ಸರಗೂರು ತಾಲೂಕಿನ ಹಳಿಯೂರು ಗ್ರಾಮದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ರೈತರು ಪಾಲ್ಗೊಂಡಿದ್ದರು. 
ರಾಜ್ಯ

ಕಂದಾಯ ಭೂಮಿಗೆ ಸಾಗುವಾಳಿ ಚೀಟಿ ವಿತರಿಸಿ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷ ವೆಂಕಟೇಶ್
  • ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಿಯೂರು ಗ್ರಾಮ

ಸರಗೂರು:

ಪಟ್ಟಣದ ಸರ್ವೇ ನಂ.50 ಹಾಗೂ ಹುಸ್ಕೂರು ಗ್ರಾಮದ ಸರ್ವೇ ನಂ.47 ಮತ್ತು 36ರಲ್ಲಿ ಒಟ್ಟು ಸುಮಾರು 600 ರಿಂದ 650 ಎಕರೆ ಕಂದಾಯ ಭೂಮಿಯನ್ನು ಬಹು ಕಾಲದಿಂದ ಉಳುಮೆ ಮಾಡುತ್ತಿದ್ದು, ದಾಖಲೆಗಳಿಲ್ಲದ ಕಾರಣ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷ ವೆಂಕಟೇಶ್ ಹೇಳಿದರು.

ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಿಯೂರು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಸಾಗುವಾಳಿ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಹಳಿಯೂರು ಗ್ರಾಮದ ಸರ್ವೇ ನಂ.50ರಲ್ಲಿ 303 ಎಕರೆ, ಹುಸ್ಕೂರು ಗ್ರಾಮದ ಸರ್ವೇ ನಂ.47ರಲ್ಲಿ 83 ಎಕರೆ ಹಾಗೂ ಸರ್ವೇ ನಂ.36ರಲ್ಲಿ 311 ಎಕರೆ ಸೇರಿದಂತೆ ಒಟ್ಟು ಸುಮಾರು 697 ಎಕರೆ ಭೂಮಿಯಲ್ಲಿ ಹಲವು ವರ್ಷಗಳಿಂದ ರೈತರು ಕೃಷಿ ಮಾಡುತ್ತಿದ್ದಾರೆ. ಈ ಭೂಮಿಯಲ್ಲಿ ಅನುಭವ ಹೊಂದಿರುವ ರೈತರು ನಮೂನೆ 53 ಮತ್ತು 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಸಾಗುವಾಳಿ ಚೀಟಿ ವಿತರಿಸಿಲ್ಲ ಎಂದು ದೂರಿದರು.
ಕಾಡಂಚಿನ ಪ್ರದೇಶವಾಗಿರುವುದರಿಂದ ಬೆಳೆ ನಷ್ಟವಾದ ಸಂದರ್ಭಗಳಲ್ಲಿ ದಾಖಲೆಗಳ ಕೊರತೆಯಿಂದ ಸರ್ಕಾರದ ಪರಿಹಾರ ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಧಿಕಾರಿಗಳಿಗೆ ಸೂಚನೆ ನೀಡಿ ಸಾಗುವಾಳಿ ಚೀಟಿ ಕೊಡಿಸಲು ಶಾಸಕರು ಮುಂದಾಗಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಸರಗೂರು ಬ್ಲಾಕ್ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ ಮಾತನಾಡಿ, ನನಗೆ 45 ವರ್ಷ ತುಂಬಿದರೂ ಇನ್ನೂ ಸಾಗುವಳಿ ಚೀಟಿ ದೊರೆತಿಲ್ಲ. ತಹಸೀಲ್ದಾರ್ ಅವರನ್ನು ಕೇಳಿದರೆ ಅರಣ್ಯ ಇಲಾಖೆ ಎನ್‌ಒಸಿ ನೀಡಿಲ್ಲ ಎಂದು ಹೇಳುತ್ತಾರೆ. ಕೆಲವರ ಅರ್ಜಿಗಳು ದರಖಾಸ್ತು ಸಮಿತಿಯಲ್ಲಿ ಅನುಮೋದನೆಗೊಂಡು ಕಿಮ್ಮತ್ತು ಪಾವತಿಸಿದ್ದರೂ ಸಾಗುವಾಳಿ ಚೀಟಿ ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಈ ಕುರಿತು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರೆ ಎಸಿ ಬಳಿ ಹೋಗುವಂತೆ ಮೌಖಿಕವಾಗಿ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಈ ಭಾಗದ ಎಲ್ಲ ರೈತರು ಒಂದಾಗಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಕಚೇರಿಗಳ ಎದುರು ಹೋರಾಟ ಮಾಡಲಿದ್ದಾರೆ ಎಂದರು.
ವೇದಿಕೆಯ ಶಿವರಾಜು, ಗೋಪಾಲರಾಜು, ಹಳಿಯೂರು, ದಡದಹಳ್ಳಿ ಹಾಗೂ ಹಳೆಹೆಗ್ಗುಡಿಲು ಗ್ರಾಮದ ಅರ್ಜಿದಾರರು, ಸೇರಿದಂತೆ ಹಲವರು ಉಪಸ್ಥಿತರಿದ್ದರು.