ನಂಜನಗೂಡು ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಈಶ ಗ್ರಾಮೋತ್ಸವ-2026, ಕ್ಲಸ್ಟರ್ ಮಟ್ಟದ ಗ್ರಾಮೀಣ ಕ್ರೀಡಾಕೂಟ ಸಮಾರಂಭವನ್ನು ಪ್ರಾಂಶುಪಾಲ ಡಾ.ಸಿ.ಎಸ್.ಹೊನ್ನೇಗೌಡ ಉದ್ಘಾಟಿಸಿದರು. ವಿದ್ಯಾಶರ್ಮ, ಸುಬ್ರಹ್ಮಣ್ಯ, ಸುಜಾತಾ ಆರ್.ಶೆಟ್ಟಿ, ಪಿ.ವಿಕ್ರಮ್, ಡಾ.ಮೋಹನ್‌ಸಿಂಗ್, ನಂಜುಂಡೇಶ್ವರ, ಉಮಾಶಂಕರ್ ಇತರರು ಇದ್ದರು.  
ರಾಜ್ಯ

ಈಶಾ ಗ್ರಾಮೋತ್ಸವ ಹಳ್ಳಿಗಾಡಿನ ಪ್ರತಿಭೆಗಳಿಗೆ ವೇದಿಕೆ

ನಂಜನಗೂಡು: ಈಶಾ ಗ್ರಾಮೋತ್ಸವವು ಅತಿ ದೊಡ್ಡ ಕ್ರೀಡಾ ಹಬ್ಬವಾಗಿದ್ದು, ಜನರನ್ನು ಒಗ್ಗೂಡಿಸುವ ಗ್ರಾಮೋತ್ಸವ ನಿರಂತರವಾಗಿರಲಿ ಎಂದು ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್.ಹೊನ್ನೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಈಶಾ ಫೌಂಡೇಶನ್ ಔಟ್‌ರೀಚ್ ಹಾಗೂ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ಭಾನುವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಈಶಾ ಗ್ರಾಮೋತ್ಸವ-2026, ಕ್ಲಸ್ಟರ್ ಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ವೇದಿಕೆ ಒದಗಿಸಿ, ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ಮಾಡುವುದು ಗ್ರಾಮೋತ್ಸವದ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ ಕ್ರೀಡಾಪಟುಗಳು ಯಾವುದೇ ಭೇದವಿಲ್ಲದೆ ಒಗ್ಗೂಡಿ ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಒಗ್ಗಟ್ಟನ್ನು ಕಾಪಾಡಬೇಕೆನ್ನುವ ಸಂದೇಶ ಸಾರುವ ವೇದಿಕೆ ಇದಾಗಿದೆ ಎಂದು ಹೇಳಿದರು.
ಈಶಾ ಫೌಂಡೇಶನ್ ಸಂಚಾಲಕಿ ಸುಜಾತಾ ಮಾತನಾಡಿ, ಈಶ ಗ್ರಾಮೋತ್ಸವವು ಕ್ರೀಡೆಯ ಮೂಲಕ ಕ್ರೀಡಾ ಕ್ರೀಡಾಪಟುಗಳನ್ನು ಒಂದೆಡೆ ತಂದು, ಗ್ರಾಮಾಂತರ ಪ್ರದೇಶಗಳಲ್ಲಿ ಸಾಮಾಜಿಕವಾಗಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮುಂದುವರಿಸುತ್ತಿದೆ ಎಂದರು.

ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಈಶಾ ಫೌಂಡೇಶನ್‌ನನ್ನು ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹಕ ಸಂಸ್ಥೆ ಎಂದು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಇದು ಪ್ರತಿಭಾವಂತ ಕ್ರೀಡಾಪಟುಗಳು ಉತ್ಸಾಹವನ್ನು ಬಿಂಬಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾಶರ್ಮ, ಸುಬ್ರಹ್ಮಣ್ಯ, ಸುಜಾತಾ ಆರ್.ಶೆಟ್ಟಿ, ಪಿ.ವಿಕ್ರಮ್, ಡಾ.ಮೋಹನ್‌ಸಿಂಗ್, ನಂಜುಂಡೇಶ್ವರ, ಉಮಾಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.
ಬಹುಮಾನ ವಿಜೇತರು: ಪುರುಷರ ವಾಲಿಬಾಲ್ ಪಂದ್ಯದಲ್ಲಿ ಹೊಸಹುಂಡಿಯ ಚಾಮುಂಡಿ ಬಾಯ್ಸ ತಂಡ ಪ್ರಥಮ ಸ್ಥಾನ ಪಡೆದರೆ, ಕಳಲೆ ಅಪ್ಪು ಬಾಯ್ಸ ತಂಡ ದ್ವಿತೀಯ , ಕೆ.ಆರ್.ನಗರದ ಮಿತಿಲಾ ಮಿರ್ಲೆ ತಂಡ ತೃತೀಯ ಮತ್ತು ದೇವರಾಯಶೆಟ್ಟಿಪುರ ಹೋಲಿ ಸ್ಪೈರ್ಸ್‌ ತಂಡ ನಾಲ್ಕನೇ ಸ್ಥಾನವನ್ನು ಪಡೆದುಕೊಂಡವು. ಅಲ್ಲದೆ ಥ್ರೋ ಬಾಲ್‌ನ ಮಹಿಳಾ ವಿಭಾಗದಲ್ಲಿ ಯಡತಲೆ ಚಾಮುಂಡಿ ಬಾಲಕಿಯರ ತಂಡ ಮೊದಲ ಸ್ಥಾನ, ಕಳಲೆ ಚಾಮುಂಡೇಶ್ವರಿ ತಂಡ ಎರಡನೇ ಸ್ಥಾನ, ತೀ.ನರಸೀಪುರ ತಂಡ ಮೂರನೇ ಸ್ಥಾನ ಹಾಗೂ ಕಳಲೆ ಲಕ್ಷ್ಮೀಕಾಂತ ತಂಡ ನಾಲ್ಕನೇ ಸ್ಥಾನ ಪಡೆದವು. ವಿವಿಧ ಗ್ರಾಮಗಳಿಂದ ಒಟ್ಟು 290 ಪರುಷ ಮತ್ತು ಮಹಿಳಾ ವಾಲಿಬಾಲ್ ಅಟಗಾರರು ಪಾಲ್ಗೊಂಡಿದ್ದರು.