ಚಿತ್ತಾಪುರ ತಾಲೂಕಿನ ದಂಡೋತಿ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿಶಾಲೆಗೆ ಮಾಜಿ ಶಾಸಕ ರಾಜಕುಮಾರ ಪಾಟೀಲ್​ ನೇತೃತ್ವದ ಬಿಜೆಪಿ ನಿಯೋಗ ಭೇಟಿ ನೀಡಿ ಪಾಲಕರೊಂದಿಗೆ ಚರ್ಚಿಸಿ ಹಲವು ಮಾಹಿತಿ ಪಡೆಯಿತು. ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್​, ಮಾಜಿ ಸಚಿವ ಬಾಬುರಾವ ಚವ್ಹಾಣ್​, ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಇದ್ದರು. 
ರಾಜ್ಯ

1 ಕೆಜಿ ಬೇಳೆ 300 ಮಕ್ಕಳಿಗೆ ಸಾಲುತ್ತಾ ?

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ರಾಜಕುಮಾರ ಪಾಟೀಲ್​ ಆಕ್ರೋಶ
  • ದಂಡೋತಿ ಮುರಾರ್ಜಿ ವಸತಿಶಾಲೆಗೆ ಬಿಜೆಪಿ ನಿಯೋಗ ಭೇಟಿ
ಚಿತ್ತಾಪುರ: ದಂಡೋತಿ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತ ವಸತಿಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳಿದ್ದು, ಅವರಿಗೆ 1 ಕೆಜಿ ಬೇಳೆಯಲ್ಲಿ ಸಾಂಬಾರು, 10 ಕೆಜಿ ತರಕಾರಿಯಲ್ಲಿ ಪಲ್ಯೆ ಹಾಗೂ 2 ಲೀಟರ್​ ಹಾಲಿನಲ್ಲಿ ಚಹಾ ಮಾಡಿದರೆ ಯಾರಿಗೆ ಸಾಲುತ್ತದೆ ಎಂದು ವಾರ್ಡನ್​ ಅವರನ್ನು ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ತರಾಟೆಗೆ ತೆಗೆದುಕೊಂಡರು.
ಮುರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಕಳಪೆ ಆಹಾರ ಹಾಗೂ ಕಲುಷಿತ ನೀರು ಸೇವನೆಯಿಂದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಬಿಜೆಪಿ ನಿಯೋಗ ಬುಧವಾರ ಹಾಸ್ಟೆಲ್​ಗೆ ಭೇಟಿ ನೀಡಿ ಭೋಜನಾಲಯ, ಮಕ್ಕಳ ಕೋಣೆ ಸೇರಿ ವಿವಿಧೆಡೆ ಪರಿಶೀಲನೆ ನಡೆಸಿ, ಆಹಾರ ಧಾನ್ಯ ಹಾಗೂ ತರಕಾರಿ ಕಳ್ಳತನವಾಗುತ್ತಿದೆ. ಕಳಪೆ ಅಕ್ಕಿ, ಗೋಧಿ, ಬೇಳೆ, ಹಿಟ್ಟು ಸೇರಿ ಅನೇಕ ವಸ್ತುಗಳು ವಸತಿಶಾಲೆಗೆ ಬರುತ್ತಿದೆ. ಇದರಲ್ಲಿ ಆಹಾರ ಧಾನ್ಯ ಸರಬರಾಜು ಮಾಡುವವರು ಮತ್ತು ವಾರ್ಡನ್​ ಹಾಗೂ ಇಲಾಖೆ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಶಾಮೀಲಾಗಿದ್ದಾರೆ. ಆಹಾರ ಧಾನ್ಯ ಸರಬರಾಜು ಮಾಡುವವರ ಹೆಸರು ಬ್ಲ್ಯಾಕ್​ ಲಿಸ್ಟ್​ನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.
ಕೆಲ ಕೋಣೆಗಳಿಗೆ ಬಾಗಿಲಿಲ್ಲ. ಫ್ಯಾನ್​ಗಳಿಲ್ಲ. ಮಕ್ಕಳ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆಯಿಲ್ಲ. ಅವಧಿ ಮುಗಿದ ಔಷಧಗಳು ಮಕ್ಕಳಿಗೆ ನೀಡಲಾಗುತ್ತಿದೆ. ಅಲ್ಲದೆ ಎರಡು ತಿಂಗಳಿಂದ ಕನ್ನಡ ಭಾಷೆ ಶಿಕ್ಷಕರಿಲ್ಲದೆ ಶಿಕ್ಷಣದ ಮೇಲೆ ಹೊಡೆತ ಬೀಳುತ್ತಿದೆ. ವಾರ್ಡನ್​ಗೆ ಸಮಸ್ಯೆ ಹೇಳಿಕೊಂಡರೆ ಟಿಸಿ ಕೊಟ್ಟು ಕಳಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂಬ ದೂರಿದೆ. ಕೇವಲ ವಸತಿಶಾಲೆ ಪ್ರಾಚಾರ್ಯ ಹಾಗೂ ವಾರ್ಡನ್​ ಅವರನ್ನು ಅಮಾನತು ಮಾಡಿದರೆ ಸಾಲದು, ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಕಲುಷಿತ ನೀರು, ಕಲಬೆರಕೆ ಆಹಾರ ನೀಡುವುದು ನಿಲ್ಲಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳನ್ನು ನಮ್ಮ ನಿಯೋಗ ಭೇಟಿ ಮಾಡಿ ಸೌಲಭ್ಯಗಳು ಕಲ್ಪಿಸುವಂತೆ ಮನವಿ ಮಾಡಲಿದೆ. ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಅವರ ಸ್ವಕ್ಷೇತ್ರದ ವಸತಿಶಾಲೆಯಲ್ಲಿ ಟನೆ ನಡೆದಿದ್ದು, ಇದುವರೆಗೆ ಶಾಲೆಗೆ ಭೇಟಿ ನೀಡಿಲ್ಲ. ರ್ಖಗೆ ಅವರು ಕ್ಷೇತ್ರದ ಬಗ್ಗೆ ಮೊದಲು ಗಮನಹರಿಸಲಿ, ಬಳಿಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಗತಿಗೆ ಚಿಂತಿಸಲಿ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​, ಶಾಸಕ ಡಾ.ಅವಿನಾಶ ಜಾಧವ್​ ಮಾತನಾಡಿದರು. ಪ್ರಭಾರಿ ವಾರ್ಡನ್​ ವಿಜಯಲಕ್ಷ್ಮಿ ಬಿರಾದಾರ ಮಾಹಿತಿ ನೀಡಿದರು.
ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಚಿವ ಬಾಬುರಾವ್​ ಚವ್ಹಾಣ್​, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್​, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪ್ರಮುಖರಾದ ಶರಣಪ್ಪ ತಳವಾರ, ಧರ್ಮಣ್ಣ ಇಟಗಿ, ಮಲ್ಲಿಕಾರ್ಜುನ ಎಮ್ಮೆನೋರ, ಸುರೇಶ ರಾಠೋಡ್​, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ವೀರಣ್ಣ ಯಾರಿ, ಗುಂಡು ಮತ್ತಿಮಡು, ಆನಂದ ಆಳಂದ, ಶರಣು ತೊಟ್ನಳ್ಳಿ ಇತರರಿದ್ದರು.
ಹೊಟ್ಟೆ ತುಂಬಾ ಊಟ ಕೊಡಿ, ಧಾನ್ಯ ಕಳವು ಬಿಡಿ
ಹಾಸ್ಟೆಲ್​ ಮಕ್ಕಳೊಂದಿಗೆ ನೀವು ಹೇಗೆಲ್ಲ ವರ್ತಿಸುತ್ತೀರಿ ಎಂಬುದು ನಮಗೆ ಗೊತ್ತಿದೆ. ಇಲ್ಲಿರುವ ವಿದ್ಯಾರ್ಥಿಗಳು ನಿಮ್ಮ ಮಕ್ಕಳಂತೆ, ಅವರಿಗೆ ಶುಚಿ ಹಾಗೂ ಗುಣಮಟ್ಟದ ಆಹಾರ ಕೊಡಿ. ನಮ್ಮ ನಿಯೋಗದ ಮುಂದೆಯೇ ಒಳ್ಳೆಯ ಊಟ ಕೋಡುತ್ತೇವೆಂದು ಹೇಳಿ ಎಂದು ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ತಾಕೀತು ಮಾಡಿದರು. ಈಗ ಬಿಜೆಪಿ ನಿಯೋಗ ವಸತಿಶಾಲೆಗೆ ಬಂದಿದೆ. ಸಬೂಬು ಹೇಳುವುದು ಬಿಡಿ. ಈಗಿನಿಂದಲಾದರೂ ಮಕ್ಕಳಿಗೆ ಗುಣಮಟ್ಟದ ಊಟ ಕೊಡಿ. ಊಟ ಹಾಗೂ ಸೌಲಭ್ಯಗಳಲ್ಲಿ ಸುಧಾರಣೆ ಮಾಡಿಕೊಳ್ಳಿ. ಮಕ್ಕಳಿಗೆ ಹೊಟ್ಟೆ ತುಂಬಾ ಕೊಡಬೇಕು. ಆಹಾರ ಧಾನ್ಯ ಕಳವು ಮಾಡುವುದನ್ನು ಬಿಡಬೇಕೆಂದು ಸೂಚನೆ ನೀಡಿದರು.