IPL ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಟಗಾರರ ತಾಲೀಮು ಆರಂಭ: ಕೊಹ್ಲಿ ಬೆಂಗಳೂರಿಗೆ ಆಗಮನ  
ರಾಜ್ಯ

IPL ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಟಗಾರರ ತಾಲೀಮು ಆರಂಭ: ಕೊಹ್ಲಿ ಬೆಂಗಳೂರಿಗೆ ಆಗಮನ , ಅನ್‌ಬಾಕ್ಸ್ ರದ್ದು?,

ಬೆಂಗಳೂರು: ಪ್ರತಿಷ್ಠಿತ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ್ದರೂ, ಆಟಗಾರರು ಮತ್ತು ಪ್ರೇಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಕ್ರೀಡಾಂಗಣದಲ್ಲಿ ಆಸನಗಳ ಸಂಪೂರ್ಣ ಭರ್ತಿಗೆ ಬದಲು ಶೇ.80 ಹಾಜರಾತಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಇದರ ಜತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಫ್ರಾಂಚೈಸಿ ,ಪಂದ್ಯ ಆಯೋಜಕ ಪಾಲುದಾರರಿಗೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕ್ರೀಡಾಂಗಣದ ಸಂಪೂರ್ಣ ಭರ್ತಿಗೆ ಅನುಮತಿ ನಿರಾಕರಿಸಿರುವ ತಜ್ಞರ ಸಮಿತಿಯು 19ನೇ ಆವೃತ್ತಿಯಲ್ಲಿ ಲೀಗ್ ಮತ್ತು ಪ್ಲೇಆ್ ಪಂದ್ಯಗಳನ್ನು ನಡೆಸಲು ಅನುಮೋದನೆ ನೀಡಿದ್ದು, ಪಂದ್ಯಗಳ ಟಿಕೆಟ್ ಮಾರಾಟ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ನಡೆಸಲು ಕೆಎಸ್‌ಸಿಎ, ಆರ್‌ಸಿಬಿ ಫ್ರಾಂಚೈಸಿ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಸೇರಿ ಆಯೋಜಕರಿಗೆ ಸೂಚಿಸಿದೆ. ಈ ಪ್ರಕಾರ ಜನಸಂದಣಿಯ ನಿಯಂತ್ರಣಕ್ಕಾಗಿ, 35 ಸಾವಿರ ಆಸನ ಸಾಮರ್ಥ್ಯ ಹೊಂದಿರುವ ಚಿನ್ನಸ್ವಾಮಿಯಲ್ಲಿ ಒಮ್ಮೆಗೆ ಗರಿಷ್ಠ 28 ಸಾವಿರ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಉಳಿದಂತೆ ಪಂದ್ಯದ ಶೇ.80 ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಸೇಲಾಗಲಿದ್ದು, ಉಳಿದ ಶೇ.20 ಟಿಕೆಟ್‌ಗಳು ಮೂರು ದಿನ ಮುಂಚಿತವಾಗಿ ಆ್ಲೈನ್‌ನಲ್ಲಿ ಮಾರಾಟ ಮಾಡಬೇಕಿದೆ. ಆಸನ ಸಾಮರ್ಥ್ಯ ಕಡಿಮೆಯಾಗಿರುವುದರಿಂದ ಈ ಬಾರಿ ಪಂದ್ಯಗಳ ಟಿಕೆಟ್ ದರವೂ ಹೆಚ್ಚಳವಾಗುವ ನಿರೀಕ್ಷೆ ಇದೆ.
ಕೊಹ್ಲಿ ಬೆಂಗಳೂರಿಗೆ ಆಗಮನ
ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸತತ 19ನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಲಂಡನ್‌ನಿಂದ ಮಂಗಳವಾರ ರಾತ್ರಿ ಮುಂಬೈಗೆ ಆಗಮಿಸಿದ ಅವರು, ಬುಧವಾರ ಬೆಂಗಳೂರಿಗೆ ಬಂದಿಳಿದರು. ಐಪಿಎಲ್‌ಗೆ ಲಂಡನ್‌ನಲ್ಲಿ ಪೂರ್ವ ತಯಾರಿ ಆರಂಭಿಸಿದ್ದ ಕೊಹ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಭ್ಯಾಸದ ವಿಡಿಯೋ ಹಂಚಿಕೊಂಡಿದ್ದರು. ವಿಜಯೋತ್ಸವದ ಕಾಲ್ತುಳಿತ ದುರ್ಘಟನೆಯ ನಂತರ ಒಮ್ಮೆ ಮಾತ್ರ (ವಿಜಯ್ ಹಜಾರೆ ಟ್ರೋಫಿಗಾಗಿ ಬಿಸಿಸಿಐ ಸಿಒಇಗೆ) ಬೆಂಗಳೂರಿಗೆ ಆಗಮಿಸಿದ್ದ ಕೊಹ್ಲಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲಿದ್ದಾರೆ.
ಆರ್‌ಸಿಬಿ ಆಟಗಾರರ ತಾಲೀಮು ಆರಂಭ
ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದ ಕೆಲ ವಿದೇಶೀ ಆಟಗಾರರು ಹೊರತುಪಡಿಸಿ ಉಳಿದೆಲ್ಲ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಗ್ಗೂಡಿದ ಎಲ್ಲ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಇಂಗ್ಲೆಂಡ್‌ನ ಜೋರ್ಡನ್ ಕಾಕ್ಸ್, ಜಿತೇಶ್ ಶರ್ಮ, ವಿರಾಟ್ ಕೊಹ್ಲಿ, ಕೃನಾಲ್ ಪಾಂಡ್ಯ, ಸುಯಶ್ ಶರ್ಮ, ದೇವದತ್ ಪಡಿಕ್ಕಲ್, ಭುವನೇಶ್ವರ್ ಕುಮಾರ್ ಹಾಗೂ ವೆಂಕಟೇಶ್ ಅಯ್ಯರ್ ತಂಡ ಕೂಡಿಕೊಂಡಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಎಡಗೈ ವೇಗಿ ಯಶ್ ದಯಾಳ್ ಹಾಲಿ ಸೀಸನ್‌ನಲ್ಲಿ ಕಣಕ್ಕಿಳಿಯುವ ಬಗ್ಗೆ ಫ್ರಾಂಚೈಸಿ ಅಥವಾ ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಗುಟ್ಟಾಗಿ ಮದುವೆ ಆಗಿರುವ ಯಶ್ ದಯಾಳ್, ಮುಂಬೈನಲ್ಲಿ ಫ್ರಾಂಚೈಸಿ ಆಯೋಜಿಸಿದ್ದ ಪೂರ್ವಸಿದ್ಧತಾ ಶಿಬಿರದಿಂದಲೂ ದೂರವುಳಿದಿದ್ದರು.