ಬೆಂಗಳೂರು: ಉಚಿತವಾಗಿ ಟಿಕೆಟ್ ಕೇಳಿರುವುದು ತಪ್ಪು(IPL Free Ticket). ಪಂದ್ಯ ವೀಕ್ಷಣೆ ಮಾಡುವ ಆಸೆ ಇರುವವರು ವೈಯಕ್ತಿಕವಾಗಿ ಹಣ ಕೊಟ್ಟು ಹೋಗಿ ನೋಡಲಿ. ಇದು ಉತ್ತಮವಾದುದು ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು. ಶಾಸಕರಿಗೆ ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ಅದು ಮಹಾಪರಾಧ. ಐಪಿಎಲ್ ದುರ್ಘಟನೆ ಸಂದರ್ಭದಲ್ಲಿ ಅವರು ಯಾವ ರೀತಿ ವಾಗ್ದಾಳಿ ಮಾಡಿದ್ದರು, ಪದ ಬಳಸಿದ್ದರು ಎಂದು ತೆಗೆದು ನೋಡಲಿ. ಮೊದಲಿನಿಂದಲೂ ಟಿಕೆಟ್ ನೀಡುತ್ತಾ ಬಂದಿದ್ದಾರೆ. ಇದನ್ನು ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರು ಕೂಡ ಐಪಿಎಲ್ ಟಿಕೆಟ್ ಪಡೆದಿದ್ದಾರೆ. ಐಪಿಎಲ್ ರಾಷ್ಟ್ರವನ್ನು ಪ್ರತಿನಿಧಿಸುವ ಪಂದ್ಯಾವಳಿ ಅಲ್ಲ. ವಾಣಿಜ್ಯ ಉದ್ದೇಶಿತ ಪಂದ್ಯಾವಳಿ. ಇವುಗಳ ಬಗ್ಗೆ ಜನಪ್ರತಿನಿಧಿಗಳು ಹೆಚ್ಚು ಗಮನಹರಿಸುವುದು ಒಳ್ಳೆಯದಲ್ಲ” ಎಂದು ಹೇಳಿದರು.
ಬೆಂಗಳೂರಿನ ನಾಲ್ಕು ಕಡೆ ಕ್ರೀಡಾಂಗಣಗಳನ್ನು ನಿರ್ಮಿಸಬೇಕು
ಚಿನ್ನಸ್ವಾಮಿ ಕ್ರೀಡಾಂಗಣ ಬೇರೆಡೆ ಸ್ಥಳಾಂತರ ಮಾಡಬೇಕು ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಈಗಾಗಲೇ ನಾನು ಆಯ್ಕೆ ಮಾಡಿ, ಸೂಚಿಸಿದ ಜಾಗದಲ್ಲಿ ಹೊಸ ಕ್ರೀಡಾಂಗಣ ಮಾಡಲು ಸರ್ಕಾರ ಮನ್ನಣೆ ನೀಡಿದೆ. ಸೂರ್ಯ ಸಿಟಿಯಲ್ಲಿ ಕ್ರೀಡಾಂಗಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ನಾನೇ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕ್ರೀಡಾಂಗಣ ಮಾಡಬೇಕು. ಕಂಠೀರವ ಕ್ರೀಡಾಂಗಣ, ಕೆಎಸ್ ಸಿಎ, ಫುಟ್ಬಾಲ್ ಕ್ರೀಡಾಂಗಣ ಹೊರತಾಗಿ ಬೇರೆ ಯಾವುದೇ ಕ್ರೀಡಾಂಗಣವಿಲ್ಲ. ಇಷ್ಟು ದೊಡ್ಡ ಜನಸಂಖ್ಯೆ ಇರುವ ನಗರದಲ್ಲಿ ಯುವಕರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಬೇಕಾದರೆ ನಾಲ್ಕು ದಿಕ್ಕಿನಲ್ಲಿ ಕ್ರೀಡಾಂಗಣ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದೆ. ನಾನು ಲೋಕಸಭೆ ಸದಸ್ಯನಾಗಿದ್ದಾಗ, ನನ್ನದೇ ಕ್ಷೇತ್ರದ ಸೂರ್ಯ ಸಿಟಿಯಲ್ಲಿ 100 ಎಕರೆ ಮೀಸಲಿಡಬೇಕು ಎಂದು ಹೇಳಿದ್ದೆ. ನಂತರ ಅದನ್ನು ಮೀಸಲಿಟ್ಟು, ಯೋಜನೆ ಅನುಮೋದನೆ ಪಡೆಯಲಾಗಿತ್ತು.
ಈ ಬಗ್ಗೆ ನಾನು ಸಚಿವರಾದ ಜಮೀರ್ ಅಹ್ಮದ್, ಅಧ್ಯಕ್ಷರಾದ ಶಿವಲಿಂಗೇಗೌಡರನ್ನು ಭೇಟಿ ಮಾಡಿ ನಾನು ಹಾಗೂ ಶಾಸಕರಾದ ಶಿವಣ್ಣ ಅವರು ಚರ್ಚೆ ಮಾಡಿದ್ದೆವು. ಈಗ ಈ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ನೀಡಲಾಗಿದೆ. 50-60 ಎಕರೆ ಪ್ರದೇಶದಲ್ಲಿ ಅತ್ಯುತ್ತಮ ಕ್ರೀಡಾಂಗಣ ಆಗಲಿದೆ. ಬಿಡಿಎ ಮೂಲಕ ಶಿವರಾಮ ಕಾರಂತ ಬಡಾವಣೆಯಲ್ಲೂ ಕ್ರೀಡಾಂಗಣ ಮಾಡಬೇಕು ಎಂದು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಅಲ್ಲೂ 40 ಎಕರೆ ಮೀಸಲಿಡಲಾಗಿದೆ. ಬಿಡದಿಯಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಮೀಸಲಿಡಲು ಸಂಬಂಧಪಟ್ಟವರ ಜತೆ ಚರ್ಚೆ ಮಾಡುವೆ” ಎಂದು ತಿಳಿಸಿದರು.
ಪೆಟ್ರೋಲಿಯಂ-ರಸಗೊಬ್ಬರ ಅಭಾವ ಸೃಷ್ಟಿಯಾಗಬಹುದು
ಅಡುಗೆ ಅನಿಲ, ಇಂಧನ ತೈಲ ಸಮಸ್ಯೆ ವಿರುದ್ಧ ಕೋವಿಡ್ ಸಮಯದಲ್ಲಿ ಹೋರಾಡಿದಂತೆ ಹೋರಾಡಬೇಕು ಎಂಬ ಪ್ರಧಾನಮಂತ್ರಿಗಳ ಸಂದೇಶದ ಬಗ್ಗೆ ಕೇಳಿದಾಗ, “ಯಾವ ಸಮಸ್ಯೆ ಆಗುತ್ತಿದೆ, ಯಾವ ಸಮಸ್ಯೆ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಗೊತ್ತಿದೆ. ಒಟ್ಟಾರೆಯಾಗಿ ಇದೇ ಪರಿಸ್ಥಿತಿ ಮುಂದುವರಿದರೆ, ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಬೆಲೆ ಏರಿಕೆ ಬಿಸಿ ಭಾರತಕ್ಕೆ ಈಗಾಗಲೇ ತಟ್ಟಿದ್ದು, ಇನ್ನಷ್ಟು ತಟ್ಟಲಿದೆ. ಕೆಲವು ಉತ್ಪನ್ನಗಳ ಅಭಾವದಿಂದ ದರ ಏರಿಕೆಯಾದರೆ, ಮತ್ತೆ ಕೆಲವು ವಸ್ತುಗಳ ಬೆಲೆಯನ್ನು ಈ ಪರಿಸ್ಥಿತಿಯ ಲಾಭ ಪಡೆಯಲು ಏರಿಕೆ ಮಾಡಲಾಗಿದೆ. ಹೊಟೇಲ್ ಗಳು ಮಾತ್ರವಲ್ಲ. ಆಮದು ಮಾಡಿಕೊಳ್ಳುತ್ತಿರುವ ಎಲ್ಲಾ ವಸ್ತುಗಳ ಮೇಲೆ ಇದರ ಪರಿಣಾಮ ಬೀರುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ವಸ್ತುಗಳ ಉತ್ಪಾದನೆ ಕಡಿಮೆಯಾದರೆ ಬೆಲೆ ಏರಿಕೆಯಾಗುತ್ತದೆ. ಮುಂಗಾರು ಆರಂಭವಾಗಿ ಮಳೆ ಬೀಳಲು ಆರಂಭಿಸಿದರೆ ರಸಗೊಬ್ಬರದ ಮೇಲೂ ಇದು ಪರಿಣಾಮ ಬೀರಲಿದೆ. ಇದಕ್ಕೆ ಸರ್ಕಾರ ಸಜ್ಜಾಗಬೇಕು. 3 ತಿಂಗಳಿಗೆ ಆಗುವಷ್ಟು ದಾಸ್ತಾನು ಇರಬಹುದು. ಆದರೆ ಇಡೀ ಋತುವಿಗೆ ಸಾಲುವಷ್ಟು ದಾಸ್ತಾನು ಇಟ್ಟುಕೊಳ್ಳುವುದು ಕಷ್ಟ. ಇದಕ್ಕೆ ಅಗತ್ಯ ತಯಾರಿ ಮಾಡಬೇಕಾಗಿದೆ” ಎಂದರು.
ಗ್ಯಾಸ್ ಬಳಕೆ ಇಳಿಕೆಗೆ ಹಾಲು ಒಕ್ಕೂಟಗಳಿಗೂ ಸೂಚನೆ
ಇದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚು ವಾಹನ ಬಳಸುವುದನ್ನು ತಪ್ಪಿಸಬೇಕು. ನಮ್ಮ ಹಾಲು ಒಕ್ಕೂಟಕ್ಕೂ ಸಂದೇಶ ನೀಡಲಾಗಿದೆ. ಅನಿಲ ಬಳಕೆ ಪ್ರಮಾಣವನ್ನು 55% ಒಳಗೆ ಇಳಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. 100% ಬಳಸಿದರೆ 30% ಹೆಚ್ಚುವರಿ ವೆಚ್ಚ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ರೀತಿ ಮಾಡಿದರೆ ಇದರಿಂದ ಬೆಲೆ ಏರಿಕೆ ಮಾಡಬೇಕಾಗುತ್ತದೆ. ನಾವು ಕೂಡ ಅಗತ್ಯವಸ್ತುಗಳ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇಂತಹ ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ಜನ ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ” ಎಂದು ವಿವರಿಸಿದರು.