Satish Jarkiholi > ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವುದು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯಲ್ಲಿ ದೃಢಪಟ್ಟಿದೆ. ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆಯಲ್ಲಿ ಅಕ್ರಮವಾಗಿ ನಗದು ರೂಪದಲ್ಲಿ ದೊಡ್ಡಮೊತ್ತದಲ್ಲಿ ಹೂಡಿಕೆ ಮಾಡಿರುವುದು ಬಹಿರಂಗವಾಗಿದೆ. ಅಲ್ಲದೆ ಬಹುವಿದೇಶಿ ಕಂಪನಿಗಳಲ್ಲಿ ಪಾಲು ಹೊಂದಿರುವುದು ಸಾಬೀತಾಗಿರುವ ಬಹುತೇಕ ಹಿನ್ನೆಲೆಯಲ್ಲಿ ಇ.ಡಿ ಉರುಳು ಸುತ್ತಿಕೊಳ್ಳುವುದು ಗ್ಯಾರಂಟಿಯಾಗಿದೆ.
- 21 ಸ್ಥಳಗಳಲ್ಲಿ ನಡೆದ ಇ.ಡಿ. ಶೋಧದಲ್ಲಿ ಅಕ್ರಮ ಬಯಲು
- 3.30 ನಗದು, 15 ಲಕ್ಷ ವಿದೇಶಿ ಕರೆನ್ಸಿ ವಶ
- ಅಮೆರಿಕ ಡಾಲರ್ ಜತೆಯಲ್ಲೇ ಯೂರೋ ಕರೆನ್ಸಿ ಪತ್ತೆ
ಸತೀಶ್ ಜಾರಕಿಹೊಳಿ, ಅವರ ಆಪ್ತರು, ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ ಸೇರಿ 21 ಸ್ಥಳಗಳ ಮೇಲೆ ಇ.ಡಿ ನಡೆಸಿದ ದಾಳಿ ವೇಳೆ 3.30 ಕೋಟಿ ನಗದು, 15 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಅನ್ವಯ ನಡೆದ ಕಾರ್ಯಾಚರಣೆಯಲ್ಲಿ ಜಾರಕಿಹೊಳಿ ಕುಟುಂಬದ ಅಘೋಷಿತ ವಿದೇಶಿ ಹೂಡಿಕೆಗಳು, ಗಡಿ ದಾಟಿದ ವ್ಯವಹಾರ ಸಂಪರ್ಕಗಳು ಹಾಗೂ ಹಣಕಾಸು ಅಕ್ರಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇಡಿ ಅಧಿಕೃತವಾಗಿ ಮಾಹಿತಿ ನೀಡಿದೆ. ಚಿಕ್ಕೋಡಿ ಸಂಸದೆ, ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ, ಸಹೋದರಿ ಮಹಾದೇವಿ ಹಾಗೂ ಅವರ ಪತಿ, ಸಚಿವರ ಭಾವ ವೈ.ಡಿ. ಮಂಜುನಾಥ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಸೆ.9 ಮತ್ತು 10ರಂದು ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಇದರ ಜತೆ ಸಚಿವರ ಆಪ್ತ ಸಹಾಯಕರಾದಮಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠಲ್ ಹಾಗೂ ಡಾ. ಗಿರೀಶ್ ಸೋನ ವಾಲ್ಕರ್ ಸೇರಿ ಹಲವು ಆಪ್ತರಿಗೆ ಸೇರಿದ ಸ್ಥಳಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನದ ಗಣಿಯಲ್ಲಿ ಶೇ.40 ಪಾಲು!
ಸತೀಶ್ ಜಾರಕಿಹೊಳಿ ಅವರು ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿರುವ ಮ್ಯಾಗ್ನಿಟ್ಯೂಡ್ ಸ್ಟಾರ್ ಎಸ್‌ಎಆರ್‌ಎಲ್ ಸಂಸ್ಥೆಯಲ್ಲಿ ಶೇ.40 ಪಾಲು ಹೊಂದಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂಬುದನ್ನು ತನಿಖಾ ಸಂಸ್ಥೆ ಖಚಿತಪಡಿಸಿದೆ. ಆಫ್ರಿಕಾದಲ್ಲಿ ಗಣಿಗಾರಿಕೆ ಆಸ್ತಿ ಹೊಂದಿರುವ ಇತರೆ ವಿದೇಶಿ ಕಂಪನಿಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಜಪ್ತಿ ಮಾಡಿಕೊಂಡು ತನಿಖೆ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇ.ಡಿ ಹೇಳಿದ್ದೇನು..?
- ಸತೀಶ್ ಜಾರಕಿಹೊಳಿ ಕುಟುಂಬ ಸದಸ್ಯರ ಅಕ್ರಮ ವಹಿವಾಟು ಪತ್ತೆ
- ಆಫ್ರಿಕಾ ಖಂಡದ ವಿವಿಧ ದೇಶಗಳಲ್ಲಿರುವ ಗಣಿಗಾರಿಕೆಯಲ್ಲಿ ಹೂಡಿಕೆ
- ವಿದೇಶಿ ಸಂಸ್ಥೆಗಳಲ್ಲಿನ ಷೇರುಗಳಲ್ಲಿ ಪಾಲು ಹೊಂದಿರುವುದು ಸಾಬೀತು
- ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಹಾಗೂ ಮಹಾದೇವಿ ಮಂಜುನಾಥ್ ಪಾತ್ರ ದೃಢ
- ಎಲ್ಲೊರಾಡೊ ಮೈನಿಂಗ್ ರಿಸೋರ್ಸಸ್, ನವ ಔರಮ್ ಮೈನಿಂಗ್ ನಂಟು
- ಈ ಎರಡು ಸಂಸ್ಥೆ ಸೇರಿ ಹಲವು ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆ ದಾಖಲೆ ಬಯಲು
ಜಾರಕಿಹೊಳಿ ಬೆನ್ನಿಗೆ ನಿಂತ ಸಂಪುಟ
ಜಾರಿ ನಿರ್ದೇಶನಾಲಯದ ದಾಳಿ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ಇಡೀ ಸಚಿವ ಸಂಪುಟವೇ ನಿಂತಿದೆ. ಗುರುವಾರ ರಾತ್ರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಾರಕಿಹೊಳಿಯವರ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಸಮಾಲೋಚಿಸಿದರು. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವರಾದ ಕೆ.ಎಚ್. ಮುನಿಯಪ್ಪ, ಸಂತೋಷ್ ಲಾಡ್, ಕೆ.ಎಸ್. ಬಸವಂತಪ್ಪ ಸೇರಿದಂತೆ ಹಲವು ಸಚಿವರು, ಶಾಸಕರು ಭೇಟಿಯಾಗಿ ಚರ್ಚಿಸಿದರು. 'ಸತೀಶ್ ಯಾವುದೇ ತಪ್ಪು ಮಾಡಿಲ್ಲ, ಕಾನೂನಿನ ಚೌಕಟ್ಟಿನಲ್ಲೇ ವ್ಯವಹಾರ ಮಾಡಿದ್ದಾರೆ. ನಮ್ಮ ಪಕ್ಷದ ಮೂರ್ನಾಲ್ಕು ನಾಯಕರ ಮೇಲೆ ದಾಳಿ ಆಗುತ್ತದೆ. ಕೆಲವು ನಾಯಕರನ್ನು ಟ್ರ್ಯಾಪ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ.ವಿರೋಧ ಪಕ್ಷಗಳ ಮೇಲೆ ಏಕೆ ದಾಳಿ ಆಗುತ್ತಿಲ್ಲ? ಇದೆಲ್ಲ ರಾಜಕೀಯ ಪ್ರೇರಿತವಾಗಿದ್ದು, ನಾವು ಹೆದರುವುದಿಲ್ಲ' ಎಂದು ಸಿಎಂ ಡಿ.ಕೆ.ಶಿವಕುಮಾರ್ ಅಸಮಾಧಾನ ಹೊರಹಾಕಿದರು.
ನಮ್ಮ ಪಕ್ಷದ ಮೂರ್ನಾಲ್ಕು ನಾಯಕರ ಮೇಲೆ ದಾಳಿ ಆಗುತ್ತದೆ. ಕೆಲವು ನಾಯಕರನ್ನ ಟ್ರ್ಯಾಪ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಮ್ಮ ಪಕ್ಷವನ್ನ ಟಾರ್ಗೆಟ್ ಮಾಡಿದ್ದಾರೆ.
ಟೆಂಡರ್‌ಗಾಗಿ ಲಂಚ: ಖಾಸಗಿ ಕಂಪನಿ 'ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೆಟ್ ಲಿಮಿಟೆಡ್' (ಬಿವಿಇಪಿಎಲ್) ವಿರುದ್ಧ ಆರೋಪ ಕೇಳಿಬಂದಿದ್ದು, ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯಲು ಕಂಪನಿಯು ಭಾರಿ ಮೊತ್ತದ ಲಂಚ ಪಾವತಿಸಿತ್ತು. ಈ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ బివిఎపిఎలో ಸೇರಿದ ಕಚೇರಿ ಹಾಗೂ ಮಾಲೀಕರ ನಿವಾಸಗಳ ಮೇಲೂ ಶೋಧ ನಡೆಸಿರುವುದಾಗಿ ಇಡಿ ಮಾಹಿತಿ ನೀಡಿದೆ.
3.30 ಕೋಟಿ ರೂ ನಗದಿಗಿಲ್ಲ ಲೆಕ್ಕ
ಬೆಂಗಳೂರಿನ ಡಾಲರ್ಸ್ ಕಾಲನಿ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿರುವ ಸಚಿವರ ಕಚೇರಿ-ನಿವಾಸ ಸೇರಿ ಗೋಕಾಕ್, ಬೆಳಗಾವಿ ಹಾಗೂ ಇತರೆ ಸ್ಥಳಗಳಲ್ಲಿ ನಡೆದ ಶೋಧದ ವೇಳೆ ಲೆಕ್ಕಕ್ಕೆ ಸಿಗದ 3.30 ಕೋಟಿ ರೂ. ಪತ್ತೆಯಾಗಿದೆ. ಇದರೊಂದಿಗೆ ಸುಮಾರು 15 ಲಕ್ಷ ರೂ. ಮೌಲ್ಯದ ಅಮೆರಿಕನ್ ಡಾಲರ್, ಯುರೋ ಸೇರಿ ವಿದೇಶಿ ಕರೆನ್ಸಿ ಕೂಡ ಪತ್ತೆಯಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಕಾಂಗೋದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಭಾರಿ ಮೊತ್ತದ ಹೂಡಿಕೆ ಹಾಗೂ ವೆಚ್ಚಗಳನ್ನು ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಕ್ಕೆ ಹಲವು ಸಾಕ್ಷ್ಯಗಳು ಪತ್ತೆಯಾಗಿವೆ. ಅಕ್ರಮ ವ್ಯವಹಾರದ ಕುರಿತಾದ ದಾಖಲೆಗಳು, ಡಿಜಿಟಲ್ ಹಣಕಾಸು ವ್ಯವಹಾರಗಳ ವಿವರಗಳು ಹಾಗೂ ವಿದೇಶಿ ಕಂಪನಿಗಳ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಚಿವ ಸತೀಶ್ ಮೇಲಿನ ಇ.ಡಿ ದಾಳಿ ರಾಜಕೀಯ ಪ್ರೇರಿತ. ಇದನ್ನ ಎದುರಿಸಲು ಪಕ್ಷದ ಕಾರ್ಯಕರ್ತರಾಗಿ ತಯಾರಿದ್ದೇವೆ. ಎಲ್ಲ ಲೆಕ್ಕ ಕೊಡಲು ಸಿದ್ದರಿದ್ದು, ಕಾಂಗ್ರೆಸ್ ನಾಯಕರ ಮೇಲಷ್ಟೇ ದಾಳಿ ಏಕೆ? ವಿರೋಧ ಪಕ್ಷಗಳ ನಾಯಕರ ಮೇಲೆ ಯಾವುದೇ ದಾಳಿ ಆಗುತ್ತಿಲ್ಲವಲ್ಲ?
ಕೇಂದ್ರ ಸರ್ಕಾರಕ್ಕೆ ನಮ್ಮ ನಾಯಕರು ಹಾಗೂ ಮಿತ್ರ ಪಕ್ಷದ ಪ್ರಮುಖ ಮುಖಂಡರನ್ನ ಗುರಿಯಾಗಿಸಿಕೊಂಡು ಇಡಿ ಮೂಲಕ ದಾಳಿ ಮಾಡಿಸುವುದು ಕೆಲಸವಾಗಿದೆ. ಸತೀಶ್ ಜಾರಕಿಹೊಳಿ ಸರಿಯಾದ ಮಾಹಿತಿ ಒದಗಿಸಲಿದ್ದು, ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಕೆ.ಎಚ್.ಮುನಿಯಪ್ಪ ಸಮಾಜ ಕಲ್ಯಾಣ ಸಚಿವ
ಇ.ಡಿ. ಪ್ರಕರಣದಲ್ಲಿ ಸತೀಶ್ ಮುಕ್ತರಾಗಿ ಬರುತ್ತಾರೆ. ಜಾರಕಿಹೊಳಿ ಅವರ ಸಹೋದರನಾಗಿ ಅವರೊಂದಿಗೆ ಗಟ್ಟಿಯಾಗಿ ನಿಲ್ಲುತ್ತೇನೆ. ಅಲ್ಲದೆ ಇಡೀ ಕಾಂಗ್ರೆಸ್ ಪಕ್ಷ, ಮುಖಂಡರು ಹಾಗೂ ಲಕ್ಷಾಂತರ ಕಾರ್ಯಕರ್ತರು ಅವರ ಜತೆ ಇರಲಿದ್ದಾರೆ.ಸಂತೋಷ್ ಲಾಡ್ ಕಾರ್ಮಿಕ ಸಚಿವ
- ಅಕ್ರಮದ ಕುರಿತು ವಶಕ್ಕೆ ಪಡೆದಿರುವದಾಖಲೆ ಪುನಃ ಪರಿಶೀಲನೆ
- ಹಣದ ಮೂಲ, ಲೆಕ್ಕಪರಿಶೋಧಕರ ವರದಿ ಆಧರಿಸಿ ನೋಟಿಸ್
- ಆರೋಪ ಸಾಬೀತಾದರೆ ಆಪ್ತರು, ಕುಟುಂಬ ಸದಸ್ಯರ ಬಂಧನ?
- ಪ್ರಾಸಿಕ್ಯೂಷನ್‌ಗೆ ಗವರ್ನರ್ ಅನುಮತಿ ಪಡೆದು ಸಚಿವರ ಬಂಧನ?
- ಕೋಟ್ಯಂತರ ರೂ. ನಗದು ಪತ್ತೆ ಪ್ರಕರಣ ಐಟಿ ಇಲಾಖೆಗೆ ವರ್ಗಾವಣೆ
ಸಾಮಾನ್ಯವಾಗಿ ಇಡಿ ಅಧಿಕಾರಿಗಳ ದಾಳಿ ವೇಳೆ ವಿದೇಶದಲ್ಲಿ ಅಕ್ರಮ ಹೂಡಿಕೆ ಹಾಗೂ ಅಕ್ರಮ ಹಣ ವರ್ಗಾವಣೆ (ಪಿಎಎಂಎಲ್) ಕಾಯ್ದೆಯಡಿ ಶೋಧ ನಡೆಸುತ್ತವೆ. ಜಾರಕಿಹೊಳಿ ಮತ್ತು ಅವರ ಕುಟುಂಬಸ್ಥರ ಮೇಲೆ ನಡೆದ ದಾಳಿ ವೇಳೆ 'ಇಸಿಐಆರ್' ಅಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಕೋಟ್ಯಂತರ ರೂ. ಹಣ ದೊರಕಿರುವ ಕುರಿತು ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಮಹತ್ವದ ದಾಖಲೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಸಿಐಆರ್ (ಆಂತರಿಕವಾಗಿ ತನಿಖೆ ನಡೆಸಲು ದಾಖಲಿಸಿಕೊಳ್ಳುವ ಪ್ರಕರಣ) ಅಡಿ ಪ್ರಕರಣ ದಾಖಲಿಸಿಕೊಂಡಿತ್ತು ಎನ್ನಲಾಗಿದೆ.
ಏನಿದು ಇಸಿಐಆರ್..?
ಕ್ರಿಮಿನಲ್ ಪ್ರಕರಣಗಳಲ್ಲಿ ದಾಖಲಾಗುವ ಎಪ್ಐಆರ್ ಮಾದರಿಯಂತೆ ಇಸಿಐಆರ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಆದರೆ, ಈ ಪ್ರಕರಣದ ಕುರಿತು ಆರೋಪಿ ಅಥವಾ ದಾಳಿಗೊಳಗಾದವರಿಗೆ ಇಸಿಐಆರ್ ಕುರಿತು ಮಾಹಿತಿ ನೀಡುವುದು ಕಡ್ಡಾಯವೇನಿಲ್ಲ. ತನಿಖೆ ಮತ್ತು ವಿಚಾರಣೆ ಹಂತದಲ್ಲಿ ಬಹಿರಂಗಗೊಂಡರೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಈ ಕಾಯ್ದೆಯ ಮತ್ತೊಂದು ಗಮನಾರ್ಹ ಅಂಶವೆಂದರೆ ಇಸಿಐಆರ್ ಆಧರಿಸಿ ವ್ಯಕ್ತಿಯನ್ನು ಬಂಧಿಸುವ ಅಧಿಕಾರವನ್ನು ಇಡಿ ಹೊಂದಿದೆ.
ಶೀಘ್ರದಲ್ಲೇ ನೋಟಿಸ್ ಜಾರಿ
ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬಸ್ಥರ ಮನೆ ನಡೆದ ದಾಳಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಇಡಿ ಅಧಿಕಾರಿಗಳು ಸತೀಶ್ ಮತ್ತು ಅವರ ಪುತ್ರಿ, ಸಂಸದೆ ಪ್ರಿಯಾಂಕಾ ಸೇರಿ ಹಲವರಿಗೆ ಶೀಘ್ರದಲ್ಲೇ ನೋಟಿಸ್ ನೀಡುವ ಸಾಧ್ಯತೆ ಇದೆ.
3 ತಿಂಗಳಿನಿಂದ ಮಾಹಿತಿ ಸಂಗ್ರಹ
ಸತೀಶ್ ಜಾರಕಿಹೊಳಿ ಮತ್ತು ಅವರು ಕುಟುಂಬಸ್ಥರು, ಸಂಬಂಧಿಕರ ಮೇಲೆ ದಾಳಿ ನಡೆಸಲು ಕಳೆದ ಮೂರು ತಿಂಗಳಿಂದ ಇಡಿ ಸಿದ್ಧತೆ ನಡೆಸಿತ್ತು ಎನ್ನಲಾಗಿದೆ. ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಸಂಪತ್ತು ಸಂಗ್ರಹಣೆ ಆರೋಪದಡಿ ಕಳೆದ ಜೂನ್ 24ರಂದು ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ, ಅಬಕಾರಿ ಹೆಚ್ಚುವರಿ ಆಯುಕ್ತ ಮಂಜುನಾಥ್ ಸೇರಿ ಕೆಲ ಅಧಿಕಾರಿಗಳ ಕುಟುಂಬದ ಸದಸ್ಯರು, ವ್ಯವಹಾರದ ಪಾಲುದಾರರು ಹಾಗೂ ಸಹಚರರಿಗೆ ಸೇರಿದ ನಿವಾಸಗಳು, ಕಚೇರಿಗಳು ಸೇರಿ ರಾಜ್ಯದ 14 ಸ್ಥಳಗಳ ಮೇಲೆ ಏಕಕಾಲಕ್ಕೆ ಇಡಿ ದಾಳಿ ನಡೆಸಿತ್ತು. ಈ ವೇಳೆ 5.5 ಕೋಟಿ ರೂ.ನಗದು, ಅಂದಾಜು 7.8 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು, 3.3 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಗಳು ಸೇರಿ ಒಟ್ಟು 13.3 ಕೋಟಿ ರೂ. ಮೌಲ್ಯದ ಆದಾಯ ಪತ್ತೆಯಾಗಿತ್ತು.