- ನಮ್ಮ ಬಳಿ ಹಣವಿಲ್ಲ ಎಂದು ಬಿಜೆಪಿ ಹೇಳುತ್ತೆ
- ಹಣವಿಲ್ಲದಿದ್ದರೆ 2000 ಕೋಟಿ ರೂ. ಅಭಿವೃದ್ಧಿ ಕೆಲಸಗಳು ಹೇಗೆ ಸಾಧ್ಯ?
- ಬಿಜೆಪಿ ನಾಯಕರ ಮಾತಿಗೆ ಸಿಎಂ ತಿರುಗೇಟು
ಚಿಕ್ಕಬಳ್ಳಾಪುರ: ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೆಚ್ಚ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುತ್ತಿದ್ದೇವೆ. ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಬಿಟ್ಟರೆ ಬೇರೇನೂ ಹೇಳಲು ಬರುವುದಿಲ್ಲ. ಸುಳ್ಳೇ ಅವರ ಮನೆ ದೇವರು ಎಂದು ಸಿಎಂ ಸಿದ್ದರಾಮಯ್ಯ ಒತ್ತಿ ಹೇಳಿದರು.
ಇಂದು ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, "ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ. ನಾವು ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿದ್ದೆವು. ಅದರಂತೆ ನಡೆದಿದ್ದೇವೆ. ಸರ್ಕಾರದಲ್ಲಿ ಯಾವುದೇ ಬದಲಾವಣೆ ಮಾಡುವ ಸಂಬಂಧ ನಮ್ಮಲ್ಲಿ ಹೈಕಮಾಂಡ್‌ನವರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಹಾಗೂ ಡಿ.ಕೆ.ಶಿವಕುಮಾರ್ ಒಪ್ಪಬೇಕು" ಎಂದರು.
"ಹೈಕಮಾಂಡ್ ಅನ್ನು ಐದು ತಿಂಗಳ ಹಿಂದೆ ಭೇಟಿಯಾದಾಗ ಸಚಿವ ಸಂಪುಟ ಪುನರ್ ರಚನೆ ಮಾಡಲು ಸೂಚನೆ ನೀಡಿದ್ದರು. ನಾನು ಎರಡೂವರೆ ವರ್ಷ ತುಂಬಿದ ನಂತರ ಮಾಡೋಣ ಎಂದು ತಿಳಿಸಿದ್ದೆ. ಈಗ ಏನು ಸೂಚನೆ ನೀಡುತ್ತಾರೋ ಅದರಂತೆ ನಡೆಯುತ್ತೇನೆ" ಎಂದು ಸಿಎಂ ಹೇಳಿದರು.