- ನಟನ ಬಗ್ಗೆ ಉಲ್ಲೇಖ ಇಲ್ಲ ಎಂದ ನಿರ್ಮಾಪಕರು
ಬೆಂಗಳೂರು: ಬಾಸ್ ಚಿತ್ರದ ಟೀಸರ್ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ಟನೆಗಳ ನಡುವೆ ಮೇಲ್ನೋಟಕ್ಕೆ ಸಾಮ್ಯತೆಗಳಿದ್ದು, ಇದು ಸಾಗಳ ಮೇಲೆ ಪ್ರಭಾವ ಬೀರಬಹುದು. ಮರಣದಂಡನೆ ಜಾರಿಗೊಳಿಸಿದ ನಂತರ ಅದನ್ನು ಹಿಂಪಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ ದರ್ಶನ್ ಪರ ವಕೀಲರು, ಅದೇ ರೀತಿಯಲ್ಲಿ ಚಿತ್ರ ಬಿಡುಗಡೆಯಿಂದ ನಟನಿಗೆ ಸರಿಪಡಿಸಲಾಗದ ಹಾನಿಯಾಗಲಿದೆ ಎಂದು ಹೈಕೋರ್ಟ್ನಲ್ಲಿ ವಾದಿಸಿದ್ದಾರೆ.
ಚಿತ್ರ ಬಿಡುಗಡೆಗೆ ಅನುಮತಿ ನೀಡಿದ ಮ್ಯಾಜಿಸ್ಟ್ರೆಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟ ದರ್ಶನ್ ದಂಪತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದಿಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಬಾಸ್ ಚಲನಚಿತ್ರ ಬಿಡುಗಡೆಯಾಗದಿದ್ದರೆ ಅದರ ನಿರ್ಮಾಪಕರಿಗೆ ಆರ್ಥಿಕ ನಷ್ಟ ಮಾತ್ರ ಆಗಲಿದೆ. ಆದರೆ, ಅದು ಬಿಡುಗಡೆಯಾದರೆ ನಟ ದರ್ಶನ್ ಅವರ ನ್ಯಾಯಾಯುತ ವಿಚಾರಣೆಯ ಹಕ್ಕಿಗೆ ಧಕ್ಕೆ ತರುತ್ತದೆ. ಚಿತ್ರ ತಂಡದ ಪ್ರಮಾಣಪತ್ರವೊಂದನ್ನೇ ಆಧಾರವಾಗಿಟ್ಟುಕೊಂಡು ವಿಚಾರಣಾ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು ತಪ್ಪು ಎಂದು ವಾದಿಸಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ನಿಮಾರ್ಪಕರ ವಾದ:
ಚಿತ್ರ ತಂಡದ ಪರವಾಗಿ ವಾದ ಮಂಡಿಸಿದ ವಕೀಲರು, ಬಾಸ್ ಚಿತ್ರವು ಸಂಪೂರ್ಣ ಕಾಲ್ಪನಿಕ ಕಥೆಯಾಗಿದ್ದು, ನಟ ದರ್ಶನ್ ಅವರ ಜೀವನಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದಲ್ಲಿ ನಟನ ಯಾವುದೇ ವೈಯಕ್ತಿಕ ಮಾಹಿತಿ, ಛಾಯಾಚಿತ್ರ ಅಥವಾ ಕುಟುಂಬದ ವಿವರಗಳನ್ನು ಬಳಸಲಾಗಿಲ್ಲ. ಅಲ್ಲದೆ, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ವಿಷಯಗಳನ್ನು ಚಲನಚಿತ್ರದಲ್ಲಿ ಚಿತ್ರಿಸುವುದರಿಂದ ವಿಚಾರಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದೆ ಸ್ಪಷ್ಟಪಡಿಸಿದೆ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ವಿಷಯಗಳ ಮೇಲೆ ಗೌಪ್ಯತೆಯ ಹಕ್ಕು ಸಾಧಿಸಲಾಗದು ಎಂದು ವಾದಿಸಿದರು.