್ನು ನೀಡುವುದಾಗಿ ತಿಳಿಸಿದರು.
ಪ್ರಜಾಪ್ರಭುತ್ವದ ಮಹತ್ವ ಸಾರುವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರಾಗಿರುವುದು ಸರಿಯಲ್ಲ. ಸಂವಿಧಾನದಡಿಯಲ್ಲಿ ಕರ್ತವ್ಯ ನಿರ್ವಹಿಸಿ ಸಂಬಳ ಪಡೆಯುವ ಅಧಿಕಾರಿಗಳು ಇಂತಹ ಮಹತ್ವದ ಕಾರ್ಯಕ್ರಮಗಳಿಗೆ ಹಾಜರಾಗಬೇಕಿತ್ತು. ಅಲ್ಲಾ ರೀ, ಸಂವಿಧಾನದ ಅಡಿಯಲ್ಲಿ ಸಂಬಳ ತೆಗೆದುಕೊಳ್ಳಲ್ವಾ ಅವರು? ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ದಿನಾಚರಣೆಯಂತಹ ಮಹತ್ವದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಅಧಿಕಾರಿಗಳು ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಅನ್‌ಫಿಟ್ ಎಂದು ಕಿಡಿಕಾರಿದ ಅವರು, ಕಾರ್ಯಕ್ರಮಕ್ಕೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕೆ.ಸಿ.ಸೌಮ್ಯಾ ಮಾತನಾಡಿ, ಪ್ರಜಾಪ್ರಭುತ್ವ ನಮ್ಮ ದೇಶದ ಕಿರೀಟವಿದ್ದಂತೆ. ಅದಕ್ಕೆ ಪ್ರತಿಯೊಬ್ಬರೂ ಗೌರವ ನೀಡಬೇಕು. ವಿವಿಧ ಭಾಷೆ, ಜಾತಿ ಹಾಗೂ ಸಮುದಾಯಗಳನ್ನು ಒಳಗೊಂಡಿರುವ ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಹಾಗೂ ಹಕ್ಕುಗಳನ್ನು ಕಲ್ಪಿಸಿರುವುದು ಪ್ರಜಾಪ್ರಭುತ್ವದ ವಿಶೇಷತೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಪುಷ್ಪಲತಾ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪಿ. ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ಚಂದ್ರಶೇಖರ್ ಇತರರಿದ್ದರು.