ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ. 
ರಾಜ್ಯ

ಕಳಪೆ ಕಾಮಗಾರಿ ವಿರುದ್ಧ ಇರಸವಾಡಿ ಜನರ ಆಕ್ರೋಶ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಇರಸವಾಡಿ ಗ್ರಾಮದಲ್ಲಿನ ಚರಂಡಿ ಕಾಮಗಾರಿ ಕಳಪೆ
  • ಅಂದಾಜು ಪತ್ರದಲ್ಲಿರುವಂತೆ ಕೆಲಸ ಮಾಡಿಲ್ಲ
ಯಳಂದೂರು: ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದಲ್ಲಿನ ಚರಂಡಿ ಕಾಮಗಾರಿ ಕಳಪೆಯಾಗಿದ್ದು, ಅಂದಾಜು ಪತ್ರದಲ್ಲಿರುವಂತೆ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮದ ಪ್ರಮುಖ ರಸ್ತೆಯಿಂದ ಬೂದಂಬಳ್ಳಿ ಮೋಳೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ 2024-25ನೇ ಸಾಲಿನ ಮಳೆ ಪರಿಹಾರ ಯೋಜನೆಯಡಿ ಕೆಆರ್‌ಐಡಿಎಲ್‌ನಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಂತೆಯೇ ಅಂದಾಜು ಪತ್ರದಲ್ಲಿ 1.5 ಅಡಿ ಮಣ್ಣನ್ನು ತೋಡಬೇಕೆಂದು ತಿಳಿಸಲಾಗಿದ್ದು, ಇಲ್ಲಿ 0.5 ಅಡಿಯಷ್ಟೇ ಮಣ್ಣು ತೋಡಲಾಗಿದೆ. ಜತೆಗೆ ಗ್ರಾವೆಲ್ ಹಾಕಬೇಕೆಂಬ ನಿಯಮವಿದೆ. ಆದರೆ, ಯಾವುದೇ ಗ್ರಾವೆಲ್ ಹಾಕಿಲ್ಲ. ತೆಗೆದ ಮಣ್ಣನ್ನೇ ಮತ್ತೆ ಹಾಕಿದ್ದಾರೆ ಎಂದು ಸ್ಥಳೀಯರು ಕಿಡಿಕಾರಿದರು.
ರಸ್ತೆಗೆ ದೊಡ್ಡ ಜಲ್ಲಿ ಹಾಕಿ ಕಾಂಕ್ರೀಟ್ ಮಿಶ್ರಣ ಮಾಡಿದ ನಂತರ ತಳವನ್ನು ಭದ್ರಪಡಿಸಿ ನೀರು ನಿಲ್ಲದಂತೆ ವಾಟೆ ಕೊಟ್ಟು ಚರಂಡಿ ನಿರ್ಮಿಸಬೇಕೆಂದು ಎಸ್ಟಿಮೇಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ ಇಲ್ಲಿ ಕೆಲಸ ನಿರ್ವಹಿಸುವ ಗುತ್ತಿಗೆದಾರ ತನಗೆ ಇಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ನಿರ್ಮಿಸಿರುವ ಚರಂಡಿಯಲ್ಲಿ ನೀರು ನಿಂತು ತ್ಯಾಜ್ಯ ತುಂಬಿದೆ. ಸರಿಯಾದ ಇಳಿಜಾರು ಇಲ್ಲದ ಕಾರಣ ನೀರು ಹರಿದು ಹೋಗುತ್ತಿಲ್ಲ. ತೋಡಿದ ಮಣ್ಣು ಮತ್ತು ಕಲ್ಲು ರಸ್ತೆಯ ಮೇಲೆಯೇ ಬಿಟ್ಟಿದ್ದು, ಓಡಾಡಲು ಕಷ್ಟವಾಗಿದೆ. ಪ್ರಸುತ್ತ ಮಳೆಗಾಲ ಪ್ರಾರಂಭವಾಗಿದ್ದು, ಕೆಆರ್‌ಐಡಿಎಲ್‌ನ ಜೆಇ, ಗುತ್ತಿಗೆದಾರ ಕಾಮಗಾರಿಯನ್ನು ಸರಿಯಾಗಿ ಮುಗಿಸಿಲ್ಲ. ಕೆಲಸ ಪ್ರಾರಂಭವಾಗಿ 15 ದಿನ ಕಳೆದಿದ್ದು, ಮಳೆ ಸುರಿದಿದ್ದರಿಂದ ನೀರು ನಿಂತು ಕೊಳೆತು ದುರ್ವಾಸನೆ ಹೆಚ್ಚಾಗಿದೆ. ಇದರೊಂದಿಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.
ಮಳೆ ಬಂದರೆ ನೀರು ಮನೆಯೊಳಗೆ ನುಗ್ಗುವ ಭೀತಿ ಇದೆ. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರೀಕ್ಷಿಸಬೇಕು. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು ಮರು ಕಾಮಗಾರಿ ಮಾಡಿಸಬೇಕು ಎಂದು ಗ್ರಾಮಸ್ಥರಾದ ಮಹದೇವಸ್ವಾಮಿ, ಕುಮಾರ್, ಹರೀಶ್, ಪ್ರತಾಪ್, ಮಹೇಶ್, ಪ್ರಸಾದ್, ಆನಂದ್, ರಜಿನಿ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದಲ್ಲಿ ಚರಂಡಿ ಕಾಮಗಾರಿ ಆರಂಭ ಹಂತದಲ್ಲಿದೆ. ಸ್ಥಳ ಪರಿಶೀಲಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾಮಗಾರಿ ಮಾಡಿಸಲಾಗುವುದು. ಅಲ್ಲದೆ ಎಸ್ಟಿಮೇಟ್‌ನಲ್ಲಿ ಇರುವಂತೆ ಕೆಲಸ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು.
ಅರುಣ್‌ಕುಮಾರ್ ಜೆಇ, ಕೆಐಆರ್‌ಐಡಿಎಲ್ ಚಾಮರಾಜನಗರ