Siddaganga Sri | ಸಚಿವ ಈಶ್ವರ ಬಿ ಖಂಡ್ರೆ ಅಧಿಕೃತ ನಿವಾಸಕ್ಕೆ ತೆರಳಿ ಆಶೀರ್ವದಿಸಿದ ಸಿದ್ದಗಂಗಾಮಠದ ಸಿದ್ದಲಿಂಗ ಶ್ರೀಗಳು
ಬೆಂಗಳೂರು: ಯಾರೂ ಬಯಸದ ಅರಣ್ಯ ಖಾತೆಯಲ್ಲಿ ಹೇಗೆ ಅತ್ಯುತ್ತಮವಾಗಿ ಕೆಲಸ ಮಾಡಬಹುದು ಎಂಬುದನ್ನು ನಿರೂಪಿಸಿ ತೋರಿಸಿರುವ ಈಶ್ವರ ಖಂಡ್ರೆ ಅವರು, ತಮಗೆ ಯಾವುದೇ ಹುದ್ದೆ ನೀಡಿದರೂ ಅದನ್ನು ನಿಭಾಯಿಸಲು ಅವರು ಸಮರ್ಥರಾಗಿದ್ದಾರೆ ಎಂದು ತುಮಕೂರು ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಅಭಿಪ್ರಾಯಪಟ್ಟಿದ್ದಾರೆ.
ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಈಶ್ವರ ಬಿ ಖಂಡ್ರೆ ಅಧಿಕೃತ ನಿವಾಸಕ್ಕೆ ಆಗಮಿಸಿ ಆಶೀರ್ವದಿಸಿದ ಶ್ರೀಗಳು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಕೊಟ್ಟ ಕುದುರೆಯನೇರಲರಿಯದವ ವೀರನೂ ಅಲ್ಲ, ಧೀರನೂ ಅಲ್ಲ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಆದರೆ ಈಶ್ವರ ಖಂಡ್ರೆ ಅವರು ವೀರರು ಮತ್ತು ಶೂರರು ಆಗಿದ್ದು, ಅರಣ್ಯ ಸಚಿವರಾಗಿ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಮುಕ್ತವಾಗಿ ಶ್ಲಾಘಿಸಿದರು.
ಈಗ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಅವರು, ನಾಡಿನ ಜನತೆಯ ಒಳಿತಿಗಾಗಿ ಇನ್ನೂ ಉತ್ತಮವಾಗಿ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಲಿದ್ದಾರೆ ಎಂಬ ಪೂರ್ಣ ವಿಶ್ವಾಸ ನಮಗಿದೆ. ಯಾವುದೇ ಒಬ್ಬ ಜನಪ್ರತಿನಿಧಿಗೆ ಜನಹಿತವೇ ಮುಖ್ಯವಾಗಿರುತ್ತದೆ. ಲಿಂಗೈಕ್ಯ ಭೀಮಣ್ಣ ಖಂಡ್ರೆ ಅವರು ಕೂಡ ಸದಾ ಜನಪರವಾಗಿದ್ದರು. ಈಶ್ವರ ಖಂಡ್ರೆ ಅವರು ಸಹ ಅದೇ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ, ನೂತನ ಸರ್ಕಾರವು ಜನರಿಗಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿ ಹಾಗೂ ನಾಡಿನ ಜನರೆಲ್ಲರಿಗೂ ಒಳಿತಾಗಲಿ ಎಂದು ಶ್ರೀಗಳು ಹಾರೈಸಿದರು. ಈ ಶುಭ ಸಂದರ್ಭದಲ್ಲಿ ಸಚಿವ ಈಶ್ವರ ಖಂಡ್ರೆ ಅವರ ಧರ್ಮಪತ್ನಿ ಡಾ. ಗೀತಾ ಖಂಡ್ರೆ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.