ಎಚ್. ಎ ಇಕ್ಬಾಲ್ ಹುಸೇನ್, ರಾಮನಗರ ಕ್ಷೇತ್ರದ ಶಾಸಕ.
- ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ
- ಡಿಕೆಶಿ ಅವರನ್ನು ಸಿಎಂ ಮಾಡುವಂತೆ ಮನವಿ
- ಹೈ ಕಮಾಂಡ್ ನಿಂದಲೂ ಸ್ಪಂಧನೆ
- 6 ಮತ್ತು 9 ಡಿಕೆಶಿ ಅದೃಷ್ಟ ಸಂಖ್ಯೆ
ರಾಮನಗರ: ಸಿಎಂ - ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ನಂತರವೂ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕದನ ಮುಂದುವರಿದಿದೆ. ಒಂದು ಹೆಜ್ಜೆ ಮುಂದೆ ಸಾಗಿರುವ ರಾಮನಗರ ಶಾಸಕ ಎಚ್.ಎ ಇಕ್ಬಾಲ್ ಹುಸೇನ್, ಜ.6ರಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತ ಎನ್ನುವ ಮೂಲಕ ಚರ್ಚೆಗೆ ಮತ್ತೊಂದು ಆಯಾಮ ನೀಡಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಇಕ್ಬಾಲ್ ಹುಸೇನ್, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣ ಇಲ್ಲ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ನಮ್ಮ ಪಕ್ಷದ ಆಸ್ತಿ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮೆಲ್ಲರ ಕನಸು, ಈ ಕನಸು ಜ.6ರಂದು ಶೇ.99ರಷ್ಟು ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ ಇಕ್ಬಾಲ್ ಹುಸೇನ್, ಯಾರು ಏನೇ ಹೇಳಲಿ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ. ನಮ್ಮಲ್ಲಿ ಸಂಖ್ಯಾಬಲದ ಪ್ರಶ್ನೆಯೇ ಇಲ್ಲ. ಶಿಸ್ತು ಬದ್ಧ ಪಕ್ಷವಾಗಿದ್ದು, ಹೈ ಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ ಎಂದರು.
ನಾಳೆ ದೆಹಲಿಗೆ
ವೋಟ್ ಚೋರಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಹಲವಾರು ಮಂದಿ ಶಾಸಕರು ಮತ್ತು ಮುಖಂಡರು ದೆಹಲಿಗೆ ತೆರಳುತ್ತಿದ್ದೇವೆ. ದೆಹಲಿ ಭೇಟಿ ಹೋರಾಟಕ್ಕಷ್ಟೇ ಸೀಮಿತಿ, ಹೈ ಕಮಾಂಡ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಡಿ.ಕೆ.ಶಿವಕುಮಾರ್‌ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು, ಅವರಿಗೆ ಅವಕಾಶ ಕೊಡಬೇಕು ಎನ್ನುವ ಬೇಡಿಕೆಯನ್ನು ಈಗಾಗಲೇ ವರಿಷ್ಠರ ಮುಂದೆ ಇಟ್ಟಿದ್ದೇವೆ. ಇದಕ್ಕೆ ಸ್ಪಂದನೆ ಕೂಡಾ ಸಿಕ್ಕಿದೆ, ಶೀಘ್ರವೇ ತೀರ್ಮಾನವೂ ಹೊರಬೀಳಿದೆ ಎಂದು ಇಕ್ಬಾಲ್ ಹೇಳಿದರು.
ಯತ್ನಾಳ್ ಈಗ ಉಚ್ಚಾಟಿತ
ಬಿಜೆಪಿ ಹೈಕಮಾಂಡ್ ನಾಯಕರನ್ನು ಡಿ.ಕೆ.ಶಿವಕುಮಾರ್ ಸಂಪರ್ಕ ಮಾಡಿದ್ದರು ಎನ್ನುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೂ ತಿರುಗೇಟು ನೀಡಿದ ಇಕ್ಬಾಲ್ ಹುಸೇನ್, ವಿರೋಧ ಪಕ್ಷದವರಿಗೆ ನಮ್ಮನ್ನು ಟೀಕಿಸುವುದೇ ಕೆಲಸ, ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಹೇಳಿಕೊಳ್ಳಬಹುದು. ಸತ್ಯವಿದ್ದರಷ್ಟೇ ಜನತೆ ಸ್ವೀಕಾರ ಮಾಡುತ್ತಾರೆ. ಯತ್ನಾಳ್ ಅವರಿಗೆ ಈಗ ಏಕೆ ಇಂತಹ ಪರಿಸ್ಥಿತಿ ಬಂದಿದೆ. ಈಗ ಯಾವ ಸ್ಥಾನ ಇದೆ ಎನ್ನುವುದನ್ನು ಅವರು ಮೊದಲು ತಿಳಿದು ಕೊಳ್ಳಬೇಕು. ಬಿಜೆಪಿಯಿಂದ ಉಚ್ಚಾಟನೆ ಆಗಿ, ಈಗ ಹಿಂದಿನ ಸೀಟ್‌ನಲ್ಲಿ ಕುಳಿತಿರುವುದನ್ನು ಅವರು ಮರೆಯಬಾರದು ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಅವರಿಗೆ 6 ಮತ್ತು 9 ಎರಡೂ ಅದೃಷ್ಟ ಸಂಖ್ಯೆಗಳು. ಅವರು ಜ.6ರಂದು ಈ ರಾಜ್ಯದ ಮುಖ್ಯಮಂತ್ರಿ ಆಗುವುದು ಶೇ.99ರಷ್ಟು ಖಚಿತ. ನಮ್ಮ ಬೇಡಿಕೆ ಈಗಾಗಲೇ ಹೈ ಕಮಾಂಡ್ ಅಂಗಳದಲ್ಲಿ ಇದೆ. ಶೀಘ್ರವೇ ತೀರ್ಮಾನವೂ ಬರಲಿದೆ.
ಎಚ್.ಎ.ಇಕ್ಬಾಲ್ ಹುಸೇನ್, ಶಾಸಕ, ರಾಮನಗರ ವಿಧಾನಸಭೆ ಕ್ಷೇತ್ರ.